Advertisement

ಸಂಕಷ್ಟಗಳ ದೂರ ಮಾಡಲಿ ಸಂಕ್ರಮಣ

04:12 PM Mar 26, 2019 | |

ಉತ್ತರ ಕರ್ನಾಟಕದ ಭಾಗದಲ್ಲಿ ಎರಡು ದಿನಗಳ ಹಬ್ಬವಾದ ಸಂಕ್ರಮಣವನ್ನು ಹಳೆಯದನ್ನು ತೊರೆದು, ಮನೆ ಸ್ವಚ್ಛಗೊಳಿಸಿ, ರಂಗವಲ್ಲಿ ಹಾಕಿ ಹೊಸದನ್ನು ಪಡೆಯುವ ಭೋಗಿ ಹಬ್ಬದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎಳ್ಳು ಹಚ್ಚಿ ಅಭ್ಯಂಗ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆಗಳನ್ನು ಸಮರ್ಪಿಸುತ್ತಾರೆ.

Advertisement

ಹಬ್ಬಗಳ ನಾಡು ನಮ್ಮದು. ವರ್ಷದಲ್ಲಿ ದೀಪಾವಳಿ, ದಸರಾ, ರಂಜಾನ್‌, ಕ್ರಿಸ್‌ಮಸ್‌, ರಾಮನವಮಿ, ಯುಗಾದಿ ಎಂಬೆಲ್ಲ ನೂರಾರು ಹಬ್ಬಗಳನ್ನು ಆಚರಿಸುವುದು ಭಾರತ ದೇಶದ ವೈಶಿಷ್ಟ್ಯವಾಗಿದೆ. ಅಷ್ಟೆ ಅಲ್ಲದೆ ಪ್ರತಿ ಹಬ್ಬಕ್ಕೂ ತನ್ನದೆ ಆದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಕಾಳಜಿ, ಆರೋಗ್ಯದ ವಿಚಾರಗಳು, ಸ್ನೇಹ, ಭಾÅತೃತ್ವ, ಪ್ರೀತಿ, ಮಮಕಾರಗಳ ಭಾವನಾವೇಶ ಎದ್ದುಕಾಣುತ್ತದೆ. ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಬಹುತೇಕ ಭಾರತೀಯ ಹಬ್ಬಗಳಲ್ಲಿ ಗುರುತಿಸಬಹುದು. ಅಧುನಿಕ ಕಂಪ್ಯೂಟರ್‌ ಯುಗ ಅಥವಾ ಒತ್ತಡಯುಕ್ತ ಜೀವನದಲ್ಲಿ ಹಬ್ಬಗಳ ಮಹತ್ವ ಹೆಚ್ಚುತ್ತಲಿರುವುದು ಸಂತಸದಾಯಕ ವಿಷಯ. ಹಬ್ಬಗಳಿಂದ ಸಂತೋಷ, ಸಡಗರ, ಸಂಭ್ರಮ ತುಂಬಿರುವುದರಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹಬ್ಬಗಳು ಧನಾತ್ಮಕ ಪರಿಣಾಮ ಬೀರುತ್ತವೆ. ಹಬ್ಬಗಳು ಎಲ್ಲ ಧರ್ಮಗಳ ಆಚರಣೆಗಳಿಗೆ ತಕ್ಕಂತಿರುತ್ತವೆ. ಸರ್ವಧರ್ಮಗಳ ಸುಂದರ ಸಂಗಮದಂತಿರುವ ಭಾರತದಲ್ಲಿ ಜಗತ್ತಿನ ಯಾವ ಭಾಗದಲ್ಲಿಯೂ ಇಲ್ಲದಂಥ ವೈವಿಧ್ಯಮಯ ಹಬ್ಬಗಳಿವೆ. ಕೆಲ ಹಬ್ಬಗಳನ್ನು ಎಲ್ಲೆಡೆ ಆಚರಿಸಿದರೂ ಸಹ ಹೆಸರು ಮಾತ್ರ ಬೇರೆಯಾಗಿರುವುದನ್ನು ಕಾಣುತ್ತೇವೆ. ಹಾಗೇ ಸಂಕ್ರಮಣ ಹಬ್ಬ. ಸುಗ್ಗಿಯ ಹಬ್ಬ ಎನಿಸಿಕೊಂಡಿರುವ ಸಂಕ್ರಮಣದ ಸೊಬಗು ನಾಡಿನಲ್ಲೆಡೆ ತುಂಬಿಕೊಳ್ಳುತ್ತಲಿದೆ.

