Advertisement
ಮಾಕಳಿ ದುರ್ಗ ಹತ್ತಲು ವಾರಂತ್ಯದ ದಿನಗಳಾದ ಶನಿವಾರ, ಭಾನುವಾರಗಳಂದು 485 ಹಾಗೂ ಇತರೆ ದಿನಗಳಲ್ಲಿ 303 ಶುಲ್ಕ ಪಾವತಿಸುವಂತೆ ಶುಲ್ಕ ವಿಧಿಸಲಾಗಿದೆ. ಈ ಹಿಂದೆ ವಾರದ ಎಲ್ಲಾ ದಿನಗಳಲ್ಲೂ ಮಾಕಳಿ ಬೆಟ್ಟಕ್ಕೆ ಹೋಗುವ ಚಾರಣಿಗರು ಆನ್‌ಲೈನ್ ಮೂಲಕ 250 ರೂ ಶುಲ್ಕ ಪಾವತಿಸಬೇಕಿತ್ತು. ಆದರೆ, ಮೂರು ವಾರಗಳಿಂದ ಈಚೆಗೆ ಈ ನಿಯಮ ಜಾರಿಗೆ ಬಂದಿದೆ. ಶುಲ್ಕ ಏರಿಕೆಯಲ್ಲಿ ಜಿಎಸ್‌ಟಿ 74 ರೂ., ಆನ್ ಲೈನ್ ಬುಕ್ಕಿಂಗ್ ಶುಲ್ಕ 11 ರೂ. ಸಹ ಸೇರಿಸಲಾಗಿದೆ. ಈ ನಿಯಮ ಮಾಕಳಿ ಬೆಟ್ಟಕ್ಕಷ್ಟೇ ಸೀಮಿತವಾಗಿರದೆ, ಅರಣ್ಯ ಇಲಾಖೆ ರಾಜ್ಯದಲ್ಲಿ ಇಕೋ ಟ್ಯೂರೀಸಂ ಅಡಿಯಲ್ಲಿ ಗುರುತಿಸಲಾಗಿರುವ ಸುಮಾರು 15ಕ್ಕೂ ಹೆಚ್ಚಿನ ಚಾರಣ ಪ್ರದೇಶಗಳಲ್ಲೂ ಏರಿಕೆಯಾಗಿದೆ.
Related Articles
Advertisement
ಹಣ ಮಾಡುವ ಬರದಲ್ಲಿ ಇಂದಿಗೂ ಸಹ ಇಲಾಖೆಯಿಂದ ಚಾರಣ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಚರ್ ಗೈಡ್‌ಗಳಿಗೆ ಮೂಲಸೌಕರ್ಯವನ್ನು ಒದಗಿಸಲು ಮುಂದಾಗದವರಿಗೆ ಇನ್ನು ಚಾರಣಿಗರಿಗೆ ಇನ್ಯಾವ ರೀತಿಯ ಭದ್ರತೆ ನೀಡುತ್ತಾರೆಂಬ ಅನುಮಾನವೂ ಸದಾ ಕಾಡುತ್ತದೆ ಎಂದು ಸ್ಥಳೀಯ ಚಾರಣಿಗ ಚಿದಾನಂದ್ ದೂರಿದ್ದಾರೆ. ಮಾಕಳಿ ಬೆಟ್ಟದ ಸುತ್ತಮುತ್ತಲಿನ ಸ್ಥಳೀಯ ಗ್ರಾಮಗಳ ಹಾಗೂ ಬೆಟ್ಟವನ್ನು ಹೊಂದಿರುವ ದೊಡ್ಡಬಳ್ಳಾಪುರ ತಾಲೂಕಿನ ಜನರು ಸಹ ಶುಲ್ಕ ಪಾವತಿಸಿಯೇ ಬೆಟ್ಟಕ್ಕೆ ಚಾರಣ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ನಮ್ಮೂರಿನ ಬೆಟ್ಟ ಹತ್ತಲು ನಾವು ಶುಲ್ಕ ನೀಡುವ ಅವೈಜ್ಞಾನಿಕ ಕ್ರಮ ರದ್ದಾಗಬೇಕು ಎಂದು ದೊಡ್ಡಬಳ್ಳಾಪುರದ ಚಾರಣಿಗ ವಿ.ಎಸ್. ರವಿಕುಮಾರ್, ಶಂಕರ್ ಆಗ್ರಹಿಸಿದ್ದಾರೆ.
