ಕಲಬುರಗಿ: ವಿದ್ಯಾರ್ಥಿಗಳು ಯೋಗ ಹಾಗೂ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಸಲಹೆ ನೀಡಿದರು. ಶುಕ್ರವಾರ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದೈಹಿಕ ಶಿಕ್ಷಣ, ಯೋಗ ಮತ್ತು ಕ್ರೀಡಾ ವಿಜ್ಞಾನ 2017 ಅಂತಾರಾಷ್ಟ್ರೀಯ ಸಮ್ಮೇಳನಉದ್ಘಾಟಿಸಿ ಅವರು ಮಾತನಾಡಿದರು.
ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೆ ಅಗತ್ಯ. ಕ್ರೀಡೆ ಮತ್ತು ಯೋಗ ಇವರೆಡನ್ನು ಸಾಕಾರಗೊಳಿಸುತ್ತದೆ ಎಂದರು. ದೇಶದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮಹತ್ವ ಕೊಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜರ್ಮನ್ ದೇಶವು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಆ ದೇಶದ ಪ್ರತಿ ಗ್ರಾಮೀಣ ಪ್ರದೇಶದಲ್ಲಿಯೂ ಕ್ರೀಡಾಂಗಣವಿದೆ. ಅಂತಹ ಮನೋಭಾವವು ದೇಶದಲ್ಲಿಯೂ ಬೆಳೆಯಬೇಕು ಎಂದರು.
ತಮಿಳುನಾಡು ದೈಹಿಕ ಹಾಗೂ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎ.ಎಂ. ಮೂರ್ತಿ ಮಾತನಾಡಿ, ಕ್ರೀಡಾ ಕ್ಷೇತ್ರಕ್ಕೆ ಯಾವುದೇ ವಯೋಮಿತಿ ನಿರ್ಬಂಧವಿಲ್ಲ. ಹಿರಿಯರು, ಕಿರಿಯರು ಭಾಗವಹಿಸಬಹುದಾಗಿದೆ. ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ತಮಿಳುನಾಡಿನಲ್ಲಿ ಕ್ರೀಡಾ ವಿಜ್ಞಾನ ವಿಷಯ ಕಡ್ಡಾಯಗೊಳಿಸಲಾಗಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಜಾರಿಯಲ್ಲಿ ಬರಬೇಕು ಎಂದು ಸಲಹೆ ಮಾಡಿದರು.
ಯೋಗವು ವಿದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಆದಾಗ್ಯೂ, ನಮ್ಮ ದೇಶದಲ್ಲಿ ಅಂತಹ ಜನಪ್ರಿಯತೆ ಕೊರತೆ ಇದೆ. ಆ ಕೊರತೆ ನಿವಾರಿಸಬೇಕು. ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ. ನಮ್ಮಲ್ಲಿ ಸಾಕಷ್ಟು ಸಂಪನ್ಮೂಲಗಳು ಇದ್ದು, ಅವು ಸದ್ಬಳಕೆ ಆಗಬೇಕು. ವಿದೇಶಗಳಂತೆ ಕ್ರೀಡಾ ವಿಜ್ಞಾನಕ್ಕೆ ಭಾರತದಲ್ಲಿಯೂ ಮಹತ್ವ ನೀಡುವ ಮೂಲಕ ಓಲಂಪಿಕ್ಸ್‌ನಲ್ಲಿ ದೇಶ ಹೆಚ್ಚಿನ ಪದಕ ಪಡೆಯುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ| ಎಸ್.ಆರ್. ನಿರಂಜನ್ ಮಾತನಾಡಿ, ವಿಶ್ವವಿದ್ಯಾಲಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಸುದೀರ್ಘ ಪ್ರಸ್ತಾವನೆ ಸಲ್ಲಿಸಿರುವೆ. ಸುಸಜ್ಜಿತ ಕ್ರೀಡಾಂಗಣ, ಈಜುಕೊಳ, ಸಣ್ಣ ಕೆರೆ, ಶಿಕ್ಷಕರಿಗೆ ಅತ್ಯಾಧುನಿಕ ಗುಣಮಟ್ಟದ ತರಬೇತಿ ಕೇಂದ್ರ ಮುಂತಾದ ಬೇಡಿಕೆಗಳಿಗೆ ಅವರು ಸಮ್ಮತಿಸಿದ್ದಾರೆ ಎಂದರು.
ಹೂವಿನಭಾವಿ ಬಾಬಣ್ಣ, ಬೆಂಗಳೂರು ವಿಶ್ವವಿದ್ಯಾಲಯದ ಪ್ರೊ| ಸುಂದರರಾಜ ಅರಸ್, ಮಲೇಶಿಯಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ| ಲಿನ್ ಲೂಮ್ ಹುಯಿ, ಪ್ರೊ| ರಾಜೇಶಕುಮಾರ, μಲಿಫೈನ್ಸ್ ಎಂ.ಎಸ್. ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ| ಹೆನ್ರಿ ಸಿ. ಡಾಯಟ್ ಗೌರವ ಅತಿಥಿಗಳಾಗಿ ಆಗಮಿಸಿದ್ದರು.
ದೇಶ, ವಿದೇಶಗಳ ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಡಾ| ಎಂ.ಎಸ್. ಪಾಸೋಡಿ ಸ್ವಾಗತಿಸಿದರು. ವಿಜಯ ನಾಲವಾರ, ವಿಜಯಲಕ್ಷ್ಮೀ ಪಾಟೀಲ ನಿರೂಪಿಸಿದರು. ಕುಲಸಚಿವ ಪ್ರೊ| ದಯಾನಂದ ಅಗಸರ್, ಡಾ| ಎಚ್.ಎಸ್. ಜಂಗೆ, ಪ್ರೊ| ರಾಜೇಶಕುಮಾರ್ ಹಾಜರಿದ್ದರು.