Advertisement

ನಕಲು ತನಿಖೆಗೆ ಹಿಂಜರಿದ ಮೇಜರ್‌

01:42 PM Apr 26, 2019 | Team Udayavani |

ಬಾಗಲಕೋಟೆ: ಮಕ್ಕಳ ಶೈಕ್ಷಣಿಕ ಹಂತದ ಮಹತ್ವದ ಘಟ್ಟ ಎಂದೇ ಹೇಳಲಾಗುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ನಡೆದ ಕುರಿತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗಂಭೀರ ಕ್ರಮಕ್ಕೆ ಮುಂದಾಗಿದ್ದ, ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡದ ಆಯುಕ್ತರು ಇದೀಗ ತಮ್ಮ ನಿಲುವು ಸಡಿಲಿಸಿದ್ದಾರೆ.

Advertisement

ಧಾರವಾಡ ಆಯುಕ್ತರ ಕಚೇರಿ ವ್ಯಾಪ್ತಿಯ ಏಳು ಜಿಲ್ಲೆಗಳ 596 ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಸಿಸಿ ಟಿವಿ ಫುಟೇಜ್‌ ಅನ್ನು ಕಡ್ಡಾಯವಾಗಿ ಒಪ್ಪಿಸಲು ಆಯುಕ್ತರು ಕಳೆದ ಮಾ.30ರಂದು ಎಲ್ಲ ಜಿಲ್ಲೆಗಳ ಡಿಡಿಪಿಐ ಹಾಗೂ ಬಿಇಒಗಳಿಗೆ ಆದೇಶ ಹೊರಡಿಸಿದ್ದರು. ಇದರಿಂದ ಸಾಮೂಹಿಕ ನಕಲು ನಡೆಸಿದ್ದರು ಎನ್ನಲಾದ ಕೆಲ ಪರೀಕ್ಷೆ ಕೇಂದ್ರಗಳ ಅಧೀಕ್ಷರು, ಶಿಸ್ತುಕ್ರಮದ ಭೀತಿಯಲ್ಲಿದ್ದರು. ಆದರೆ, ಏ.25ರಂದು ಆಯುಕ್ತರು ಪರಿಷ್ಕೃತ ಆದೇಶ ಹೊರಡಿಸಿ, ಸಿಸಿಟಿವಿ ಫುಟೇಜ್‌ ಸದ್ಯಕ್ಕೆ ಪಡೆಯುವುದನ್ನು ತಡೆ ಹಿಡಿದ್ದಾರೆ. ಹೀಗಾಗಿ ಬಹುತೇಕರು ನಿರಾಳರಾಗಿದ್ದಾರೆ.

ಏನಿದು ಫುಟೇಜ್‌?: ಕಳೆದ ಮಾರ್ಚ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು ನಡೆದಿವೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಕೆಲ ಪರೀಕ್ಷೆ ಕೇಂದ್ರಗಳಿಗೆ ಸ್ವತಃ ಆಯುಕ್ತರೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ ಕೆಲ ಸಿಬ್ಬಂದಿಯನ್ನು ಪರೀಕ್ಷೆ ಕಾರ್ಯದಿಂದ ಬಿಡುಗಡೆಗೊಳಿಸಿದ್ದರು. ಇದಾದ ಬಳಿಕ ಧಾರವಾಡ ಆಯುಕ್ತರ ಕಚೇರಿ ವ್ಯಾಪ್ತಿಯ ಎಲ್ಲಾ ಏಳು ಜಿಲ್ಲೆಗಳ ಪರೀಕ್ಷೆ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ನಡೆದ ಎಲ್ಲ ಚಟುವಟಿಕೆ ಪರಿಶೀಲಿಸಿ ಸಿಸಿಟಿವಿ ಫುಟೇಜ್‌ ನೀಡಲು ಆದೇಶಿಸಿದ್ದರು. ಜತೆಗೆ ಆಯಾ ಜಿಲ್ಲೆಗಳ ಡಿಡಿಪಿಐ, ಬಿಇಒಗಳು, ತಮ್ಮ ವ್ಯಾಪ್ತಿಯ ಪರೀಕ್ಷೆ ಕೇಂದ್ರಗಳ ಫುಟೇಜ್‌ಗಳನ್ನು ಒಂದು ಪೆನ್‌ಡ್ರೈನ್‌ನಲ್ಲಿ ಹಾಕಿಕೊಂಡು ಬರಲು ಸೂಚಿಸಿ, ಪರಿಶೀಲನೆಗೆ ದಿನಾಂಕ ನಿಗದಿಪಡಿಸಿದ್ದರು.

