ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯ ವೇಳೆ ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳು ಜಮ್ಮು ಕಾಶ್ಮೀರದ ಆದ್ಯಂತ ಭಾರೀ ಉಗ್ರ ದಾಳಿ ನಡೆಸಲು ಯೋಜಿಸಿವೆ ಎಂದು ಗುಪ್ತಚರ ದಳ ಎಚ್ಚರಿಸಿದೆ.
ಗುಪ್ತಚರ ವರದಿ ಪ್ರಕಾರ, ಪಾಕಿಸ್ಥಾನದ ಕುಖ್ಯಾತ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್) ಲಷ್ಕರ್ ಎ ತಯ್ಯಬ ಮತ್ತು ಜೈಶ್ ಎ ಮೊಹಮ್ಮದ್ ರೀತಿಯ ಮೂರು ಉಗ್ರ ತಂಡಗಳನ್ನು ಜಮ್ಮು ಕಾಶ್ಮೀರದಲ್ಲಿ ಸೃಷ್ಟಿಸಿದೆ.
ಈ ಉಗ್ರ ತಂಡಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಮತ್ತು ಮತಗಟ್ಟೆಗಳನ್ನು ಗುರಿ ಇರಿಸಿ ದಾಳಿ ಮಾಡಲು ಉದ್ದೇಶಿಸಿವೆ.
ಅಫ್ಘಾನಿಸ್ಥಾನದ ಉಗ್ರರನ್ನು ಭಾರತದ ಗಡಿಯೊಳಗೆ ನುಸುಳಿಸಿ ಅವರಿಂದ ಈ ಉಗ್ರ ತಂಡಗಳಿಗೆ ಸ್ಫೋಟಕಗಳನ್ನು ನಿರ್ವಹಿಸುವ ಬಗ್ಗೆ ತರಬೇತಿ ದೊರಕಿಸಲು ಐಎಸ್‌ಐ ಯತ್ನಿಸುತ್ತಿದೆ ಎಂದು ಗುಪ್ತಚರ ವರದಿ ತಿಳಿಸಿದೆ.
ಜಮ್ಮು ಕಾಶ್ಮೀರದಲ್ಲಿ ಎಪ್ರಿಲ್ 11ರಿಂದ ಮೇ 6 ರ ವರೆಗೆ ಐದು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಲೋಕಸಭಾ ಚುನಾವಣೆಗಳ ಬಳಿಕ ವಿಧಾನ ಸಭಾ ಚುನಾವಣೆಗಳನ್ನು ನಡೆಸುವ ಸಾಧ್ಯತೆ ಇದೆ.
ಈಚೆಗಷ್ಟೇ ಚುನಾವಣಾ ಆಯೋಗ ಮತ್ತು ಕೇಂದ್ರ ಗೃಹ ಸಚಿವಾಲಯ ಜಮ್ಮು ಕಾಶ್ಮೀರದಲ್ಲಿನ ಭದ್ರತಾ ಸ್ಥಿತಿಗತಿಯನ್ನು ಉನ್ನತ ಮಟ್ಟದ ಸಭೆಯಲ್ಲಿ ಅವಲೋಕಿಸಿದ್ದು 800 ಅರೆ ಸೈನಿಕ ದಳದ ಸಿಬಂದಿಗಳನ್ನು ರಾಜ್ಯದಲ್ಲಿ ನಿಯೋಜಿಸಲು ನಿರ್ಧರಿಸಿದೆ.