Advertisement
ಪ್ರಾಕೃತಿಕ ಬದಲಾವಣೆಯನ್ನು ಗುರುತಿಸಿ ಅದು ಮನುಕುಲದ ಮೇಲೆ ಬೀರುವ ಪ್ರಭಾವವನ್ನು ನೆನಪಿಸುವುದಕ್ಕಾಗಿ ಈ ಎಲ್ಲ ಹಬ್ಬಗಳನ್ನು ಆಚರಿಸುತ್ತೇವೆ. ಭೂಮ್ಯಾಕಾಶಗಳಲ್ಲಿ, ಪರಿಸರದಲ್ಲಿ ಉಂಟಾಗುವ ವ್ಯತ್ಯಾಸವನ್ನು ಹಬ್ಬದ ಹಿನ್ನೆಲೆಯಲ್ಲಿ ತಿಳಿಸಿಕೊಡುವ ಪದ್ಧತಿ ನಮ್ಮಲ್ಲಿದೆ. ಹಾಗೆಯೇ ಸಂಕ್ರಾಂತಿಯು ಸೌರಮಂಡಲದಲ್ಲಿ ಆಗುವ ಬದಲಾವಣೆ. ಆದ್ದರಿಂದ ಇದು ಸೌರಮಾನದ ಹಬ್ಬ. ಅದರಲ್ಲಿಯೂ ಮಕರ ಸಂಕ್ರಾಂತಿಯೆಂದರೆ ಬಹುವಿಶೇಷ. ಇದು ಸೂರ್ಯಾರಾಧನೆಯ ಹಬ್ಬವೂ ಹೌದು.
Related Articles
Advertisement
ಸಂಕ್ರಾಂತಿಗೆ ನಾನಾ ಹೆಸರು..ಪಂಜಾಬ್‌ನಲ್ಲಿ ಇದನ್ನು “ಲೋಹ್ರಿ’, ಪಶ್ಚಿಮ ಬಂಗಾಲ ಮತ್ತು ಅಸ್ಸಾಂಗಳಲ್ಲಿ “ಬಿಹು’, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ “ಗಾಳಿಪಟ ಹಾರಿಸುವ ಹಬ್ಬ’ವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ಸ್ವೀಕರಿಸಿ ಕರೆತಂದ ದಿನವೆಂದು ಮನೆಯ ಮುಂದೆ ಬೆಂಕಿಯನ್ನು ಹಾಕಿ “ರಾವಣದಹನ’ವನ್ನು ಈ ದಿನದಂದು ಆಚರಿಸುತ್ತಾರೆ. ಕರ್ನಾಟಕ, ಬಿಹಾರ, ಆಂಧ್ರ ಪ್ರದೇಶ ಮೊದಲಾದೆಡೆ “ಮಕರ ಸಂಕ್ರಾಂತಿ’ಯ ಸಡಗರ. ಮಕರ ಸಂಕ್ರಾತಿಯ ದಿನದಂದು ದೇಶದ ಪವಿತ್ರ ಯಾತ್ರಾಸ್ಥಳಗಳಾದ ಪ್ರಯಾಗ, ಹರಿದ್ವಾರ, ಉಜ್ಜಯಿನಿ , ನಾಸಿಕ್ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆಯುತ್ತವೆ. 6 ವರ್ಷಗಳಿಗೊಮ್ಮೆ ಅರ್ಧ ಕುಂಭಮೇಳ , 12 ವರ್ಷಗಳಿಗೊಮ್ಮೆ ಪೂರ್ಣ ಕುಂಭಮೇಳ ಮತ್ತು 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳಗಳು ಇದೇ ಮಕರ ಸಂಕ್ರಾತಿಯ ದಿನದಂದು ಮೇಲಿನ ಯಾವುದಾದರೊಂದು ಕ್ಷೇತ್ರಗಳಲ್ಲಿ ಆರಂಭವಾಗುತ್ತವೆ. ಈ ಬಾರಿ ಪ್ರಯಾಗದಲ್ಲಿ 144 ವರ್ಷಗಳಿಗೊಮ್ಮೆ ಆಚರಿಸಲ್ಪಡುವ ಮಹಾಕುಂಭಮೇಳ ನಡೆಯುತ್ತಿರುವುದು ಈ ಮಕರಸಂಕ್ರಾಂತಿಯ ವಿಶೇಷ. ತಮಿಳುನಾಡಿನಲ್ಲಿ ಪೊಂಗಲ್ ಸಂಭ್ರಮ
