ಬೆಂಗಳೂರು: ರಾಜಕಾಲುವೆಗಳಿಗೆ ತ್ಯಾಜ್ಯ ಹರಿಸುವ ಹೋಟೆಲ್‌ಗಳಿಗೆ ನೋಟಿಸ್ ಜಾರಿಗೊಳಿಸುವಂತೆ, ಆನಂತರವೂ ತ್ಯಾಜ್ಯ ನೀರನ್ನು ಕಾಲುವೆಗಳಿಗೆ ಹರಿಸುವ ಹೋಟೆಲ್‌ಗಳನ್ನು ಶಾಶ್ವತವಾಗಿ ಬಂದ್ ಮಾಡುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಆದೇಶಿಸಿದ್ದಾರೆ.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲಿಸುತ್ತಿದ್ದ ವೇಳೆ, ರಾಜಕಾಲುವೆಗೆ ಹೋಟೆಲ್ ತ್ಯಾಜ್ಯವನ್ನು ಹರಿಸುತ್ತಿರುವುದನ್ನು ಕಂಡ ಅವರು, ಕೂಡಲೇ ಎಲ್ಲ ಹೋಟೆಲ್ ಮಾಲೀಕರಿಗೆ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನೋಟಿಸ್ ನೀಡಿದ ನಂತರವೂ ತ್ಯಾಜ್ಯ ಹರಿಸಿದರೆ ಹೋಟೆಲ್‌ಗಳನ್ನು ಶಾಶ್ವತವಾಗಿ ಬಂದ್ ಮಾಡಿಸಿ ಎಂದರು.
ಶಿವಾಜಿನಗರ ಕ್ಷೇತ್ರದಲ್ಲಿ ಆಸ್ಪತ್ರೆ, ಶಾಲೆ, ಸಮುದಾಯ ಭವನ ನಿರ್ಮಾಣಕ್ಕೆ 29 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಆರಂಭಿಸಲಾಗುವುದು. ಭಾರತಿನಗರದಲ್ಲಿ 700 ಮಕ್ಕಳು ಓದುತ್ತಿರುವ ಶಾಲಾ ಕಟ್ಟಡ ಶಿಥಿಲಗೊಂಡಿರುವುದರಿಂದರಿಂದ ಮಕ್ಕಳು ಶಾಲೆ ತೊರೆದಿದ್ದಾರೆ. ಅದರ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದರು.
ಇದರೊಂದಿಗೆ ತಿಮ್ಮಯ್ಯ ರಸ್ತೆಯಲ್ಲಿರುವ ಹೆರಿಗೆ ಆಸ್ಪತ್ರೆ ಮತ್ತು ಸಮುದಾಯ ಭವನವನ್ನು ನವೀಕರಿಸಲಾಗುತ್ತಿದ್ದು, ಕಮರ್ಷಿಯಲ್ ಸ್ಟ್ರೀಟ್‌ಗೆ ನಿತ್ಯ ಸಾವಿರಾರು ಜನರು ಬಂದು ಹೋಗುವ ಹಿನ್ನೆಲೆಯಲ್ಲಿ ಈ ರಸ್ತೆಯನ್ನು ಟೆಂಡರ್‌ಶ್ಯೂರ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಜಾರ್ಜ್ ಭರವಸೆ ನೀಡಿದರು.
ಜಾಹೀರಾತು ಕಂಡು ಕೆಂಡವಾದ ಜಾರ್ಜ್!: ಶಿವಾಜಿನಗರದಲ್ಲಿ ಪರಿಶೀಲನಾ ಕಾರ್ಯ ನಡೆಸುವ ವೇಳೆ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಅಳವಡಿಸಲಾಗಿರುವ ಅನಧಿಕೃತ ಜಾಹಿರಾತು ಫಲಕಗಳನ್ನು ಕೆಂಡವಾದರು. ಕೂಡಲೇ ಅವುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ ಅವರು, ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ಅಂಗಡಿಯವರೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಪಾಲಿಕೆಯಿಂದ ನೋಟಿಸ್ ಜಾರಿಗೊಳಿಸಿ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು.
– ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