Advertisement
ಮೂಲ್ಕಿ: ದ.ಕ. ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಬಹುತೇಕ ಪ್ರದೇಶವು ಶಾಂಭವಿ ನದಿಯನ್ನು ಆವರಿಸಿಕೊಂಡಿದೆ. ಹೆದ್ದಾರಿ ಸಮಸ್ಯೆ ಹಾಗೂ ಬಾವಿ ಇದ್ದರೂ ಕೂಡ ಕುಡಿಯುವ ನೀರಿಗೆ ತತ್ವಾರ ಪಡೆಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಈ ಗ್ರಾಮವು ಎದುರಿಸುತ್ತಿದೆ.
Related Articles
Advertisement
ಏಳೆಂಟು ದಶಕಗಳ ಹಿಂದೆ ಬಪ್ಪನಾಡು ಗ್ರಾಮವು ಮೂಲ್ಕಿ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಅಲ್ಲದೇ ಮೂಲ್ಕಿ ಬಂದರು ಕೂಡ ಇದೇ ಗ್ರಾಮದಲ್ಲಿತ್ತು. ಗ್ರಾಮ ಚಾವಡಿ, ಸಬ್ ರಿಜಿಸ್ಟ್ರಾರ್ ಕಚೇರಿ, ಸರಕಾರಿ ಕಾಲೇಜು, ಸರಕಾರಿ ಆಸ್ಪತ್ರೆ, ಪೊಲೀಸ್ ಠಾಣೆ ಮತ್ತು ಪ್ರಧಾನ ಅಂಚೆ ಕಚೇರಿ ಗ್ರಾಮದಲ್ಲಿವೆ. ಮೂಲ್ಕಿ ವಿಜಯ ಕಾಲೇಜು, ವಿವಿಧ ಶಿಕ್ಷಣ ಸಂಸ್ಥೆಗಳು, ರಾಷ್ಟ್ರಮಟ್ಟದ ದಾಖಲೆಯಲ್ಲಿ ಇರುವ ಜೈನ ಬಸದಿ ಮಾನಸ್ತಂಭ, ಬಪ್ಪನಾಡು ದೇವಸ್ಥಾನ ಅಲ್ಲದೆ ಹಿಂದೂ, ಮುಸ್ಲಿಂ, ಕ್ರೈಸ್ತರ ಹಲವು ಪ್ರಮುಖ ಧಾರ್ಮಿಕ ಕೇಂದ್ರಗಳು ಕೂಡ ಇಲ್ಲಿವೆ.
ನಿರಂತರ ಅಪಘಾತ:
ಹೆದ್ದಾರಿ ಬಪ್ಪನಾಡು ದೇವಸ್ಥಾನ, ಮೂಲ್ಕಿ ಬಸ್‌ನಿಲ್ದಾಣ ಹಾಗೂ ವಿಜಯ ಸನ್ನಿಧಿ ಕಟ್ಟಡದ ಕಿನ್ನಿಗೋಳಿ ರಾಜ್ಯ ರಸ್ತೆ ಸೇರುವಲ್ಲಿ ದಿನಕ್ಕೆ ಒಂದು ಬಾರಿಯಾದರೂ ಅಪಘಾತಗಳು ಸಂಭವಿಸುತ್ತಲೇ ಇವೆ. ಅಭಿವೃದ್ಧಿ ಹೊಂದುತ್ತಿರುವ ಬಪ್ಪನಾಡು ಗ್ರಾಮದಲ್ಲಿ ದಿನಕ್ಕೊಂದರಂತೆ ಸಮಸ್ಯೆಗಳು ಕೂಡ ಸೃಷ್ಟಿಯಾಗುತ್ತಿವೆ. ಇದಕ್ಕೆ ಶೀಘ್ರ ಮುಕ್ತಿ ನೀಡಲು ಸ್ಥಳೀಯಾಡಳಿತ, ಜನಪ್ರತಿನಿಧಿಗಳು ಮುಂದಾಗಬೇಕಿದೆ.
ಇತರ ಸಮಸ್ಯೆಗಳೇನು? :
- ಬಪ್ಪನಾಡು ಗ್ರಾಮದ ವ್ಯಾಪ್ತಿಯಲ್ಲಿ ಬಹಳಷ್ಟು ವಸತಿ ಸಂಕೀರ್ಣಗಳು ಮತ್ತು ಬಹು ಮಹಡಿಯ ಕಟ್ಟಡಗಳು ಇದ್ದರೂ ಈ ವ್ಯಾಪ್ತಿಗೆ ಈ ವರೆಗೆ ಒಳಚರಂಡಿ ವ್ಯವಸ್ಥೆ ಇಲ್ಲದೆ ತ್ಯಾಜ್ಯ ನೀರು ನಿರ್ವಹಣೆಗೆ ಅನ್ಯ ಮಾರ್ಗ ಇಲ್ಲ. ಒಳಚರಂಡಿ ಯೋಜನೆ ಕೂಡ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ.
- ಹೆದ್ದಾರಿಯ ಕಾಮಗಾರಿ, ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಎಡವಟ್ಟಿನಿಂದ ಹಲವು ಜನ ಜೀವ ಕಳೆದುಕೊಂಡಿದ್ದಾರೆ. ಆದರೂ ಕೂಡ ಇದಕ್ಕೆ ಶಾಶ್ವತ ಪರಿಹಾರ ದೊರೆತಿಲ್ಲ.
- ಬಪ್ಪನಾಡು ವ್ಯಾಪ್ತಿಯಲ್ಲಿ ಇರುವ ಬಸ್ ನಿಲ್ದಾಣ ಮತ್ತು ಹೆದ್ದಾರಿ ಸಂಪರ್ಕ ಸಾರ್ವಜನಿಕರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ. ಹಲವಾರು ಬಾರಿ ಸಂಸದರು, ಶಾಸಕರು ಮತ್ತು ಹೆದ್ದಾರಿ ಹಾಗೂ ಪೊಲೀಸ್ ಇಲಾಖೆಯ ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಶೀಲಿಸಿ ಹೋಗುವುದಕ್ಕೆ ಸೀಮಿತವಾಗಿದೆ. ವಿನಾ ಸಂಪೂರ್ಣ ಪರಿಹಾರ ಕಂಡುಕೊಂಡಿಲ್ಲ.
- ಕೊಳಚಿಕಂಬಳ, ಬಡಗಿತ್ಲು, ಕಡವಿನಬಾಗಿಲು ಪ್ರದೇಶಕ್ಕೆ ಪ್ರತಿ ಮಳೆಗಾಲದಲ್ಲಿ ನೆರೆ ಸಮಸ್ಯೆ ಕಾಡುತ್ತಿದೆ.