Advertisement
ಕುರ್ನಾಡು ನಿವಾಸಿ ಪ್ರವೀಣ್ ಸಪಲ್ಯ (28) ತನ್ನ ಬೈಕ್ ಅನ್ನು ನೇತ್ರಾವತಿ ಸೇತುವೆಯಲ್ಲಿ ಇಟ್ಟು ನಾಪತ್ತೆಯಾಗಿದ್ದ. ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿದ್ದ ಪ್ರವೀಣ್ ಸಾಲಗಾರರಿಂದ ಮುಕ್ತಿ ಪಡೆಯಲು ಆತ್ಮಹತ್ಯೆಯ ನಾಟಕವಾಡಿ ಶಿವಮೊಗ್ಗಕ್ಕೆ ತಲುಪಿದ್ದ. ಆದರೆ ಅನಾಥ ಬೈಕ್ ಕಂಡು ಬಂದ ಹಿನ್ನಲೆಯಲ್ಲಿ ಈತ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆಗೈದಿರುವ ಸಾಧ್ಯತೆಯ ಹಿನ್ಬಲೆಯಲ್ಲಿ ಹುಡುಕಾಟ ಆರಂಭವಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಮಾಹಿತಿ ತಿಳಿದು ತನ್ನ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿ ತಾನು ಸತ್ತಿಲ್ಲ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಇದ್ದೇನೆ. ಆರ್ಥಿಕ ಸಮಸ್ಯೆಯಿಂದ ಮನೆಗೆ ಬರಲಾಗುತ್ತಿಲ್ಲ ಎಂದು ತಿಳಿಸಿದ್ದ ಎನ್ನಲಾಗಿದೆ.
Related Articles
Advertisement
ಮಂಗಳೂರಿನ ಆಪ್ಟಿಕಲ್ ಶಾಪ್ ನಲ್ಲಿ ಕೆಲಸಕ್ಕಿದ್ದ ಪ್ರವೀಣ್ ನಿನ್ನೆ ರಾತ್ರಿ 7.30ಕ್ಕೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದು, ನೇತ್ರಾವತಿ ಸೇತುವೆ ದಾಟಿ ಬಂದು ವಾಪಾಸ್ ಮಂಗಳುರು ಕಡೆ ಸಂಚರಿಸಿದ್ದು ನೇತ್ರಾವತಿ ಸೇತುವೆ ಬಳಿ ಬೈಕ್ ನಿಲ್ಲಿಸಿ ಬೈಕ್ ನ ಇಂಡಿಕೇಟರ್ ಸೂಚನೆಯನ್ನ ಚಾಲನೆಯಲ್ಲಿಟ್ಟು ನಾಪತ್ತೆಯಾಗಿದ್ದ. ರಾತ್ರಿ ಸುಮಾರು ಎಂಟು ಗಂಟೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಬೈಕ್ ಸಂಖ್ಯೆಯ ಆಧಾರದಲ್ಲಿ ವಿಳಾಸ ಪತ್ತೆ ಹಚ್ಚಲಾಗಿತ್ತು. ಪೊಲೀಸರು, ಅಗ್ನಿಶಾಮಕ ಸಿಬಂದಿಗಳು, ಸ್ಥಳೀಯ ಈಜುಗಾರರು, ಪ್ರವೀಣ್ ಕುಟುಂಬದ ಸದಸ್ಯರು, ಸ್ನೇಹಿತರು ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚುಜನರು ರಾತ್ರಿ ಎರಡು ಗಂಟೆಯವರೆಗೆ ಸಮುದ್ರ ಸೇರಿದಂತೆ ನದಿ ತಟದಲ್ಲಿ ಹುಡುಕಾಡಿದ್ದು, ಇಂದೂ ಮದ್ಯಾಹ್ನ 11 ಗಂಟೆಯವರೆಗೆ ಹುಡುಕಾಡಿದ್ದು ಪ್ರವೀಣ್ ಪತ್ತೆಯಾಗಿರಲಿಲ್ಲ. ಇದೀಗ ಪ್ರವೀಣ್ ಜೀವಂತವಾಗಿರುವ ಸುದ್ದಿ ತಿಳಿದು ಎಲ್ಲರೂ ನಿರಾಳರಾಗಿದ್ದು ಆತನ ಸ್ನೇಹಿತರು ಸೇರಿದಂತೆ ಕುಟುಂಬದ ಸದಸ್ಯರು ಶಿವಮೊಗ್ಗಕ್ಕೆ ತೆರಳಿದ್ದಾರೆ.
ಸ್ಥಳದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಹುಡುಕಾಟದ ಸಂದರ್ಭದಲ್ಲಿ ಸ್ಥಳದಲ್ಲಿದ್ದರು.
ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.