Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
ಈಶಾ ಕೇಂದ್ರದಲ್ಲಿ ವಿವಿಧ ಆಹಾರ, ಸ್ಥಳೀಯ ನೇಯ್ಗೆ, ಕರಕುಶಲ ವಸ್ತುಗಳ ಮಳಿಗೆಗಳ ಪ್ರದರ್ಶನ
Team Udayavani, Jan 16, 2025, 2:00 AM IST
ಚಿಕ್ಕಬಳ್ಳಾಪುರ: ಭಕ್ತರ ಹರ್ಷೋದ್ಘಾರ, ಡೊಳ್ಳು ಕುಣಿತ ಮತ್ತಿತರ ಸಾಂಪ್ರದಾಯಿಕ ಜನಪದ ಶೈಲಿಯ ನೃತ್ಯ, ಸಾಂಸ್ಕೃತಿಕ ವೈವಿಧ್ಯತೆಯ ಅನಾವರಣ, ಮಕರ ಸಂಕ್ರಾಂತಿಗೆ ಕಳೆ ತಂದ ದೇಶಿ ರಾಸುಗಳ ಅದ್ಧೂರಿ ಪ್ರದರ್ಶನ.
ಇವು ನಗರದ ಹೊರ ವಲಯದ ಅವಲಗುರ್ಕಿ ಸಮೀಪವಿರುವ ಆದಿಯೋಗಿ ಈಶ ಕೇಂದ್ರದ ಆವರಣದಲ್ಲಿ ಸುಗ್ಗಿ ಹಬ್ಬ ಮಕರ ಸಂಕ್ರಾಂತಿ ಪ್ರಯುಕ್ತ ಸದ್ಗುರುಗಳಿಂದ ಅನಾವರಣಗೊಂಡ 54 ಅಡಿಗಳ ಮಹಾಶೂಲ ಅನಾವರಣ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು.
ಸೂರ್ಯ ತನ್ನ ಪಥ ಬದಲಿಸುವ ಉತ್ತರಾಯಣದ ಮೊದಲ ದಿನ ಅತ್ತ ಸೂರ್ಯಹಸ್ತವಾಗುತ್ತಿದ್ದಂತೆ ಇತ್ತ ಈಶ ಕೇಂದ್ರದಲ್ಲಿ ಮುಗಿಲೆತ್ತದ ಮಹಾಶೂಲ (ಶಿವನ ತ್ರಿಶೂಲ) ವನ್ನು ಸದ್ಗುರುಗಳು ವಿಶೇಷ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಭಕ್ತರು, ಪ್ರವಾಸಿಗರು ತಮ್ಮ ಹರ್ಷೋದ್ಗಾರ ವ್ಯಕ್ತಪಡಿಸಿದರು. ಈ ವೇಳೆ ಸದ್ಗುರು ಅವರ ಸಾನ್ನಿಧ್ಯದಲ್ಲಿ ಈಶ ಬ್ರಹ್ಮಚಾರಿಗಳು ಮೊದಲ ಬಾರಿಗೆ ಪಂಚಭೂತಗಳನ್ನು ಶುದ್ಧೀಕರಿಸುವ ಪ್ರಕ್ರಿಯೆಯಾದ ಪಂಚಭೂತ ಕ್ರಿಯೆಯನ್ನು ಸದ್ಗುರು ಸನ್ನಿಧಿಯಲ್ಲಿ ನೆರವೇರಿಸಿದರು.
ಸಹಸ್ರಾರು ಜನ ಭಾಗಿ:
ಕಳೆದ ಎರಡು, ಮೂರು ದಿನಗಳಿಂದ ಈಶಾ ಕೇಂದ್ರದಲ್ಲಿ ಕಳೆಗಟ್ಟಿದ್ದ ಸುಗ್ಗಿಯ ಸಂಕ್ರಾಂತಿಯ ಜಾತ್ರೆಯಲ್ಲಿ ಸ್ಥಳೀಯ ರೈತರು, ಕುಶಲಕರ್ಮಿಗಳು ಮತ್ತು ಕಲಾವಿದರು ಭಾಗವಹಿಸಿದ್ದರು.ಈ ವೇಳೆ ಈಶಾ ಕೇಂದ್ರದಲ್ಲಿ ವಿವಿಧ ಆಹಾರ, ಸ್ಥಳೀಯ ನೇಯ್ಗೆ, ತಾಜಾ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಮಳಿಗೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕರ್ನಾಟಕ ಲೋಕಾಯುಕ್ತರಾದ ಬಿ.ಎಸ್.ಪಾಟೀಲ್, ಇಸ್ರೋದ ಮಾಜಿ ನಿರ್ದೇಶಕರಾದ ಕಿರಣ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯದ ಸರ್ಕಾರದ ಕಾರ್ಯದರ್ಶಿ ರಂದೀಪ್.ಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.