ಹೊಸದಿಲ್ಲಿ/ಶ್ರೀನಗರ: ಅಫ್ಘಾನಿಸ್ಥಾನದಲ್ಲಿ ಇಪ್ಪತ್ತೈದು ವರ್ಷಗಳ ಹಿಂದೆಯೇ ಜಮ್ಮು ಮತ್ತು ಕಾಶ್ಮೀರ ವಿರೋಧಿ ಚಟುವಟಿಕೆಗಳು ಶುರುವಾಗಿದ್ದವು ಎಂಬ ಅಂಶ ಬೆಳಕಿಗೆ ಬಂದಿದೆ. ಆ ದೇಶದ ನ್ಯಾಷನಲ್ ಡೈರೆಕ್ಟೊರೇಟ್ ಆಫ್ ಸೆಕ್ಯುರಿಟಿ (ಎನ್‌ಡಿಎಸ್) ಕೆಲ ದಿನಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಖೊರೊಸಾನ್ ಪ್ರಾವಿನ್ಸ್ (ಐಎಸ್‌ಕೆಪಿ) ಉಗ್ರ ಸಂಘಟನೆಯ ಮುಖ್ಯಸ್ಥ ಅಸ್ಲಾಂ ಫಾರೂಕಿ ಜತೆಗೆ ಜಮ್ಮು ಮತ್ತು ಕಾಶ್ಮೀರದಿಂದ 25 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಇಜಾಝ್ ಅಹ್ಮದ್ ಅಹಂಗಾರ್ ಎಂಬಾತನನ್ನೂ ಬಂಧಿಸಲಾಗಿದೆ.
1990ರ ದಶಕದಲ್ಲಿ ಉಗ್ರರ ಜತೆಗೆ ಲಿಂಕ್ ಇದ್ದ ಆರೋಪದಲ್ಲಿ ಬಂಧಿಸಲಾಗಿತ್ತು ಮತ್ತು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ನಂತರ ಆತ ಬಾಂಗ್ಲಾದೇಶಕ್ಕೆ ತೆರಳಿ ಪಾಕಿಸ್ತಾನಕ್ಕೆ ತೆರಳಿದ್ದ.
ಆರಂಭದಲ್ಲಿ ಅಹಂಗಾರ್‌ನ ಪ್ರಾಮುಖ್ಯತೆ ಅಫ್ಘಾನ್‌ನ ತನಿಖಾ ಸಂಸ್ಥೆಗೆ ಗೊತ್ತಾಗಿರಲಿಲ್ಲ. ಅನಂತರ ನಡೆದ ವಿಚಾರಣೆ ವೇಳೆ ಆತನೇ ಕೇಂದ್ರಾಡಳಿತ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಪ್ರಮುಖ ನೇಮಕ ಮಾಡಿಕೊಳ್ಳುವ ವ್ಯಕ್ತಿ ಎಂದು ಮೂಲಗಳನ್ನು ಉಲ್ಲೇಖೀಸಿ ‘ದ ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.
ಶ್ರೀನಗರದ ಬುಗಾಂನಲ್ಲಿ ಜನಿಸಿರುವ ಅಹಂಗಾರ್‌ನ ಕುಟುಂಬಕ್ಕೆ ಉಗ್ರ ನಂಟು ಇದೆ. ಆತನ ಮಾವ ಅಬ್ದುಲ್ಲಾ ಘಝನಿ ಲಷ್ಕರ್-ಎ-ತೊಯ್ಯಬಾದ ಕಮಾಂಡರ್ ಆಗಿದ್ದ. ನಂತರ ಅಲ್-ಖೈದಾಕ್ಕೆ ಸೇರಿ ಕೊನೆಯದಾಗಿ ಐಸಿಸ್‌ಗೆ ಸೇರ್ಪಡೆಯಾಗಿದ್ದ.
ಅಹಂಗಾರ್‌ನ ಪುತ್ರ ಅಬ್ದುಲ್ಲಾ ಉಮಿಯಾಸ್ ಅಫ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿ ಬುಡಮೇಲು ಕೃತ್ಯಗಳಲ್ಲಿ ಭಾಗವಹಿಸಿ ಭದ್ರತಾ ಪಡೆಗಳ ಗುಂಡಿಗೆ ಜೀವ ಕಳೆದುಕೊಂಡಿದ್ದ. ಇಝಾಜ್ ಅಹ್ಮದ್‌ನ ಅಳಿಯ ಹುಝಾಫಾ- ಅಲ್-ಬಕಿಸ್ತಾನಿ ಜಮ್ಮು ಮತ್ತು ಕಾಶ್ಮೀರದಲ್ಲಿ ಆನ್‌ಲೈನ್ ಮೂಲಕ ನೇಮಕ ಮಾಡಿಕೊಳ್ಳುತ್ತಿದ್ದಾತ 2019ರಲ್ಲಿ ಕೊಲ್ಲಲ್ಪಟ್ಟಿದ್ದ.
ಇಬ್ಬರು ಫಿನಿಶ್: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್‌ನಲ್ಲಿ ಶುಕ್ರವಾರ ಗುಂಡಿನ ಕಾಳಗ ನಡೆದಿದೆ. ಅದರಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾ ಗಿದೆ. ದೈರೂ ಎಂಬಲ್ಲಿ ಉಗ್ರರಿರುವ ಬಗ್ಗೆ ಮಾಹಿತಿ ದೊರೆತು, ಕಾರ್ಯಾಚರಣೆ ಶುರು ಮಾಡಿದಾಗ ಗುಂಡಿನ ಕಾಳಗ ನಡೆದಿದೆ.