ಕೊಪ್ಪಳ: ಸಾಲ ಮನ್ನಾ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ, ಬರ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ರೈತರು ಬೆಳೆ ವಿಮೆ ತುಂಬುತ್ತಿದ್ದಾರೆ. ಆದರೆ ಸರಿಯಾಗಿ ವಿಮೆ ಮೊತ್ತ ಬರುತ್ತಿಲ್ಲ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರ ಚಿಂತನೆ ನಡೆಸಿ ರೈತರಿಗೆ ಆಗುತ್ತಿರುವ ಅನ್ಯಾಯ ತಡೆಯಬೇಕು. ಕೃಷ್ಣಾ ಬಿ ಸ್ಕೀಂ ಯೋಜನೆ ಜಾರಿಗೊಳಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯ ಎಲ್ಲ ಹಳ್ಳಿಗಳಿಗೂ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಜಿಲ್ಲೆಯಲ್ಲಿ ಜಿಂಕೆ ಹಾವಳಿ ತಡೆದು ರೈತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಹೆಚ್ಚಿದೆ. ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ಜಿಲ್ಲೆಯಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವಿನ ಪೂರೈಕೆ ಮಾಡಿಲ್ಲ. ಮೇವು ಇಲ್ಲದೇ ಜಾನುವಾರುಗಳು ನರಳುತ್ತಿವೆ. ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಬರ ನಿರ್ವಹಣೆಗೆ ಸರ್ಕಾರ, ಜಿಲ್ಲಾಡಳಿತ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಡಿಸಿ ಕಚೇರಿ ಎದುರು ಧರಣಿ ನಡೆಸಿದರು.
Advertisement
ರಾಜ್ಯ ಸರ್ಕಾರ ಯಾವುದೇ ಷರತ್ತು ಇಲ್ಲದೇ ರೈತರ ಸಾಲ ಮನ್ನಾ ಮಾಡಬೇಕು. ಸ್ತ್ರೀ ಶಕ್ತಿ ಗುಂಪಿನ ಸಾಲವನ್ನೂ ಮನ್ನಾ ಮಾಡಬೇಕು. ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಮಾಸಾಶನ ಕನಿಷ್ಟ 6 ಸಾವಿರ ನೀಡಬೇಕು. ಜಿಲ್ಲೆಯಲ್ಲಿ ಕೃಷಿ ಹೊಂಡ ನಿರ್ಮಿಸಿ ನೀರು ತುಂಬಿಸುವ ಕೆಲಸ ಮಾಡಬೇಕು. ಹೊಸ ಕೆರೆಗಳ ಕಾಮಗಾರಿ ಆರಂಭಿಸಬೇಕು. ಹಳೆ ಕೃಷಿ ಹೊಂಡದ ಹೂಳೆತ್ತಿದ್ದಕ್ಕೆ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಧರಣಿ ಸ್ಥಳದಲ್ಲಿ ಕುಸಿದ ಮಹಿಳೆ:
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅರ್ಧ ಗಂಟೆಗೂ ಹೆಚ್ಚು ಕಾಲ ಧರಣಿ ನಡೆಸಿದ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿ ಕೂಡಲೇ ಆಗಮಿಸಿ ನಮ್ಮ ಮನವಿ ಸ್ವೀಕರಿಸಬೇಕೆಂದು ಒತ್ತಾಯ ಮಾಡಿದರು. ಆದರೆ ಜಿಲ್ಲಾಧಿಕಾರಿ ಬಾರದೇ ಬೇರೆ ಅಧಿಕಾರಿಯನ್ನು ಕರೆಯಿಸುವುದಾಗಿ ಪೊಲೀಸರು ರೈತರಿಗೆ ಹೇಳುತ್ತಿದ್ದಂತೆ, ಜಿಲ್ಲಾಧಿಕಾರಿ ಅವರೇ ಬಂದು ನಮ್ಮ ಸಮಸ್ಯೆ ಆಲಿಸಬೇಕೆಂದು ಪಟ್ಟು ಹಿಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತ ಸ್ಥಳದಲ್ಲೇ ಪೊಲೀಸರ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಧರಣಿ ಸ್ಥಳದಲ್ಲಿ ಮಹಿಳೆ ಕುಸಿದು ಬಿದ್ದ ಪ್ರಸಂಗವೂ ನಡೆಯಿತು. ಬಳಿಕ ಅವರಿಗೆ ನೀರು ಕುಡಿಸಿ ಸುಧಾರಿಸಿಕೊಳ್ಳಲು ಇತರೆ ರೈತ ಮಹಿಳೆಯರು ನೆರವಾದರು.