ದಾವಣಗೆರೆ: ರಾಜ್ಯ ಸರ್ಕಾರಿ ನೌಕರರಂತೆ ಅರ್ಹ ಗುತ್ತಿಗೆ ಆಧಾರಿತ ನೌಕರರಿಗೆ 6ನೇ ವೇತನ ಆಯೋಗದ ವೇತನ ಶ್ರೇಣಿ ಮತ್ತು ಸೌಲಭ್ಯ, ವಿಮಾ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರಕಾರಿ ದಿನಗೂಲಿ ನೌಕರರ ಮಹಾಮಂಡಲದ ನೇತೃತ್ವದಲ್ಲಿ ದಿನಗೂಲಿ ನೌಕರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದರು.
ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಪಂಜಾಬ್ ಸರ್ಕಾರ ಮತ್ತು ಜಗಜಿತ್‌ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ 2016ರ ಅ. 26 ರಂದು ನೀಡಿರುವ ಮಹತ್ವದ ತೀರ್ಪಿನ ಅನ್ವಯ ಕಾಯಂ ನೌಕರರಂತೆ ಅರ್ಹ ದಿನಗೂಲಿ ನೌಕರರಿಗೆ ಪೂರ್ವಾನ್ವಯವಾಗುವಂತೆ ವೇತನ, ಸೌಲಭ್ಯ ನೀಡಬೇಕು.
ಅರ್ಹ ದಿನಗೂಲಿ ನೌಕರರಿಗೆ ಸಹ 6ನೇ ವೇತನ ಆಯೋಗದ ವೇತನ ಶ್ರೇಣಿ ಮತ್ತು ಸೌಲಭ್ಯ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಗುತ್ತಿಗೆ ನೌಕರರು ಕನಿಷ್ಠ ವೇತನದಿಂದಲೂ ವಂಚಿತರಾಗಿದ್ದಾರೆ. ಗುತ್ತಿಗೆ ನೌಕರರಿಗೆ ಪೂರ್ವಾನ್ವಯವಾಗುವಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಗುತ್ತಿಗೆ ಆಧಾರಿತ ನೌಕರರನ್ನು ಕಾಯಂ ನೌಕರರರನ್ನಾಗಿಸಬೇಕು. ಹೊರ ಮತ್ತು ಒಳ ಗುತ್ತಿಗೆ ಪದ್ಧತಿಯನ್ನೇ ರದ್ದುಪಡಿಸುವ ಮೂಲಕ ಗುತ್ತಿಗೆ ನೌಕರಿ ಮುಕ್ತ ರಾಜ್ಯ ಮಾಡಬೇಕು. ಆ ಹಿನ್ನೆಲೆಯಲ್ಲಿ ಗುತ್ತಿಗೆ ನೌಕರರಿಗೆ ಕಾಯಂ ನೌಕರಿ ಭಾಗ್ಯ ನೀಡಬೇಕು ಎಂದು ಒತ್ತಾಯಿಸಿದರು.
ಈಗ ಚಾಲ್ತಿಯಲ್ಲಿರುವ ಗುತ್ತಿಗೆ ನೌಕರರ ನೇರ ನೇಮಕಾತಿ ಪ್ರಕ್ರಿಯೆ ಕೈ ಬಿಡುವುದು, ಗುತ್ತಿಗೆ ಅವಧಿ ಮುಗಿದಿದ್ದಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದವರನ್ನೇ ಮುಂದುವರೆಸುವುದು, ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜಿನಲ್ಲಿ 10-15 ವರ್ಷದಿಂದ ದುಡಿಯುತ್ತಿರುವ ಡಿ ಗ್ರೂಪ್ ನೌಕರರು ಪೂರ್ಣಕಾಲಿಕ ಡಿ ಗ್ರೂಪ್ ನೌಕರರೆಂದು ಕಾಯಂಗೊಳಿಸುವುದು, ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣ ಜಲ ಭಾಗ್ಯ ನೀರಾವರಿ ನಿಗಮ ಮುಂತಾದ ನಿಗಮ ಮತ್ತು ನೀರಾವರಿ ಇಲಾಖೆ, ಸ್ಥಳೀಯ ಸಂಸ್ಥೆಗಳ ಗುತ್ತಿಗೆ ಆಧಾರಿತ ನೌಕರರಿಗೆ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಸರಕಾರಿ ದಿನಗೂಲಿ ನೌಕರರ ಮಹಾಮಂಡಲದ ಜಿಲ್ಲಾ ಅಧ್ಯಕ್ಷ ಕೆ.ವಿ.ಚಂದ್ರಹಾಸ್, ಜಿಲ್ಲಾ ಸಂಚಾಲಕ ಪಿ.ಜಿ. ಮರುಳಸಿದ್ದಪ್ಪ, ಎ.ಕೆ. ಅಂಜಿನಪ್ಪ ಇತರರು ನೇತೃತ್ವ ವಹಿಸಿದ್ದರು.