ಆಯುಕ್ತರ ಹಳೆಯ ಆದೇಶದ ನಿರ್ಧಾರದಂತೆ ಏ.26 ಮತ್ತು 27ರಂದು ಬಾಗಲಕೋಟೆ (96 ಪರೀಕ್ಷೆ ಕೇಂದ್ರ), ಏ.29 ಮತ್ತು 30ರಂದು ವಿಜಯಪುರ (101 ಕೇಂದ್ರ), ಮೇ 2, 3 ಮತ್ತು 4ರಂದು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ (130 ಕೇಂದ್ರ), ಮೇ 8 ಮತ್ತು 9ರಂದು ಬೆಳಗಾವಿ (104 ಕೇಂದ್ರ), ಮೇ 13 ಮತ್ತು 14ರಂದು ಹಾವೇರಿ (73 ಕೇಂದ್ರ), ಮೇ 15 ಮತ್ತು 16ರಂದು ಧಾರವಾಡ ಜಿಲ್ಲೆ (92 ಕೇಂದ್ರ) ಹಾಗೂ ಮೇ 17 ಮತ್ತು 18ರಂದು ಕಾರವಾರ ಹಾಗೂ ಶಿರಸಿ (38 ಮತ್ತು 35) ಶೈಕ್ಷಣಿಕ ಜಿಲ್ಲೆಗಳ ಪರೀಕ್ಷೆ ಕೇಂದ್ರಗಳಲ್ಲಿ ನಡೆದಿದೆ ಎನ್ನಲಾದ ಪರೀಕ್ಷೆ ಅಕ್ರಮ ಕುರಿತು ಪರಿಶೀಲನೆಗೆ ಮುಂದಾಗಿದ್ದರು.

ನಿರ್ಧಾರ ಕೈಬಿಟ್ಟ ಆಯುಕ್ತರು: ಆದರೆ, ಈ ನಿರ್ಧಾರದಿಂದ ಸದ್ಯ ಆಯುಕ್ತರು ಹಿಂದೆ ಸರಿದಿದ್ದಾರೆ. ವಿಭಾಗದ ಎಲ್ಲ ಪರೀಕ್ಷೆ ಕೇಂದ್ರಗಳ ಸಿಸಿಟಿವಿ ಫುಟೇಜ್‌ ಪರಿಶೀಲನೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಂದ ಈ ಪ್ರಕ್ರಿಯೆ ಕೈ ಬಿಡಲಾಗಿದೆ. ಪರೀಕ್ಷೆ ಕೇಂದ್ರಗಳ ಸಿಸಿ ಕ್ಯಾಮರಾ ಫುಟೇಜ್‌ ಕಾಯ್ದಿರಿಸುವುದು ಆಯಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಕರ್ತವ್ಯ. ಆದ್ದರಿಂದ ಪರೀಕ್ಷೆ ಕೇಂದ್ರದ ಮುಖ್ಯ ಅಧೀಕ್ಷಕರು, ತಮ್ಮ ಕೇಂದ್ರಗಳ ಸಿಸಿ ಕ್ಯಾಮರಾಗಳ ಫುಟೇಜ್‌ಗಳನ್ನು ತಮ್ಮ ಹಂತದಲ್ಲಿ ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು. ಮುಂದೆ ಕೈಗೊಳ್ಳಬಹುದಾದ ಶೈಕ್ಷಣಿಕ ಸಂಶೋಧನೆ, ಅಧ್ಯಯನಕ್ಕಾಗಿ ಆಯ್ದ ಪರೀಕ್ಷೆ ಕೇಂದ್ರಗಳ ಫುಟೇಜ್‌ಗಳನ್ನು ಮತ್ತು ದೂರು ಸಲ್ಲಿಕೆಯಾದ, ಅಕ್ರಮ ನಡೆದಂತಹ ಕೇಂದ್ರಗಳ ಫುಟೇಜ್‌ಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಅವರು ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.

Advertisement

ಶ್ರೀಶೈಲ ಕೆ. ಬಿರಾದಾರ

 

Advertisement

Udayavani is now on Telegram. Click here to join our channel and stay updated with the latest news.

Next