Advertisement

ಹೆಸರಿಗಷ್ಟೇ ‘ಮಹಾನಗರ’ : ಪಾಲಿಕೆ-ಮುಡಾ: ಹುದ್ದೆಗಳೆಲ್ಲ ಖಾಲಿ!

03:15 AM Jul 05, 2018 | Karthik A |

ಮಹಾನಗರ: ಸ್ಮಾರ್ಟ್‌ ಸಿಟಿ ಪಟ್ಟಕ್ಕೆ ಅಣಿಯಾಗುತ್ತಿರುವ ನಗರದ ಆಡಳಿತ ಚುಕ್ಕಾಣಿ ಹಿಡಿದಿರುವ ಮಹಾನಗರ ಪಾಲಿಕೆ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಂಜೂರಾತಿ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನ ಹುದ್ದೆಗಳು ಕೆಲವು ವರ್ಷಗಳಿಂದ ಖಾಲಿಯಿವೆ. ಇದು ಸ್ಮಾರ್ಟ್‌ ಸಿಟಿ ಸಮರ್ಪಕ ಅನುಷ್ಠಾನ ಹಾಗೂ ಸಾರ್ವಜನಿಕರ ಸೇವೆಗಳಿಗೆ ಬಹಳಷ್ಟು ತೊಡಕಾಗಿ ಪರಿಣಮಿಸಿದೆ. ‘ಹುದ್ದೆ ಭರ್ತಿ ಮಾಡಿಕೊಡಿ’ ಎಂದು ಪಾಲಿಕೆ ಪರಿಪರಿಯಾಗಿ ಮನವಿ ಮಾಡಿದರೂ ಸರಕಾರ ಮಾತ್ರ ಇದರ ಗಂಭೀರತೆಯನ್ನೇ ಅರ್ಥಮಾಡಿಕೊಂಡ ಹಾಗಿಲ್ಲ. ಕೆಲವು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿರುವ ಪರಿಣಾಮ ಇರುವ ಅಧಿಕಾರಿಗಳ ಮೇಲೆ ಕೆಲಸದ ಒತ್ತಡ ಅಧಿಕವಾಗಿದೆ. ಕಡತ ವಿಲೇವಾರಿಗೂ ಪರದಾಡುವ ಪ್ರಮೇಯ ಎದುರಾಗಿದೆ.

Advertisement

ಪಾಲಿಕೆಗೆ ಒಟ್ಟು 1,725 ಹುದ್ದೆಗಳಿಗೆ ಮಂಜೂರಾತಿ ದೊರಕಿದೆ. ಈ ಪೈಕಿ ಸುಮಾರು 600ರಷ್ಟು ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಪರಿಣಾಮವಾಗಿ 1,000 ಕ್ಕೂ ಅಧಿಕ ಹುದ್ದೆಗಳು ಖಾಲಿ ಬಿದ್ದಿವೆ. ಉಪ ಆಯುಕ್ತ, ಝೋನಲ್‌ ಕಮಿಷನರ್‌ 3, ಕೌನ್ಸಿಲ್‌ ಸೆಕ್ರೆಟರಿ, ಬಿಲ್‌ ಕಲೆಕ್ಟರ್‌, ಸಿವಿಲ್‌ ಎಂಜಿನಿಯರ್‌, ಎಲೆಕ್ಟ್ರಿಕಲ್‌ ಎಂಜಿನಿಯರ್‌, ರೆವೆನ್ಯೂ ಇನ್‌ಸ್ಪೆಕ್ಟರ್‌ ಸೇರಿದಂತೆ ಹಲವು ಹುದ್ದೆಗಳು ಖಾಲಿಯಿವೆ.

