ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನಾಲ್ಕು ಗೋಡೆಯ ಕಟ್ಟಡ ಅಲ್ಲ. ದೊಡ್ಡ ಕನಸು ಹೊತ್ತಿರುವ ಮಹಾನ್ ವ್ಯಕ್ತಿಗಳನ್ನು ತುಂಬಿಸಿಕೊಂಡಿರುವ ಸಾಂಸ್ಕೃತಿಕ ವೇದಿಕೆ ಎಂದು ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ನಗರದ ಚಾಮರಾಜಪೇಟೆಯ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವ ದತ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಾಹಿತ್ಯ ಲೋಕದ ದಿಗ್ಗಜರು ತನ್ನದೇ ಆದ ಪ್ರಭಾವ ಹೊಂದಿರುತ್ತಾರೆ. ಈವರೆಗೆ 25 ಜನ ಪರಿಷತ್ತಿನ ಯಜಮಾನಿಕೆ ವಹಿಸಿಕೊಂಡಿದ್ದರು. ಕೆಲವರು ಒಂದು ವರ್ಷ, ಇನ್ನು ಕೆಲವರು ಮೂರು ವರ್ಷ, ಐದು ಹಾಗೂ 8 ವರ್ಷದವರೆಗೂ ಅಧಿಕಾರ ನಡೆಸಿದ ನಿದರ್ಶನ ಇದೆ. ಅರಮನೆಗೆ ಇಲಿ, ಹೆಗ್ಗಣಗಳು ಬಂದು ಸೇರುವಂತೆ 1977-78ರ ಕಾಲಘಟ್ಟದಲ್ಲಿ ಕಸಾಪ ಕೂಡ ಅದೇ ಅಪಖ್ಯಾತಿಗೆ ಪಾತ್ರವಾಗಿತ್ತು. ನಂತರ ಸರ್ಕಾರವೇ ಆಡಳಿತಾಧಿಕಾರಿಯನ್ನು ನೇಮಿಸುವ ಸ್ಥಿತಿಯೂ ಬಂದಿತ್ತು ಎಂದು ಇತಿಹಾಸವನ್ನು ಮೆಲುಕು ಹಾಕಿದರು.
ಪರಿಷತ್ತಿಗೆ ಮಹಾನ್ ಕಸನುಗಳಿವೆ, ಅದನ್ನು ನನಸು ಮಾಡುವ ಜವಾಬ್ದಾರಿ ಈಗ ಅಧಿಕಾರದಲ್ಲಿರುವ ಮತ್ತು ಹಿಂದೆ ಅಧಿಕಾರ ವಹಿಸಿಕೊಂಡಿದ್ದವರ ಹೆಗಲ ಮೇಲಿದೆ. ಸುಮಾರು 3 ಲಕ್ಷ ಮತದಾರರನ್ನು ಹೊಂದಿರುವ ಪರಿಷತ್ತಿನಲ್ಲಿ ಹಣ ಉಳ್ಳವರು ಗೆಲ್ಲುವ ಸಂಸ್ಕೃತಿ ನಿಲ್ಲಬೇಕು ಎಂದು ಹೇಳಿದರು.
ಶತಮಾನ ಕಂಡಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಆರಂಭದಲ್ಲಿ ಕರ್ನಾಟಕ ಪರಿಷತ್ತು ಎಂದು ನಾಮಕರಣ ಮಾಡಲಾಗಿತ್ತು ಈ ನಾಮಫಲಕ ಅಳವಡಿಕೆ ಸಂದರ್ಭದಲ್ಲಿ “ಕರ್ನಾಟಕ’ “ಕರ್ಣಾಟಕ’ ಪದದ ಬಗ್ಗೆಯೇ ಎರಡು ಗುಂಪುಗಳ ನಡುವೆ ಜಗಳವಾಗಿತ್ತು. ಅಂತಿಮವಾಗಿ ಕನ್ನಡ ಸಾಹಿತ್ಯ ಪರಿಷತ್ತು ಎಂದು ನಾಮಕರಣ ಮಾಡಲಾಯಿತು ಎಂಬುದನ್ನು ನೆನಪಿಸಿದರು.
ಕವಿ, ಸಾಹಿತಿಗೆ ದಲಿತ, ಬಂಡಾಯ, ನವ್ಯ ಮೊದಲಾದ ಗುಣವಾಚಕದ ಅಗತ್ಯವಿಲ್ಲ. ಹೆಣ್ಣು ಸಾಹಿತಿ, ಗಂಡು ಸಾಹಿತಿ ಎನ್ನುವ ಗುಣವಾಚಕವೂ ನಿಲ್ಲಬೇಕು ಎಂದ ಅವರು ಶತಮಾನ ಕಂಡ ಸಾಹಿತ್ಯ ಪರಿಷತ್ತು ನಡೆದು ಬಂದ ಹಾದಿಯನ್ನು ಸ್ಮರಿಸಿದರು.
ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ್ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿಯನ್ನು ಕಟ್ಟಿ ಬೆಳೆಸುವ ಜತೆಗೆ ನಾಡಿನ ಹಲವು ಸಮಸ್ಯೆಗೆ ಪರಿಹಾರ ನೀಡಲು ಪರಿಷತ್ತು ಸಿಂಹಪಾಲುವಹಿಸಿದೆ. ಪರಿಷತ್ತಿನಿಂದ ನೀಡುವ ಪ್ರಶಸ್ತಿ ತನ್ನದೇ ಮಹತ್ವ ಹೊಂದಿದೆ. ಇಲ್ಲಿ ಪ್ರಶಸ್ತಿಗಾಗಿ ಯಾವುದೇ ಲಾಬಿ ನಡೆಯುವುದಿಲ್ಲ ಎಂದರು. ಕಸಾಪ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಮೊದಲಾದವರು ಉಪಸ್ಥಿತರಿದ್ದರು.