ಉತ್ತರ ಕರ್ನಾಟಕದ ಭಾಗದಲ್ಲಿ ಎರಡು ದಿನಗಳ ಹಬ್ಬವಾದ ಸಂಕ್ರಮಣವನ್ನು ಹಳೆಯದನ್ನು ತೊರೆದು, ಮನೆ ಸ್ವತ್ಛಗೊಳಿಸಿ, ರಂಗವಲ್ಲಿ ಹಾಕಿ ಹೊಸದನ್ನು ಪಡೆಯುವ ಭೋಗಿ ಹಬ್ಬದೊಂದಿಗೆ ಪ್ರಾರಂಭಿಸುತ್ತಾರೆ. ಬೆಳಿಗ್ಗೆ ಎಳ್ಳು ಹಚ್ಚಿ ಅಭ್ಯಂಗ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರಿಗೆ ವಿಶೇಷ ಪೂಜೆಗಳನ್ನು ಸಮರ್ಪಿಸುತ್ತಾರೆ. ದೇವರಿಗೆ ಹಾಗೂ ಗಂಡು ಮಕ್ಕಳಿಗೆ ಆರತಿ ಬೆಳಗುತ್ತಾರೆ. ಎತ್ತುಗಳಿಗೆ ಮೈ ತೊಳೆದು, ಕೊಂಬುಗಳಿಗೆ ಬಣ್ಣ ಹಚ್ಚಿ, ಗೆಜ್ಜೆ-ತುರಾಯಿ ಕಟ್ಟಿ, ಪೂಜಿಸುತ್ತಾರೆ. ಮತ್ತೆ ಕೆಲ ಕಡೆಗೆ ದನಕರುಗಳನ್ನು ಕಿಚ್ಚು ಹಾಯಿಸುತ್ತಾರೆ. ಭೋಗಿಯಂದು ಗಜ್ಜರಿ, ಸೌತೆಕಾಯಿ, ಎಲ್ಲ ತರಕಾರಿ, ಸೊಪ್ಪು, ಕಡಲೆಕಾಯಿ, ಅವರೆ, ತೊಗರಿ ಸೇರಿದಂತೆ ಎಲ್ಲ ಬಗೆಯ ಮಿಶ್ರಣ ಪಲ್ಲೆ, ಎಳ್ಳು, ಶೇಂಗಾ, ಪುಟಾಣಿ, ಗುರೆಳ್ಳ, ಕರಿ-ಬಿಳಿ ಎಳ್ಳು, ಬೆಳ್ಳುಳ್ಳಿ ಸೇರಿದಂತೆ ತರಹೇವಾರಿ ಚಟ್ನಿಗಳು, ಎಳ್ಳು-ಬೆಲ್ಲದ ಉಂಡಿ, ಶೇಂಗಾ ಉಂಡಿಗಳ ಸಿಹಿ. ಬಿಳಿ ಎಳ್ಳು ಹಚ್ಚಿದ ಸಜ್ಜಿ, ಜೋಳದ ರೊಟ್ಟಿ, ಬಾರೆಹಣ್ಣು, ಬಾಳೆಹಣ್ಣು, ಬೆಲ್ಲದಚ್ಚು, ಕಲ್ಲುಸಕ್ಕರೆ, ಕಬ್ಬು, ಕಡುಬು, ಕಡಲೆಕಾಯಿ, ಎಳ್ಳು-ಬೆಲ್ಲದ ಮಿಶ್ರಣ ಹೀಗೆ ವಿಶೇಷ ನೈವೇದ್ಯ ದೇವರಿಗೆ ಅರ್ಪಿಸಿ, ಆಪೆ¤àಷ್ಟರಿಗೆ ಹಂಚಿ ತಾವೂ ಸ್ವೀಕರಿಸುತ್ತಾರೆ. ಎರಡನೇ ದಿನವಾದ ಸಂಕ್ರಮಣದಂದು ಹೊಸ ಬಟ್ಟೆ ಧರಿಸಿ, ದೇವರಿಗೆ ಪೂಜೆ ಸಲ್ಲಿಸಿ, ಎಳ್ಳುಬೆಲ್ಲ ಕೊಟ್ಟು ನಾವು ನೀವು ಎಳ್ಳುಬೆಲ್ಲದಂಗ ಇರೋಣ, ಎಳ್ಳು ಬೆಲ್ಲ ತೊಗೊಂಡು ಒಳ್ಳೆ ಮಾತಾಡೋಣ ಎಂದು ಹೇಳುತ್ತ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ವರ್ಷದುದ್ದಕ್ಕೂ ವಿವಿಧ ಕಾರಣಕ್ಕೆ ಕೆಟ್ಟಿರುವ ಮನಸ್ಸುಗಳನ್ನು ಕೂಡಿಸಿಕೊಂಡು ಜೀವನದಲ್ಲಿ ಸಾಮರಸ್ಯ ಬೆಳೆಸಿಕೊಳ್ಳಲು, ಕಹಿ ಮರೆತು ಸಿಹಿ ತಿನ್ನೋಣ ಎಂದು ಸಾಂಕೇತಿಕವಾಗಿ ಎಳ್ಳು-ಬೆಲ್ಲದ ಮಿಶ್ರಣ ಊರಿನ ಎಲ್ಲರಿಗೂ ಹಂಚಿ ಸ್ನೇಹ, ಪ್ರೀತಿ, ಸೌಹಾರ್ದತೆ ಬೆಳೆಸಿಕೊಳ್ಳುತ್ತಾರೆ. ದೂರದೂರಿನ ಮಿತ್ರ-ಬಂಧುಗಳಿಗೆ ಅಂಚೆ, ಕೊರಿಯರ್‌ ಮೂಲಕ ಉತ್ತಮ ಸಂದೇಶದೊಂದಿಗೆ ಎಳ್ಳು-ಬೆಲ್ಲ ವಿನಿಮಯ ನಡೆಯುತ್ತದೆ.

