ಮುಂಬೈ: ಮೇಜರ್ ಉನ್ನಿಕೃಷ್ಣನ್ ಅವರ ಜೀವನವನ್ನು ಆದರಿಸಲಾಗಿರುವ ‘ಮೇಜರ್’ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
2008 ನವೆಂಬರ್ 26 ರಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಉನ್ನಿಕೃಷ್ಣನ್ ಅವರ ಕುರಿತಾದ ಸಿನಿಮಾ ಇದಾಗಿದ್ದು ‘ಕ್ಷಣಂ’, ‘ಗೂಡಾಚಾರಿ’ ಮುಂತಾದ ಸಿನಿಮಾಗಳ ಮೂಲಕ ಖ್ಯಾತರಾಗಿರುವ ನಟ ಅಡಿವಿ ಶೇಷ್ ಈ ಸಿನಿಮಾದಲ್ಲಿ ಉನ್ನಿಕೃಷ್ಣನ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟ ಅಡಿವಿ ಶೇಷ್ ಅವರ ಜನ್ಮ ದಿನದಂದು ಚಿತ್ರ ತಂಡ ಬಿಡುಗಡೆಗೊಳಿಸಿರುವ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಪೋಸ್ಟರ್ ನಲ್ಲಿ ನಟ ಅಡಿವಿ ಶೇಷ್ ಕೈಯಲ್ಲಿ ಗನ್ ಹಿಡಿದ ಕಮಾಂಡೋ ಗೆಟಪ್ ನಲ್ಲಿ ಮಿಂಚಿದ್ದಾರೆ.
ಇದನ್ನೂ ಓದಿ:‘ಬಘೀರ’ ನಾಗಿ ತೆರೆಮೇಲೆ ಬರುತ್ತಿದ್ದಾನೆ ಶ್ರೀ ಮುರಳಿ
ಚಿತ್ರದ ಬಹುಪಾಲು ಚಿತ್ರೀಕರಣ ಲಾಕ್ ಡೌನ್ ಸಮಯದಲ್ಲೇ ಮುಗಿದಿದ್ದು, ಚಿತ್ರಕ್ಕಾಗಿ ನಟ ಅಡಿವಿ ಶೇಷ್ ಬಹಳಷ್ಟು ತಯಾರಿ ಮಾಡಿಕೊಂಡಿದ್ದರು. ಸಿನಿಮಾದ ಹಿನ್ನೆಲೆಯಲ್ಲಿ ಸಂದೀಪ್ ಅವರ ಮನೆಗೂ ತೆರಳಿ ಅವರ ಪೋಷಕರಿಂದ ಹಲವಾರು ಮಾಹಿತಿ ಕಲೆಹಾಕಲಾಗಿದೆ. ಈ ಸಿನಿಮಾ ಸಂದೀಪ್ ಉನ್ನಿಕೃಷ್ಣನ್ ಅವರ ಬದುಕಿನ ಇನ್ನೊಂದು ಆಯಾಮವನ್ನು ಬಿಚ್ಚಿಡುತ್ತದೆ ಎಂದು ಚಿತ್ರತಂಡ ತಿಳಿಸಿದೆ.
ಹಿಂದಿ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಶಶಿಕಿರಣ್ ಆ್ಯಕ್ಷನ್ ಕಟ್ ಹೇಳಿದ್ದು, ಶೋಭಿತಾ ಧುಲಿಪಾಲ, ಪ್ರಕಾಶ್ ರಾಜ್, ರೇವತಿ ಮುರುಳಿ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.