Advertisement
ಹರಿಹರ-ಕಟ್ರಮನೆ- ಕಾಂತುಕುಮೇರಿ ಗ್ರಾಮದ ದೊಡ್ಡಚೋಡಿ ಸೇತುವೆ ನಿರ್ಮಾಣದ ಬೇಡಿಕೆ ದಶಕಗಳದ್ದು. ಅದು ಈಡೇರದೆ ಇಲ್ಲಿನ ಜನರು ಸಂಪರ್ಕಕ್ಕಾಗಿ ಪರದಾಡುವಂತಾಗಿದೆ. ದೊಡ್ಡಚೋಡಿಗೆ ಸೇತುವೆ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡುತ್ತಲೆ ಬಂದಿದ್ದರೂ ಸೇತುವೆ ನಿರ್ಮಾಣವಾಗಿಲ್ಲ.
Related Articles
ಈ ಹಿಂದೆ ಗ್ರಾ.ಪಂ.ಗೆ ಚುನಾವಣೆ ನಡೆದ ವೇಳೆ ಇಲ್ಲಿ ಸೇತುವೆ ನಿರ್ಮಾಣ ಪ್ರಸ್ತಾವಕ್ಕೆ ಜೀವ ಬಂದಿತ್ತು. ಬೇಡಿಕೆ ಈಡೇರಿಸುವಂತೆ ಸ್ಥಳೀಯರು ಜನಪ್ರತಿನಿಧಿಗಳ ಮುಂದೆ ಹಠಕ್ಕೆ ಬಿದ್ದಿದ್ದರು. ಬಹು ಸಂಖ್ಯೆಯಲ್ಲಿರುವ ಕಟ್ರಮನೆ ಜನತೆಯ ಸಹನೆ ಕಟ್ಟೆ ಒಡೆದು ಹೋಗಿತ್ತು. ಹೋರಾಟಕ್ಕೆ ಮುಂದಾಗಿದ್ದರು. ಜನಪ್ರತಿನಿಧಿಗಳು ಭರವಸೆ ನೀಡಿದರೇ ಹೊರತು, ಸೇತುವೆ ಮಾತ್ರ ಇನ್ನೂ ಆಗಲೇ ಇಲ್ಲ. ಬಿಡಿಗಾಸು ಅನುದಾನವೂ ಒದಗಲಿಲ್ಲ.
Advertisement
ಶಾಸಕರ 10 ಲಕ್ಷ ರೂ. ಸಾಕಾಗಲ್ಲದೊಡ್ಡಚೋಡಿ ಸೇತುವೆ ನಿರ್ಮಾಣ ಆವಶ್ಯಕತೆ ಮನಗಂಡ ಶಾಸಕರು ಇಲ್ಲಿ ಸೇತುವೆ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನವನ್ನು ನೀಡಿದ್ದರು. ಅದರಂತೆ ಕಾಮಗಾರಿ ಆರಂಭವಾಗಿ ಪಿಲ್ಲರ್ ತಲೆ ಎತ್ತಿ ನಿಂತಿದೆ. ಆದರೆ ಸೇತುವೆ ಪೂರ್ಣ ಪ್ರಮಾಣದಲ್ಲಿ ತಲೆ ಎತ್ತುತ್ತದೆಯೇ ಎಂಬ ಕುರಿತು ಜನತೆಯಲ್ಲಿ ಸಂಶಯವಿದೆ. ಕಾಮಗಾರಿ ಪೂರ್ಣಗೊಳಿಸಲು ಮತ್ತಷ್ಟು ಅನುದಾನದ ಅಗತ್ಯವಿದೆ. ಹೀಗಾಗಿ, ಸದ್ಯ ಸೇತುವೆ ಕನಸು ಈಡೇರುವ ಲಕ್ಷಣಗಳು ಕಾಣುತ್ತಿಲ್ಲ. ನೆರೆ ಇಳಿಯುವ ತನಕ ಕಾಯಲೇ ಬೇಕು
ಈ ಭಾಗದಲ್ಲಿ 60ಕ್ಕೂ ಅಧಿಕ ಕುಟುಂಬಗಳಿವೆ. ಕೃಷಿ ಅವಲಂಬಿತ ಸ್ಥಳೀಯರು ಹರಿಹರ, ಸುಬ್ರಹ್ಮಣ್ಯ, ಐನಕಿದು ಮುಂತಾದ ಕಡೆ ಪಡಿತರ, ಆಹಾರ ಸಾಮಗ್ರಿಗಳನ್ನು ಖರೀದಿಸಿ, ತಲೆ ಹೊರೆಯಲ್ಲೇ ತರಬೇಕು. ಅಗಲ ಕಿರಿದಾಗಿರುವ ರಸ್ತೆಯ ಮಧ್ಯೆ ಇರುವ ಹಳ್ಳವನ್ನು ದಾಟಿಯೇ ಬರಬೇಕು. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳವನ್ನು ದಾಟುವುದು ಎಂದರೆ ಜೀವ ಪಣಕ್ಕಿಟ್ಟಂತೆಯೇ ಸೈ. ಹಲವು ಸಲ ನೆರೆ ಬಂದು, ತಾಸುಗಟ್ಟಲೆ ಹಳ್ಳದ ಬದಿಯಲ್ಲಿ ನಿಲ್ಲಬೇಕಾಗುತ್ತದೆ. ದಾಟುವ ಪ್ರಯತ್ನ ಮಾಡಿದರೆ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವೂ ಇದೆ. ಇಂತಹ ಘಟನೆಗಳು ಈ ಹಿಂದೆ ನಡೆದಿರುವುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಅಷ್ಟು ಹಣ ನಮ್ಮಲ್ಲಿಲ್ಲ
ಹೆಚ್ಚು ಮೊತ್ತದ ಅನುದಾನದ ಆವಶ್ಯಕತೆ ಇದೆ. ಸ್ಥಳೀಯಾಡಳಿತ ಅಷ್ಟು ಹಣ ಹೊಂದಿಸಲು ಸಾಧ್ಯವಿಲ್ಲ. ಮುಂದಿನ ಕ್ರಿಯಾ ಯೋಜನೆಯಲ್ಲಿ ಪಂಚಾಯತ್ ನೀಡುವ ಗರಿಷ್ಠ ಅನುದಾನ ಒದಗಿಸಲಾಗುವುದು. ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಅನುದಾನ ಕೇಳಲಾಗುವುದು.
– ವಿದ್ಯಾಧರ,
ಪಿಡಿಒ, ಹರಿಹರ ಗ್ರಾ.ಪಂ ಬಾಲಕೃಷ್ಣ ಭೀಮಗುಳಿ