ನಿವೃತ್ತಿ ಹೊಂದಿದ ಹುದ್ದೆಗಳು ಖಾಲಿ!
ಒಂದು ವಾರದ ಹಿಂದೆ ಪಾಲಿಕೆಯಲ್ಲಿ ವಿವಿಧ ಹುದ್ದೆ ನಿರ್ವಹಿಸುತ್ತಿದ್ದ ಸುಮಾರು 10ರಷ್ಟು ಸಿಬಂದಿ ನಿವೃತ್ತಿಗೊಂಡಿದ್ದಾರೆ. ಈಗ ಅವರ ಹುದ್ದೆಗಳ ಜವಾಬ್ದಾರಿಯನ್ನು ಇತರ ಸಿಬಂದಿಗೆ ನೀಡಲಾಗಿದೆ. ‘ನಿಯೋಜನೆ’ ಸೇವೆ ಸಿಬಂದಿಗೆ ಮತ್ತಷ್ಟು ಒತ್ತಡ ತರಿಸಿದೆ. ವಿಶೇಷವೆಂದರೆ, ಒಂದು ಹುದ್ದೆ ತೆರವು ಆಯಿತೆಂದರೆ, ಆ ಹುದ್ದೆಗೆ ಹೊಸ ನೇಮಕಾತಿ ಮಾಡುವ ಬಗ್ಗೆ ಸರಕಾರ ಗಂಭೀರ ಚಿಂತನೆ ಮಾಡಿದಂತಿಲ್ಲ.

ಮೂಡಾ 22ರಲ್ಲಿ 7 ಹುದ್ದೆ ಖಾಲಿ!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಒಟ್ಟು 22 ಹುದ್ದೆಗಳು ಮಂಜೂರಾತಿ ಆಗಿವೆೆ. ಈ ಪೈಕಿ 15 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಅದರಲ್ಲಿಯೂ ಕೆಲವರು ಇತರ ಇಲಾಖೆಯಿಂದ ನಿಯೋಜನೆ ಮೇಲೆ ನಿಯುಕ್ತಿಗೊಂಡಿದ್ದಾರೆ. ಇಲ್ಲಿನ ಭೂಸ್ವಾಧೀನ ಶಾಖೆಯ ವಿಶೇಷ ಭೂಸ್ವಾಧೀನಾಧಿಕಾರಿ ಹುದ್ದೆಯೇ ಖಾಲಿಯಿದೆ. ವ್ಯವಸ್ಥಾಪಕ ಹುದ್ದೆ, ಶೀಘ್ರ ಲಿಪಿಗಾರರ ಹುದ್ದೆ, ಕಂಪ್ಯೂಟರ್‌ ಆಪರೇಟರ್‌ ಹುದ್ದೆ, ರೇಖಕರ ಹುದ್ದೆ, ಗ್ರೂಪ್‌ ಡಿ ಹುದ್ದೆ ಕೂಡ ಖಾಲಿಯಿದೆ. 

ಸರಕಾರಕ್ಕೆ ಮನವಿ
ಮಂಗಳೂರು ನಗರಾಭಿವೃದ್ಧಿ ಇಲಾಖೆಯಲ್ಲಿ ಏಳು ಹುದ್ದೆಗಳು ಖಾಲಿ ಇವೆ. ಇದರಲ್ಲಿ  ಭೂಸ್ವಾಧೀನಾಧಿಕಾರಿ ಹುದ್ದೆ ಅತ್ಯಂತ ಅಗತ್ಯವಾಗಿ ಭರ್ತಿಯಾಗಬೇಕಿದೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದ್ದು, ಉಳಿದ ಖಾಲಿ ಹುದ್ದೆಗಳಿಗೆ ಇತರರ ನಿಯೋಜನೆ ಮೇಲೆ ಕೆಲಸ ನಡೆಸಲಾಗುತ್ತಿದೆ.
– ಶ್ರೀಕಾಂತ್‌ ರಾವ್‌ಆಯುಕ್ತರು, ಮಂಗಳೂರು ನಗರಾಭಿವೃದ್ಧಿ  ಪ್ರಾಧಿಕಾರ.

Advertisement

1000ಕ್ಕೂ ಹೆಚ್ಚು ಹುದ್ದೆಗಳು ಖಾಲಿ
ಮಂಗಳೂರು ಪಾಲಿಕೆಯಲ್ಲಿ ಮೂರನೇ ಒಂದರಷ್ಟು ಹುದ್ದೆಗಳು ಮಾತ್ರ ಈಗ ಭರ್ತಿಯಾಗಿವೆ. ಉಳಿದಂತೆ ಸುಮಾರು 1,000ದಷ್ಟು ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿದೆ. ನಗರಾಭಿವೃದ್ಧಿ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಿದ್ದು, ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
– ಮಹಮ್ಮದ್‌ ನಝೀರ್‌, ಆಯುಕ್ತರು, ಮನಪಾ.  

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next