Advertisement

Makar Sankranti 2024; ರಾಜ್ಯಾದ್ಯಂತ ಸಂಭ್ರಮದ ಮಕರ ಸಂಕ್ರಾಂತಿ ಆಚರಣೆ

09:07 PM Jan 15, 2024 | Team Udayavani |

ಮಕರ ಸಂಕ್ರಾತಿಯನ್ನು ಸೋಮವಾರ ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಯಿತು. ಎಲ್ಲ ದೇವಾಲಯ ಹಾಗೂ ಪ್ರವಾಸಿತಾಣಗಳಲ್ಲೂ ಜನ ಜಂಗುಳಿ ಹೆಚ್ಚಿತ್ತು. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಪ್ರವಾಸಿಗರು ಕಾರವಾರ, ಗೋಕರ್ಣ, ಮುರುಡೇಶ್ವರ ಸೇರಿ ವಿವಿಧೆಡೆ ಸಮುದ್ರ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸಿದರು. ತುಂಗಭದ್ರಾ ನದಿ ದಡದಲ್ಲಿ ಸಾವಿರಾರು ಜನರು ಗಂಗಾಪೂಜೆ ನೆರವೇರಿಸಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಿದರು.

Advertisement

ಹುಲಿಗೆಮ್ಮನ ಸನ್ನಿಧಿಗೆ ಭಕ್ತರ ದಂಡು
ಕೊಪ್ಪಳ: ನಾಡಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ಸನ್ನಿಧಿಗೆ ಮಕರ ಸಂಕ್ರಮಣ ಪ್ರಯುಕ್ತ ಸೋಮವಾರ ಭಕ್ತರ ದಂಡೇ ಹರಿದು ಬಂದಿತ್ತು. ತುಂಗಭದ್ರೆ ನದಿ ತಟದಲ್ಲಿನ ನೀರಿನಲ್ಲಿ ಮಿಂದೆದ್ದ ಭಕ್ತಗಣ ದೇವಿಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಿಸಿ ಪ್ರಾರ್ಥಿಸಿದರು. ನಾರಿಯರು ದೇವಿಗೆ ಹಸಿರು ಸೀರೆ, ಬಳೆ, ಮುಡಿಪು ಸೇರಿ ಬಂಗಾರದ ಆಭರಣಗಳು ಹಾಗೂ ನವ ಧಾನ್ಯಗಳನ್ನು ಅರ್ಪಿಸಿದರು. ಪ್ರತಿ ವರ್ಷವೂ ತುಂಗಭದ್ರೆ ಮೈದುಂಬಿಕೊಂಡಿರುತ್ತಿತ್ತು. ಆದರೆ ಈ ಬಾರಿ ಮಳೆಯ ಕೊರತೆ ಆಗಿದ್ದರಿಂದ ಡ್ಯಾಂ ಖಾಲಿ ಖಾಲಿಯಾಗಿದೆ. ಇದರಿಂದ ನದಿಯ ತಟಕ್ಕೂ ಸಮರ್ಪಕ ನೀರು ಹರಿಸಿಲ್ಲ. ಇರುವ ನೀರಿನಲ್ಲೇ ಭಕು¤ ಮಿಂದೆದ್ದರು.

ಗವಿಮಠದ ಗದ್ದುಗೆಯಲ್ಲೂ ಭಕ್ತರ ದಂಡು
ಕೊಪ್ಪಳ: ಗವಿಮಠದ ಆವರಣದಲ್ಲಿಯೂ ಬೆಳಗ್ಗೆಯಿಂದ ಸಂಜೆವರೆಗೂ ಅಪಾರ ಭಕ್ತರ ದಂಡು ಆಗಮಿಸಿತ್ತು. ಮಠದ ಕತೃ ಗದ್ದುಗೆಯ ಸುತ್ತ ಗಂಟೆಗಟ್ಟಲೇ ಸುಡು ಬಿಸಿಲಿನಲ್ಲೂ ಸರದಿ ಸಾಲಿನಲ್ಲಿ ನಿಂತು ಶ್ರೀ ಗವಿಸಿದ್ದೇಶ್ವರ ಮೂರ್ತಿಗೆ ಕಾಯಿ, ಕರ್ಪೂರ ಅರ್ಪಿಸಿ ನಮಿಸಿದರು.