ದ್ರಾವಿಡ ಸಂಪ್ರದಾಯಸ್ಥರಿಗೆ ಇದೊಂದು ಸಂಭ್ರಮದ ದಿನ. ತಮಿಳಿನಲ್ಲಿ ಪೊಂಗಲ್ ಎಂದೂ ಪ್ರಸಿದ್ಧ. 6ನೆಯ ಶತಮಾನದ ಬ್ರಹ್ಮಗುಪ್ತ ಇದರ ಬಗ್ಗೆ ಉಲ್ಲೇಖಿಸಿದ್ದಾನೆ. ತಮಿಳರು ತಾವು ಬೆಳೆದ ಬೆಳೆಯ ಮೊದಲ ಕೊಯ್ಲನ್ನು ಮನೆಗೆ ತಂದು ಹೊಸ ಅಕ್ಕಿಯನ್ನು ಹಾಲಿನೊಂದಿಗೆ ಬೇಯಿಸಿ ಒಂದು ಬಗೆಯ ಸಿಹಿ ಖಾದ್ಯವಾದ “ಪೊಂಗಲ್’ ನ್ನು ತಯಾರಿಸಿ, ಅದನ್ನು ಸೂರ್ಯ ದೇವನಿಗೆ ಅರ್ಪಿಸಿ ಅನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸುತ್ತಾರೆ. ಕೇರಳದ ವಿಶ್ವವಿಖ್ಯಾತ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಮಣದ ದಿನ “ಮಕರ ವಿಳಕ್ಕು’(ಮಕರ ಜ್ಯೋತಿ) ದರ್ಶನವಾಗುವುದು. ಪಂದಳ ಅರಮನೆಯಿಂದ ತಂದ ತಿರುವಾಭರಣಗಳನ್ನು ಸ್ವಾಮಿಗೆ ತೊಡಿಸಿ, ಆರತಿ ಬೆಳಗುವಾಗ ಪೊನ್ನಂಬಲ ಕಾಡಿನಲ್ಲಿ ಗೋಚರಿಸುವ “ಮಕರ ಜ್ಯೋತಿ’ಯನ್ನು ಕಂಡು ಭಕ್ತರು ಪುನೀತರಾಗುತ್ತಾರೆ. ಎಳ್ಳು ಬೆಲ್ಲ ಬೀರುವುದು…
ಎಳ್ಳು-ಬೆಲ್ಲ ಹಂಚುವುದು ಈ ಹಬ್ಬದ ಇನ್ನೊಂದು ವೈಶಿಷ್ಟ್ಯ. ಇದು “ಎಳ್ಳು ಬೀರುವುದು’ ಎಂದೇ ಪ್ರಸಿದ್ಧಿ. ಆರೋಗ್ಯ ವೃದ್ಧಿಗೂ ಎಳ್ಳು-ಬೆಲ್ಲ ಸೇವನೆ ಪೂರಕ. ರೈತರು ಈ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. “ಜಾನುವಾರುಗಳ ಹಬ್ಬ’ ಎಂದು ಈ ದಿನ ಅವುಗಳಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ಹೊದಿಸಿ, ಕೊರಳಿಗೆ ಗಂಟೆ, ಹೂ ಹಾರಗಳನ್ನು ಹಾಕಿ, ಕೊಂಬುಗಳಿಗೆ, ಚಿನ್ನಾರಿ ಕಾಗದ ತುರಾಯಿಗಳನ್ನು