ಉತ್ತರಾಯಣ  ಪುಣ್ಯಕಾಲ- ಜೀವಿಗಳಿಗೆ ಆಧಾರಪ್ರಾಯನೆನಿಸಿದ ಸೂರ್ಯನು ದಕ್ಷಿಣ ಪಥದಿಂದ ಉತ್ತರ ಪಥದತ್ತ ಸಾಗುವ ಪುಣ್ಯಕಾಲ. ಮಕರ ಕರ್ಕಾಟಕ ಸಂಕ್ರಾಂತಿ ವೃತ್ತದಲ್ಲಿ ಸೂರ್ಯನು ಬರುವುದರಿಂದ ಇದು ಸೂರ್ಯದೇವನ ಆರಾಧನಾ ಹಬ್ಬವೆಂದೂ ಕರೆಯಲಾಗುತ್ತಿದೆ. ಭಾರತೀಯ ಕಾಲಮಾನದಂತೆ ಪುಷ್ಯ ಮಾಸದಲ್ಲಿ ಬರುವ ಹಬ್ಬವು ಉತ್ತರಾಯಣ ಪುಣ್ಯಕಾಲ ಅಥವಾ ದೇವತೆಗಳ ಕಾಲದಲ್ಲಿ ಬರುವ ಹಬ್ಬವೆಂದು ಶಾಸ್ತ್ರಜ್ಞರು ಅಭಿಪ್ರಾಯಪಡುತ್ತಾರೆ. ಸಂಕ್ರಮಣದ ಉತ್ತರಾಯಣ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ಹೇಳಲಾಗುತ್ತದೆ. ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಬಹುತೇಕರು ನದಿಗಳ ಪುಣ್ಯಸ್ನಾನ ಮಾಡುತ್ತಾರೆ. ಧಾರ್ಮಿಕ ಶ್ರೇಷ್ಠತೆ ಪಡೆದ ಗಂಗಾ, ಕೃಷ್ಣಾ, ತುಂಗಾ, ಕಾವೇರಿ ನದಿಗಳಲ್ಲಂತೂ ಹಬ್ಬದ ದಿನ ಲಕ್ಷಾಂತರ ಭಕ್ತರು ಪುಣ್ಯಸ್ನಾನ ಮಾಡುವರು. ಕರ್ಕಾಟಕ ವೃತ್ತಕ್ಕೆ ಸೂರ್ಯನು ಬರುವುದರಿಂದ ಮೈಕೊರೆಯುವ ಚಳಿಗಾಲ ಕೊಂಚ ದೂರವಾಗಿ ಬೇಸಿಗೆ ಪ್ರಾರಂಭವಾಗುವುದು. ಹಾಗೂ ಈವರೆಗೆ ದೊಡ್ಡದಾಗಿದ್ದ ರಾತ್ರಿ ಹೊತ್ತು ಕಡಿಮೆಯಾಗಿ ಹಗಲು ದೊಡ್ಡದಾಗುತ್ತವೆ. ತಮಸೋ ಮಾ ಜ್ಯೋತಿರ್ಗಮಯ ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವಂತೆ ಜ್ಞಾನದ ಸಂಕೇತವಾದ ಬೆಳಕು ಹೆಚ್ಚಾಗುವ ಕಾಲ ಜ್ಞಾನ ತರುವ ಹಬ್ಬವಾಗಿದೆ. ಶಾಸ್ತ್ರಗಳ ಪ್ರಕಾರ ಸಂಕ್ರಮಣದಂದು ಕಪ್ಪು ಎಳ್ಳುಗಳಿಂದ ಸ್ನಾನ ಮಾಡಿ, ಬ್ರಾಹ್ಮಣರಿಗೆ ಎಳ್ಳುದಾನ ಮಾಡುವುದು ವಾಡಿಕೆ. ಪುಣ್ಯದಿನದ ಈ ದಾನದಿಂದ ಸೂರ್ಯನು ಸಂತುಷ್ಟನಾಗಿ ಆಜನ್ಮಪರ್ಯಂತ ಅನುಗ್ರಹಿಸಿ, ಸಕಲ ಇಷ್ಟಾರ್ಥ ಸಿದ್ಧಿಸುತ್ತಾನೆಂಬ ನಂಬಿಕೆಯಿದೆ. ಶ್ರೀ ಕೃಷ್ಣಪರಮಾತ್ಮನು ಗೀತೆಯಲ್ಲಿ ಹೇಳಿದಂತೆ ಅಯಣಗಳಲ್ಲಿ ಉತ್ತರಾಯಣವೇ ಶ್ರೇಷ್ಠವಾಗಿದೆ. ಕುರುಕ್ಷೇತ್ರ ಯುದ್ಧದಲ್ಲಿ ಇಚ್ಛಾಮರಣಿಯಾದ ಭೀಷ್ಮ ಪಿತಾಮಹನು ಅರ್ಜುನನ ಬಾಣಗಳ ಶರಶಯೆÂಯಲ್ಲಿ ಮಲಗಿ ಯಮಯಾತನೆ ಅನುಭವಿಸುತ್ತಿದ್ದರೂ ದಕ್ಷಿಣಾಯಣದಲ್ಲಿ ದೇಹತ್ಯಾಗ ಬೇಡವೆಂದು ಉತ್ತರಾಯಣ ಕಾಲದವರೆಗೂ ಕಾಯುವ ಕಥೆಯಿದೆ. ಶಿವ-ಪಾರ್ವತಿಯರ ವಿವಾಹ, ಬ್ರಹ್ಮದೇವನು ಜಗತ್ತಿನ ಸೃಷ್ಟಿ ಪ್ರಾರಂಭಿಸಿದ್ದು, ಇಂದ್ರದೇವನಿಗೆ ಗೌತಮ ಮುನಿಗಳು ಶಾಪ ವಿಮೋಚನೆ ಮಾಡಿದ್ದು, ಶ್ರೀಮನ್‌ನಾರಾಯಣನು ವರಹಾವತಾರದಲ್ಲಿ ಭೂಮಿಗೆ ಪಾದಸ್ಪರ್ಷ ಮಾಡಿದ್ದು, ಸಮುದ್ರ ಮಂಥನದಲ್ಲಿ ಮಹಾಲಕ್ಷಿ¾à ಅವತರಿಸಿದ್ದು, ಋಷಿ-ಮುನಿಗಳು ತಪಸ್ಸು ಮಾಡಿದ್ದು ಉತ್ತರಾಯಣದ ಪುಣ್ಯಕಾಲದಲ್ಲೇ ಎಂದು ಪಂಡಿತರು ಹೇಳುತ್ತಾರೆ. ಈಗಲೂ ವಿವಾಹ, ನಾಮಕರಣ, ಗೃಹಪ್ರವೇಶಗಳಂತ ಶುಭ ಕಾರ್ಯಗಳು ಉತ್ತರಾಯಣದಲ್ಲೆ ಜರುಗುತ್ತವೆ.

