Advertisement

Sabarimala; ಭಕ್ತಿ ಭಾವದ ಮಕರ ಸಂಕ್ರಾಂತಿ ಆಚರಣೆ: ಲಕ್ಷಾಂತರ ಭಕ್ತರು ಭಾಗಿ

11:55 PM Jan 15, 2024 | Vishnudas Patil |

ಪತ್ತನಂತಿಟ್ಟ : ಲಕ್ಷಕ್ಕೂ ಅಧಿಕ ಭಕ್ತರು, ಹಲವಾರು ಗಂಟೆಗಳ ಕಾಲ ಬೃಹತ್ ಸರತಿ ಸಾಲಿನಲ್ಲಿ ನಿಂತು ಸೋಮವಾರ ಇಲ್ಲಿನ ಅಯ್ಯಪ್ಪನ ಬೆಟ್ಟದ ದೇಗುಲದಲ್ಲಿ ಮಕರ ಸಂಕ್ರಾಂತಿ (ಮಕರವಿಳಕ್ಕು) ಆಚರಣೆಯ ದಿನದಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Advertisement

ತಿಂಗಳ ಅವಧಿಯ ವಾರ್ಷಿಕ ತೀರ್ಥಯಾತ್ರೆಯ ಋತು ಇದಾಗಿದ್ದು ಸಾಂಪ್ರದಾಯಿಕ ಕಪ್ಪು ಉಡುಪುಗಳನ್ನು ಧರಿಸಿದ ಭಕ್ತರ ದಂಡು ಮತ್ತು ತಮ್ಮ ತಲೆಯ ಮೇಲೆ ‘ಇರುಮುಡಿ’ ಹೊತ್ತುಕೊಂಡು ದೀಪಾರತಿ ಗಾಗಿ ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಬೆಳಗ್ಗೆಯಿಂದಲೇ ಕಾಯುತ್ತಿದ್ದರು.ದೇವಸ್ವಂ ಅಧಿಕಾರಿಗಳು, ಪೊಲೀಸ್ ಸಿಬಂದಿ ಮತ್ತು ಅರ್ಚಕರು ವಿಶೇಷ ಸಿದ್ದತೆಗಳನ್ನು ಕೈಗೊಂಡಿದ್ದರು.

ಸಂಜೆ 6.30 ರ ಸುಮಾರಿಗೆ, ಅಯ್ಯಪ್ಪ ಜನಿಸಿದ ಪಂದಳಂ ಅರಮನೆಯಿಂದ ಪವಿತ್ರ ಆಭರಣಗಳನ್ನು ತರಲಾಯಿತು, ಸುಮಾರು 85 ಕಿಲೋಮೀಟರ್ ದೂರದಲ್ಲಿರುವ ಪಂದಳಂ ಅರಮನೆಯಿಂದ ಎರಡು ದಿನಗಳ ಹಿಂದೆ ವಿಧ್ಯುಕ್ತ ಮೆರವಣಿಗೆ ಆರಂಭವಾಗಿತ್ತು. ಅಯ್ಯಪ್ಪನ ವಿಗ್ರಹವನ್ನು ಪವಿತ್ರ ಆಭರಣಗಳಿಂದ ಅಲಂಕರಿಸಿದ ನಂತರ ದೀಪಾರಾಧನೆ ನಡೆಸಲಾಯಿತು.

ದೇಗುಲದ ಹೊರಗೆ ಅಪಾರ ಭಕ್ತಗಡಣವು ಸೇರಿದ್ದರಿಂದ ನೂಕುನುಗ್ಗಲು ಉಂಟಾಯಿತು, ಭಕ್ತರು ಪವಿತ್ರ ಆಭರಣಗಳಿಂದ ಅಲಂಕರಿಸಲ್ಪಟ್ಟ ಭಗವಾನ್ ಅಯ್ಯಪ್ಪನ ನೋಡಲು ಮುಗುಬಿದ್ದರು. ದೇಗುಲದ ಹೆಬ್ಬಾಗಿಲು ತೆರೆದಾಗ ‘ಶರಣಂ ಅಯ್ಯಪ್ಪ’ ಘೋಷಣೆಗಳು ಮತ್ತು ಸ್ತೋತ್ರಗಳು ಮುಗಿಲು ಮುಟ್ಟಿದ್ದವು.

ದೇವಾಲಯದ ಸಂಕೀರ್ಣದಿಂದ ಎಂಟು ಕಿಲೋಮೀಟರ್ ದೂರದ ಬೆಟ್ಟದ ಮೇಲಿರುವ ಪೊನ್ನಂಬಲಮೇಡು ಮೇಲಿನ ಪೂರ್ವ ಆಗಸದಲ್ಲಿ  ಕೆಲವು ನಿಮಿಷಗಳ ನಂತರ ‘ಮಕರ ಜ್ಯೋತಿ’ ಮಿನುಗಿತು. ದೈವಿಕ ಬೆಳಕು ಎಂದು ಪರಿಗಣಿಸಲ್ಪಟ್ಟ ‘ಮಕರ ಜ್ಯೋತಿ’ ಕಂಡಾಗ ಭಕ್ತರಿಂದ ಶರಣಂ ಅಯ್ಯಪ್ಪ ಘೋಷಗಳು ಮತ್ತಷ್ಟು ತೀವ್ರಗೊಂಡವು.

Advertisement

ಹಿನ್ನೆಲೆ ಗಾಯಕ ವೀರಮಣಿದಾಸನ್‌ಗೆ ಪ್ರಶಸ್ತಿ

ತಮಿಳು ಹಿನ್ನೆಲೆ ಗಾಯಕ ಪಿ.ಕೆ. ವೀರಮಣಿದಾಸನ್‌ ಅವರಿಗೆ ಪ್ರಸಕ್ತ ವರ್ಷದ ಪ್ರತಿಷ್ಠಿತ ಹರಿವರಾಸನಮ್‌ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶಬರಿಮಲೆಯ ಸನ್ನಿಧಾನಂನಲ್ಲಿ ಕೇರಳ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್‌ ಅವರು ಸೋಮವಾರ ವೀರಮಣಿದಾಸನ್‌ರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದು ಒಂದು ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಇವರ ಕಂಠಸಿರಿಯಲ್ಲಿ ಕನ್ನಡ, ತಮಿಳು, ತೆಲುಗು ಸೇರಿದಂತೆ ವಿವಿಧ ಭಾಷೆಗಳ 6 ಸಾವಿರಕ್ಕೂ ಅಧಿಕ ಭಕ್ತಿಗೀತೆಗಳು ಹೊರಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next