ಕಟ್ಟುತ್ತಾರೆ. ಅನಂತರ ಅಕ್ಕ ಪಕ್ಕದವರೆಲ್ಲ ಒಟ್ಟುಗೂಡಿ ದನಕರುಗಳನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಾರೆ. ಅನಂತರ ಒಂದು ಕಡೆ ಒಟ್ಟಾಗಿ ಸೇರಿ, ಅಲ್ಲಿ ಮೊದಲೇ ಗೊತ್ತುಪಡಿಸಿದ ಒಂದು ಪ್ರಶಸ್ತ ಜಾಗದಲ್ಲಿ ಬೆಂಕಿಯನ್ನು ಹಾಕಿ ಅದರ ಮೇಲೆ ಈ ದನಕರುಗಳನ್ನು ಹಾಯಿಸುತ್ತಾರೆ. ಇದಕ್ಕೆ ಕಿಚ್ಚು ಹಾಯಿಸುವುದು ಎಂದು ಹೆಸರು. ಇದರಿಂದ ಜಾನುವಾರುಗಳ ದೃಷ್ಟಿದೋಷ ನಿವಾರಣೆಯಾಗಿ ರೋಗ ರುಜಿನಗಳಿಂದ ರಕ್ಷೆ ಸಿಗುತ್ತದೆ ಎಂಬ ನಂಬಿಕೆಯಿದೆ. ಈ ದಿನದ ಮಟ್ಟಿಗೆ ಜಾನುವಾರುಗಳಿಗೆ ವಿಶ್ರಾಂತಿ. ಇನ್ನು ಕೆಲವೆಡೆ ಗೂಳಿ ಕಾಳಗ ಕೂಡ ಆಚರಣೆಯಲ್ಲಿದೆ. ರೈತರು ಕೂಡ ವಿವಿಧ ವಿನೋದಾವಳಿಯಲ್ಲಿ ತೊಡಗಿ ಆನಂದದಿಂದ ಕಾಲಕಳೆಯುತ್ತಾರೆ. ಹೀಗೆ ಸಂಕ್ರಾಂತಿ ಕರ್ನಾಟಕದಲ್ಲಿ ಬಹು ಸಂಭ್ರಮಪೂರ್ಣವಾಗಿ ಆಚರಿಸಲ್ಪಡುತ್ತದೆ. ರಾಜ್ಯದ ಇತರೆಡೆಗಳಲ್ಲಿ ಮಕರ ಸಂಕ್ರಾಂತಿಯ ಸಮಯಕ್ಕಾಗುವಾಗ ಬೆಳೆ ಕೊಯ್ಲು ಮುಗಿದು ದವಸ ಧಾನ್ಯಗಳು ಮನೆ ಸೇರಿರುತ್ತದೆ. ಹಾಗಾಗಿ ಅವರಿಗೆ ಇದು ಸುಗ್ಗಿಯ ಹಬ್ಬವೂ ಹೌದು. ಕದಿರು ಪೂಜೆ ಮಾಡಿ ಸುಗ್ಗಿ ಹಬ್ಬ ಆಚರಿಸುತ್ತಾರೆ. ತುಳುನಾಡಿನಲ್ಲಿ ಮಕರ ಸಂಕ್ರಾಂತಿಯಂದು ಧಾರ್ಮಿಕ ಹಬ್ಬವಾಗಿ ವಿಭಿನ್ನವಾಗಿ ಆಚರಣೆಯಾಗುತ್ತದೆ. ತುಳುನಾಡಿನಲ್ಲಿ ಉತ್ತರಾಯಣದಲ್ಲಿ ಉಂಟಾಗುವ ಹವಾಮಾನ ಬದಲಾವಣೆಯೇ ಮುಖ್ಯ ಅಂಶ. ಧನು ಮಾಸದಲ್ಲಿ ತುಂಬಾ ಚಳಿ ಇರುತ್ತದೆ. ರಥಸಪ್ತಮಿಯ ಅನಂತರ ಚಳಿ ಕಡಿಮೆಯಾಗಲು ಶುರುವಾಗುತ್ತದೆ. ಮರಗಳು ನಿನೆ ಬಿಟ್ಟು ತೆನೆ ತುಂಬಿಕೊಳ್ಳಲು ಶುರು ಮಾಡಿಕೊಳ್ಳುತ್ತದೆ. ಇಡೀ ಪ್ರಕೃತಿ ಹೂವು, ಹಣ್ಣುಗಳ ಬಣ್ಣಗಳಿಂದ ತೋರಣ ಕಟ್ಟಿಕೊಂಡಿ ಶೃಂಗಾರಗೊಳ್ಳುತ್ತದೆ. ಇಲ್ಲಿನ ದೇವಾಲಯಗಳಲ್ಲಿ ಮಕರ ಸಂಕ್ರಾಂತಿಯಂದು