ಹಬ್ಬದಲ್ಲಿ ವಿಜ್ಞಾನ
ಸಂಕ್ರಮಣ ಹಬ್ಬದಲ್ಲೂ ಇತರೆ ಹಬ್ಬಗಳಂತೆ ವೈಜ್ಞಾನಿಕ ಭಾವ ಅಡಕವಾಗಿದೆ. ಶುದ್ಧ ಚಳಿಗಾಲದಲ್ಲಿ ಬರುವ ಸಂಕ್ರಮಣದಲ್ಲಿ ಎಳ್ಳು, ಕೊಬ್ಬರಿ, ಕಡಲೆಕಾಯಿಗಳ ಸೇವನೆಯಿಂದ ಚಳಿಗೆ ಸುಕ್ಕುಗಟ್ಟಿದ ಚರ್ಮಕ್ಕೆ ಎಣ್ಣೆ ಅಂಶ ದೊರೆತು, ಚರ್ಮ ಒಡೆಯುವಿಕೆ ನಿಲ್ಲುತ್ತದೆ. ಕಾಂತಿ ಹೆಚ್ಚುತ್ತದೆ. ಅದರಂತೆ ರೈತನ ಮಿತ್ರರಾದ ಎತ್ತುಗಳು ಸೇರಿದಂತೆ ದನ-ಕರುಗಳನ್ನು ಕಿಚ್ಚು ಹಾಯಿಸುವುದರಿಂದ ಅವುಗಳ ಮೈಮೇಲೆ ಮೆತ್ತಿಕೊಂಡಿರುವ ಉಣ್ಣೆಯಂತ ಉಪದ್ರವಿ ಜೀವಿಗಳು ಶಾಖಕ್ಕೆ ಬಿದ್ದು ಹೋಗುವುದರಿಂದ ದನಗಳಿಗೆ ಕೊಂಚ ಹಿತವಾಗುವುದು.

