ಕಲಬುರಗಿ: ಮತದಾರರೇ ನಿಮಗೆ ಸಂವಿಧಾನದಿಂದ ಪ್ರದತ್ತವಾದ ದೊರಕಿದ ಮತದಾನದ ಹಕ್ಕನ್ನು ಕಡ್ಡಾಯವಾಗಿ ಮಾಡುವ ಮೂಲಕ ಯೋಗ್ಯ ಜನಪ್ರತಿಧಿಗಳನ್ನು ಆಯ್ಕೆ ಮಾಡಿ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ ಘೋಷ್ ಹೇಳಿದರು.
ಬುಧವಾರ ಕಲಬುರಗಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗ ಹೊಸದಾಗಿ ಮತದಾನದ ಅವಕಾಶಪಡೆಯುವ ಯುವ ಮತದಾರರು, ನಿರ್ಭಯವಾಗಿ ಮತ್ತು ಸಕ್ರಿಯವಾಗಿ ಮತ್ತು ಕಡ್ಡಾಯವಾಗಿ ಮತದಾನ ಮಾಡಬೇಕು.
ಇದೊಂದು ತುಂಬಾ ಜವಾಬ್ದಾರಿಯುತ ಮತ್ತು ಜರೂರು ಪ್ರಕ್ರಿಯೆ. ಇದರಿಂದ ನಿಮ್ಮಸರಕಾರಕ್ಕಾಗಿ ಯೋಗ್ಯರನ್ನು ಚುನಾಯಿಸುವ ಅವಕಾಶ ನಿಮ್ಮ ಕೈಯಲ್ಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಎನ್. ಶಶಿಕುಮಾರ ಮಾತನಾಡಿ, ಮತದಾನದ ಹಕ್ಕಿನ ಬಗ್ಗೆ ಎಲ್ಲರೂ ಅರಿಯಬೇಕು.
ವಿದ್ಯಾವಂತರು, ಆರ್ಥಿಕ ಸ್ಥಿತಿವಂತರು ಮತ್ತು ಸಬಲರಾದವರು ಮತದಾನಕ್ಕೆ ಹಿಂದೇಟು ಹಾಕುತ್ತಿರುವುದು ದುರಂತ. ಮತದಾನದ ವಯಸ್ಸನ್ನು 21 ರಿಂದ 18ಕ್ಕೆ ಇಳಿಸಿದರೂ ಯುವ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರುವುದು ಖೇದಕರ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಪ್ರಕಾಶ ಪಾಲ್ಗೊಂಡಿದ್ದರು. ಚುನಾವಣಾ ತಹಶೀಲ್ದಾರ ಬಿ. ದಯಾನಂದ ಪಾಟೀಲ ಸ್ವಾಗತಿಸಿದರು. 50 ಜನ ಯುವ ಮತದಾರರಿಗೆ ಭಾರತದ ಚುನಾವಣಾ ಆಯೋಗದ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಹಾಗೂ 15 ಅತ್ಯುತ್ತಮ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.