ಹಂಪಿಗೆ ಪ್ರವಾಸಿಗರ ದಂಡು
ಹೊಸಪೇಟೆ: ಮಕರ ಸಂಕ್ರಾತಿ ಪ್ರಯುಕ್ತ ದಕ್ಷಿಣ ಕಾಶಿ ಖ್ಯಾತಿ ಹಂಪಿಗೆ ರಾಜ್ಯ, ನೆರೆ ರಾಜ್ಯದಿಂದ ಸಾವಿರಾರು ಭಕ್ತರು ಆಗಮಿಸಿ ಶ್ರೀ ವಿರೂಪಾಕ್ಷ ಹಾಗೂ ಪಂಪಾದೇವಿ ದರ್ಶನ ಪಡೆದರು. ಸಂಕ್ರಾಂತಿ ಸಂಭ್ರಮದ ನಿಮಿತ್ತ ಭಾನುವಾರವೇ ಹಂಪಿ ಕಡೆ ಮುಖ ಮಾಡಿದ್ದ ಪ್ರವಾಸಿಗರು ನಸುಕಿನಲ್ಲಿ ತುಂಗಾ ನದಿಯಲ್ಲಿ ಸ್ನಾನಾದಿಗಳನ್ನು ಪೂರ್ಣಗೊಳಿಸಿ, ಸರತಿ ಸಾಲಿನಲ್ಲಿ ನಿಂತು ವಿರೂಪಾಕ್ಷೇಶ್ವರನ ದರ್ಶನ ಪಡೆದರು. ಹಬ್ಬದ ಹಿನ್ನೆಲೆಯಲ್ಲಿ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ತುಂಗಾನದಿ ತೀರದಲ್ಲಿ ಪರಿವಾರ ಸಮೇತ ಭಕ್ತರು ಭೋಜನ ಸವಿದರು. ವಿರೂಪಾಕ್ಷೇಶ್ವರ ದೇವಸ್ಥಾನದ ಹತ್ತಿರದ ಸ್ನಾನಘಟ್ಟ, ಕೋದಂಡರಾಮ ದೇವಾಲಯ ಹಾಗೂ ಪುರಂದರ ಮಂಟಪದ ಬಳಿ ಯಾತ್ರಾರ್ಥಿಗಳು ಸಹ ಭೋಜನ ಮಾಡಿದರು.

ಮುರುಡೇಶ್ವರ, ಕಾರವಾರ, ಗೋಕರ್ಣದಲ್ಲಿ ಸಮುದ್ರಸ್ನಾನ
ಕಾರವಾರ: ಜಿಲ್ಲಾದ್ಯಂತ ಮಕರ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಯಿತು. ಎಲ್ಲ ದೇವಾಲಯ ಹಾಗೂ ಪ್ರವಾಸಿತಾಣಗಳಲ್ಲೂ ಜನ ಜಂಗುಳಿ ಹೆಚ್ಚಿತ್ತು. ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬಂದ ಪ್ರವಾಸಿಗರು ಕಾರವಾರ, ಗೋಕರ್ಣ, ಮುರುಡೇಶ್ವರ ಸೇರಿ ವಿವಿಧೆಡೆ ಸಮುದ್ರ ಸ್ನಾನ ಮಾಡಿ ಸೂರ್ಯದೇವನಿಗೆ ನಮಸ್ಕರಿಸಿದರು. ಸಮುದ್ರ ಸ್ನಾನದ ನಂತರ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕುಮಟಾ ತಾಲೂಕಿನ ಯಾಣ, ಶಿರಸಿ ತಾಲೂಕಿನ ಸಹಸ್ರಲಿಂಗ, ಜೋಯಿಡಾ ತಾಲೂಕಿನ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಸಂಕ್ರಾಂತಿ ನಿಮಿತ್ತ ಭಕ್ತರ ಸಂಖ್ಯೆ ಹೆಚ್ಚಿತ್ತು.

Advertisement

ತುಂಗಭದ್ರಾ ನದಿ ತಟದಲ್ಲಿ ಸಂಕ್ರಾಂತಿ ಸಂಭ್ರಮ
ಹರಿಹರ: ನಗರದ ತುಂಗಭದ್ರಾ ನದಿ ದಡದಲ್ಲಿ ಸಾವಿರಾರು ಜನರು ಗಂಗಾಪೂಜೆ ನೆರವೇರಿಸಿ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ನದಿಯ ಪಶ್ಚಿಮ ಭಾಗವಾದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹೆಚ್ಚಿನ ಜನದಟ್ಟಣೆ ಇತ್ತು. ಪೂರ್ವ ಭಾಗದ ವಾಟರ್‌ ವರ್ಕ್ಸ್, ರೈಲ್ವೆ ಸೇತುವೆ, ರಾಘವೇಂದ್ರ ಮಠದ ಸಮೀಪವೂ ಜನರು ಸೇರಿದ್ದರು. ಹರಿಹರ, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ ಇತರೆ ಭಾಗದಿಂದ ಜನರು ಆಗಮಿಸಿದ್ದರು. ತುಂಗಾ, ಭದ್ರಾ, ಹರಿದ್ರಾವತಿ ಹೀಗೆ ತ್ರಿವೇಣಿ ಸಂಗಮ ಇಲ್ಲಿದ್ದು, ಜನರನ್ನು ಆಕರ್ಷಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next