ದೇವರಿಗೆ ವಿಶೇಷ ಪೂಜೆ, ಉತ್ಸವ, ರಥೋತ್ಸವಗಳು ನೆರವೇರುತ್ತವೆ. ದೈವಾರಾಧನೆ ಪದ್ಧತಿಯಲ್ಲೂ ಮಕರ ಸಂಕ್ರಮಣವನ್ನು ವಿಶೇಷವೆಂದು ಪರಿಗಣಿಸಿ ಅಗೆಲು ಸೇವೆ, ಆಯನ ಬಲಿ, ದರ್ಶನ ಸೇವೆಗಳನ್ನೂ ನಡೆಸುತ್ತಾರೆ. ಧನುರ್ಮಾಸದ ಒಂದು ತಿಂಗಳ ಕಾಲ ಎಷ್ಟೋ ಆಲಯಗಳಲ್ಲಿ ಸ್ತಬ್ಧಗೊಂಡ ಪೂಜೆ-ಪುನಸ್ಕಾರಗಳು ಮಕರ ಸಂಕ್ರಮಣದಿಂದಲೇ ಯಥಾರೀತಿ ಆರಂಭಗೊಳ್ಳುವುದು ವಾಡಿಕೆ. ಸಂಕ್ರಾಂತಿಗೆ ವೈಜ್ಞಾನಿಕ ಮಹತ್ವ
ಈ ಹಬ್ಬಕ್ಕೆ ವೈಜ್ಞಾನಿಕ ಮಹತ್ವವೂ ಇದೆ. ಜೀವರಾಶಿಯ ಚೇತನವಾದ ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣದ ಮಕರ ರಾಶಿಯತ್ತ ತನ್ನ ದಿಕ್ಕು ಬದಲಿಸುವ ಹಾಗೆಯೇ ತನ್ನ ಪರಿಧಿಯಲ್ಲಿ ತಿರುವು ಪಡೆದು ಸೂರ್ಯನ ಸಮೀಪಕ್ಕೆ ಸಾಗುವ ಅಂದರೆ ಬೇಸಗೆಯತ್ತ ಭೂಮಿ ಸಾಗಲಾರಂಭಿಸುವ ಶುಭಕಾಲ, ಸಂಕ್ರಮಣ ಎಂದರೆ ಸಂಧಿ, ಪರಿವರ್ತನೆ. ನಕ್ಷತ್ರ, ಗ್ರಹಗಳ ಚಲನೆಯಲ್ಲಿನ ಪರಿವರ್ತನ ಕಾಲ ಅತ್ಯಂತ ಶುಭ ಮತ್ತು ಫಲಪ್ರದವೆಂಬ ನಂಬಿಕೆ. ಪ್ರಕೃತಿಯ ಮಡಿಲಲ್ಲಿ ಬೆಳೆದುನಿಂತ ಧಾನ್ಯಾದಿಗಳು ಮನೆಸೇರಿ ಧಾನ್ಯಲಕ್ಷ್ಮೀಯ ಆವಾಸಸ್ಥಾನವಾಗುತ್ತದೆ. ಹೆಚ್ಚಿನ ಪರಿಶ್ರಮಕ್ಕೂ, ಅಧ್ಯಯನಕ್ಕೂ, ಸಾಧನೆಗೂ ಇದು ಪ್ರಶಸ್ತ ಕಾಲ. ಉತ್ತಮ ನಡೆನುಡಿಯೇ ನಮ್ಮ ಬದುಕನ್ನು ಸುಖಮಯವಾಗಿಸುತ್ತದೆ. ಮಾನವತ್ವದಿಂದ ದೈವತ್ವಕ್ಕೆ ಏರುವುದಕ್ಕೆ ಬದುಕನ್ನು ಸಂಸ್ಕರಿಸಿಕೊಳ್ಳಬೇಕು. ಸಮಸ್ಯೆಗಳನ್ನು ಮೆಟ್ಟಿನಿಂತು ಬದುಕನ್ನು ಕಟ್ಟಿಕೊಳ್ಳಬೇಕು. ಮಕರ ಸಂಕ್ರಾಂತಿಯ ಈ ಶುಭಪರ್ವದಂದು ಎಳ್ಳು ಬೆಲ್ಲ ಸೇವಿಸಿ, ಕಹಿ ಭಾವನೆಗಳನ್ನು ಮರೆತು ಸಿಹಿ ಭಾವನೆಗಳೊಂದಿಗೆ ಬದುಕನ್ನು ಸದಾ ಸಿಹಿಯಾಗಿಸೋಣ, ಚೈತನ್ಯದಾಯಕವಾಗಿಸೋಣ. -ಭರತೇಶ ಅಲಸಂಡೆಮಜಲು, ಪೆರ್ಲಂಪಾಡಿ