Advertisement

ವಿವಿಧೆಡೆ ಆಚರಣೆ
ಸಂಕ್ರಾಂತಿಯ ಸಂಭ್ರಮ ದೇಶಾದ್ಯಂತ ನಡೆಯುವುದು. ಹಬ್ಬ ಒಂದಾದರೂ ಹೆಸರು ಬೇರೆಯಾಗಿರುವುದನ್ನು ಕಾಣುತ್ತೇವೆ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಸಂಕ್ರಮಣ, ತಮಿಳುನಾಡಿನಲ್ಲಿ ಪೊಂಗಲ್‌, ಕೇರಳದಲ್ಲಿ ಮಕರ ವಿಳಕ್ಕು, ಪಂಜಾಬ್‌ ಹಾಗೂ ಹರಿಯಾಣದಲ್ಲಿ ಲೋಹರಿ, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬೋಗಲಿ ಬಿಹು, ಗುಜರಾತ, ರಾಜಸ್ಥಾನದಲ್ಲಿ ಉತ್ತರಾಯಣ, ಮಹಾರಾಷ್ಟ್ರದಲ್ಲಿ ಕುಸುರಕಾಳ ಅಥವಾ ಎಳ್ಳು ಲಡ್ಡು ವಿತರಿಸಿ ತಿಳಗೂಳ್‌ ಘಾÂ, ಆಣಿ ಘೋಡ್‌ ಘೋಡ್‌ ಬೋಲಾ ಎನ್ನುವರು.

ಭೀಕರ ಬರಗಾಲದ ನಡುವೆಯೂ ಸಂಭ್ರಮದಿಂದ ಆಚರಿಸುವ ಸಂಕ್ರಮಣವು ನಾಡಿನ ಜನತೆಯ ಸಂಕಷ್ಟಗಳನ್ನು ದೂರಮಾಡಿ, ಸ್ನೇಹ, ಸುಖ, ಶಾಂತಿ ನೆಮ್ಮದಿಗಳು ಎಲ್ಲರ ಬಾಳಿನಲ್ಲಿ ನಲಿದಾಡಲಿ ಎಂದು ಆಶಿಸೋಣ.

– ಬಿ.ಟಿ. ಪತ್ತಾರ್‌

Advertisement

Udayavani is now on Telegram. Click here to join our channel and stay updated with the latest news.

Next