ಸೌಲಭ್ಯಗಳು ಏನೇನಿರಬೇಕು? : ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಿಕೊಂಡು ಬೆಟ್ಟ ಹತ್ತಲು ಬರುವ 10 ಜನರ ತಂಡಕ್ಕೆ ಒಬ್ಬರಂತೆ ಅರಣ್ಯ ಇಲಾಖೆ ಗೈಡ್‌ಗಳನ್ನು ಜೊತೆಯಲ್ಲಿ ಕಳುಹಿಸಬೇಕು. ಬೆಟ್ಟ ಹತ್ತುವಾಗ ದಾರಿ ತಪ್ಪದಂತೆ ಜಿಪಿಆರ್‌ಎಸ್ ರೂಟ್ ಮ್ಯಾಪಿಂಗ್ ಸೌಲಭ್ಯ, ಗೈಡ್‌ಗಳ ಬಳಿ ಪ್ರಥಮ ಚಿಕಿತ್ಸೆಗೆ ಅಗತ್ಯ ಇರುವ ಔಷಧಿಯ ಕಿಟ್ ಮುಂತಾದ ಸೌಕರ್ಯಗಳನ್ನು ಚಾರಣಿಗರಿಗೆ ನೀಡಬೇಕು. ಅಲ್ಲದೆ, ಚಾರಣದಿಂದ ಹಿಂತಿರುಗಿ ಬಂದವರು ವಿಶ್ರಾಂತಿ ಪಡೆಯುವ ಕೊಠಡಿ, ಕುಡಿಯುವ ನೀರು, ಶೌಚಾಲಯದ ಸೌಲಭ್ಯ, ಚಾರಣಿಗರ ವಾಹನಗಳ ಸುರಕ್ಷತೆ ಮೊದಲಾದ ಅನುಕೂಲಗಳು ಇರಬೇಕು.
ಮೂಲ ಸೌಲಭ್ಯ ನೀಡದೆ ವಂಚನೆ: ಐದು ವರ್ಷಗಳ ಹಿಂದೆ ಮಾಕಳಿ ಬೆಟ್ಟ ಇಕೋ ಟ್ಯೂರೀಸಂ ಪಟ್ಟಿಗೆ ಸೇರ್ಪಡೆಯಾಗಿದೆ. ಇಕೋ ಟ್ಯೂರೀಸಂ ಅಡಿಯಲ್ಲಿ ನೀಡಲಾಗುವ ಯಾವುದೇ ಅನುಕೂಲಗಳು ಮಾಕಳಿ ಬೆಟ್ಟದ ಸಮೀಪ ಇಲ್ಲ. ಅಂದಿನಿಂದಲೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬಂದಿದ್ದರೂ, ಚಾರಣಿಗರಿಗೆ ಸೌಲಭ್ಯಗಳನ್ನು ನೀಡಿದೆ ವಂಚನೆ ಮಾಡಲಾಗಿದೆ.
ಸರ್ಕಾರದಿಂದ ಹಗಲು ದರೋಡೆ: ಆರೋಪ : ಮಾಕಳಿ ದುರ್ಗಕ್ಕೆ ಕಾಲ್ನಡಿಗೆಯಲ್ಲಿ ಹೋಗಲು ಸಹ ಯಾವುದೇ ರೀತಿಯ ಮೆಟ್ಟಿಲುಗಳ ಸೌಕರ್ಯ, ಬೆಟ್ಟದ ತಪ್ಪಲಿನಲ್ಲಿ ಕುಡಿಯುವ ನೀರು ಸೇರಿದಂತೆ ಇಕೋ ಟ್ಯೂರೀಸಂ ನಿಯಮದಲ್ಲಿ ಹೇಳಲಾಗಿರುವ ಕನಿಷ್ಠ ಮೂಲಭೂತ ಸೌಲಭ್ಯ ನೀಡದೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಸರ್ಕಾರದ ಹಗಲು ದರೋಡೆಯಾಗಿದೆ ಎಂದು ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಂಡು ಬೆಟ್ಟ ಹತ್ತಲು ಬೆಂಗಳೂರಿನಿಂದ ಬಂದಿದ್ದ ರಶ್ಮಿ , ರಘು ಹಾಗೂ ಸ್ನೇಹಿತರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.