Advertisement
ಸಂಕ್ರಾಂತಿ ಸಂದರ್ಭದಲ್ಲೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ‘ಅತೃಪ್ತತೆ’ಯ ಬಿಸಿಯನ್ನು ಎದುರಿಸಬೇಕಾಯಿತು. ಒಂದೆಡೆ ಅಪರೇಷನ್ ಕಮಲದ ಭಯ ಇನ್ನೊಂದೆಡೆ ಬಿಜೆಪಿಗೆ ರಿವರ್ಸ್ ಅಪರೇಷನ್ ತಲೆನೋವು. ಇವೆಲ್ಲದರ ನಡುವೆ ರಾಜ್ಯವನ್ನು ಕಾಡುತ್ತಿದ್ದ ಬರಸಮಸ್ಯೆ… ಒಟ್ಟಿನಲ್ಲಿ ಕುಮಾರಸ್ವಾಮಿ ಸರಕಾರಕ್ಕೆ ವರ್ಷಾರಂಭದಲ್ಲಿ ಆತಂಕಗಳದ್ದೇ ತಲೆನೋವು ಜೋರಾಗಿತ್ತು. ಈ ನಡುವೆ ಮೂರೂ ಪಕ್ಷಗಳ ರೆಸಾರ್ಟ್ ರಾಜಕಾರಣವೂ ಬಹಳಷ್ಟು ಸದ್ದು ಮಾಡಿತ್ತು.
Related Articles
Advertisement
ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ರಾಜ್ಯದ ಮಟ್ಟಿಗೆ ಹೇಳುವುದಾದರೆ ಬಿಜೆಪಿ ತನ್ನ ಸಂಪೂರ್ಣ ತಾಖತ್ತನ್ನು ಪ್ರದರ್ಶಿಸಿ 28 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದು ಬೀಗಿತು. ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲು ಬೇಕಾಗಿದ್ದ ಆತ್ಮಸ್ಥೈರ್ಯವನ್ನು ಈ ಲೋಕಸಭಾ ಫಲಿತಾಂಶದ ಮೂಲಕ ಕಮಲ ಪಕ್ಷಕ್ಕೆ ದಕ್ಕಿದ್ದು ಸುಳ್ಳಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 01 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು ಮತ್ತು ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರ ಸ್ವಾಭಿಮಾನದ ಹೆಸರಿನಲ್ಲಿ ಮತ ಯಾಚಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಪಾಲಾಯಿತು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ ಅವರು ಸೋಲು ಕಂಡಿದ್ದು, ಬಿಜೆಪಿಯಿಂದ ಯುವ ಮುಖಂಡ ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದಿಂದ, ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ ಹಾಸನದಿಂದ ಲೋಕಸಭೆ ಪ್ರವೇಶಿಸಿದರು.
ಬಿಜೆಪಿ ಬಲವರ್ಧನೆ ; ಬಿ.ಎಸ್. ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಭಾಗ್ಯ
ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಬಿಜೆಪಿಯ ಅಲ್ಪಮತದ ಸರ್ಕಾರ ಅಸ್ತಿತ್ವಕ್ಕೆ ಬಂದು ನಂತರದ ಧ್ರುವೀಕರಣದಲ್ಲಿ ಸರ್ಕಾರ ಸ್ಥಿರಗೊಂಡಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಊಹಿಸದ ರೀತಿಯಲ್ಲಿ ಮೂವರು ಜೆಡಿಎಸ್, ಹನ್ನೆರಡು ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡು ಸುಪ್ರೀಂಕೋರ್ಟ್‌ನಲ್ಲಿ ಅನರ್ಹತೆ ಎತ್ತಿ ಹಿಡಿದರೂ ಉಪ ಚುನಾವಣೆಗೆ ಸ್ಪರ್ಧೆಗೆ ಅವಕಾಶ ಕೊಟ್ಟಿದ್ದು ಇತಿಹಾಸವಾಯಿತು.
ಅನರ್ಹರು ಎಂಬ ವಿಚಾರವನ್ನೇ ಕಾಂಗ್ರೆಸ್-ಜೆಡಿಎಸ್ ಮುಂದಿಟ್ಟರೆ ಸ್ಥಿರ ಹಾಗೂ ರಾಜ್ಯದ ಅಭಿವೃದ್ಧಿ ಘೋಷಣೆಯೊಂದಿಗೆ ಬಿಜೆಪಿ ಚುನಾವಣೆ ಎದುರಿಸಿತು. ಅಲ್ಪಮತದ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿದ್ದ ಉಪ ಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳ ಪೈಕಿ 12 ಕ್ಷೇತ್ರ ಗೆದ್ದು ಸರ್ಕಾರ ಭದ್ರಪಡಿಸಿಕೊಂಡಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಾನವೂ ಆ ಮೂಲಕ ಸುಭದ್ರಗೊಂಡಿತು. ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ 105 ರಿಂದ 117 ಸಂಖ್ಯೆಗೆ ಏರಿಸಿಕೊಂಡಿತು.
ಆದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನದ ರೂವಾರಿಗಳಾದ ಹಳ್ಳಿಹಕ್ಕಿ ಖ್ಯಾತಿಯ ಎಚ್.ವಿಶ್ವನಾಥ್ ಹಾಗೂ ಎಂ.ಟಿ.ಬಿ.ನಾಗರಾಜ್ ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿ ರಾಜಕೀಯವಾಗಿ ಆಘಾತ ಅನುಭವಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಆಯ್ಕೆಯಾಗಿ ಉಪ ಚುನಾವಣೆಯಲ್ಲಿ ಪಕ್ಷದ ಜಯಭೇರಿ ಮೂಲಕ ಮೊದಲ ಚುನಾವಣೆಯಲ್ಲಿ ಗೆಲುವು ತಂದುಕೊಟ್ಟ ಹೆಗ್ಗಳಿಕೆಗೆ ಪಾತ್ರರಾದರು. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಬೇಲೂರು ಶಾಸಕ ಎಚ್.ಕೆ.ಕುಮಾರಸ್ವಾಮಿ ನೇಮಕವಾಗಿದ್ದು 2019 ನೇ ವರ್ಷದಲ್ಲಿಯೇ. ಆದರೆ, ಅವರಿಗೆ ಪಕ್ಷದ ಶೂನ್ಯ ಸಾಧನೆ ಹಿನ್ನೆಡೆಯುಂಟಾಯಿತು.
ಈ ವರ್ಷ ಹಲವು ನಾಯಕರನ್ನು ರಾಜಕೀಯ ಕ್ಷೇತ್ರ ಕಳೆದುಕೊಂಡಿತು. ಸಚಿವರಾಗಿದ್ದ ಸಿ.ಎಸ್.ಶಿವಳ್ಳಿ, ಹಿರಿಯ ಮುಖಂಡ ಎ.ಕೆ.ಸುಬ್ಬಯ್ಯ ಅವರು ನಿಧನರಾದರು.
ಸಿ.ಎಸ್.ಶಿವಳ್ಳಿ ನಿಧನದಿಂದ ಕುಂದಗೋಳ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಕುಸುಮಾ ಶಿವಳ್ಳಿ ಕಾಂಗ್ರೆಸ್‌ನಿಂದ ಆಯ್ಕೆಯಾದರು. ಮತ್ತೂಂದೆಡೆ ಕಾಂಗ್ರೆಸ್‌ನಿಂದ ಗೆದ್ದಿದ್ದ ಉಮೇಶ್ ಜಾದವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಚಿಂಚೋಳಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ಡಾ. ಅವಿನಾಶ್ ಯಾದವ್ ಬಿಜೆಪಿಯಿಂದ ಗೆಲುವು ಸಾಧಿಸಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಉಮೇಶ್ ಜಾದವ್ ಕಲಬುರಗಿ ಲೋಕಸಭೆ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಹಿರಿಯ ನಾಯಕರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರು. ಒಂದು ವರ್ಷದಲ್ಲಿ ಒಟ್ಟು ಹದಿನೇಳು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಂತಾಯಿತು.
ಕಾಂಗ್ರೆಸ್ ಗೆ ಉಪಚುನಾವಣೆಯಲ್ಲಿ ಸೋಲಿನ ಆಘಾತ
ಉಪ ಚುನಾವಣೆಯಲ್ಲಿನ ಸೋಲು ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರು.
ಐದು ವರ್ಷ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚನೆ ನಂತರ ಎದುರಾದ ವಿಧಾನಸಭೆ ಚುನಾವಣೆಯಲ್ಲಿ 115 ಸ್ಥಾನಗಳಿಂದ 79 ಸ್ಥಾನಗಳಿಗೆ ಕುಸಿಯಿತು. ನಂತರ ಎದುರಾದ ಲೋಕಸಭೆ ಚುನಾವಣೆಯಲ್ಲೂ10 ಸ್ಥಾನಗಳಿಂದ ಒಂದು ಸ್ಥಾನಕ್ಕೆ ಇಳಿದು ಮರ್ಮಾಘಾತ ಅನುಭವಿಸಿತು.
ಇದರ ಜತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎದುರಾದ ಉಪ ಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳಲ್ಲಿ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರಗಳನ್ನೂ ಕಳೆದುಕೊಂಡು ವಿಧಾನಸಭೆಯಲ್ಲಿ 68 ಸ್ಥಾನಕ್ಕೆ ಕುಸಿಯಿತು.
ಈ ಘಟನಾವಳಿ ಹೊರತುಪಡಿಸಿದರೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿದ್ದು ಸುಮಾರು 50 ದಿನ ತಿಹಾರ್ ಜೈಲಿನಲ್ಲಿ ಇದ್ದಿದ್ದಕ್ಕೂ 2019 ನೇ ವರ್ಷ ಸಾಕ್ಷಿಯಾಯಿತು.
ಜೆಡಿಎಸ್‌ಗೆ ಆತಂಕ2019 ನೇ ವರ್ಷ ಜೆಡಿಎಸ್‌ಗೆ ಆತಂಕದ ವರ್ಷ. ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೂ ಯಾವಾಗ ಸರ್ಕಾರ ಪತನಗೊಳ್ಳುತ್ತೋ ಎಂಬ ಆತಂಕವಿತ್ತು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಹೆಚ್ಚು ಸ್ಥಾನ ಗೆಲ್ಲುವ ಕನಸು ಕಂಡಿದ್ದರೂ ಖುದ್ದು ದೇವೇಗೌಡರು ಸೋಲುವ ಜತೆಗೆ ಮಂಡ್ಯ ಕ್ಷೇತ್ರದಲ್ಲಿ ನಿಖೀಲ್‌ಕುಮಾರಸ್ವಾಮಿ ಸೋಲು ಅನುಭವಿಸಿದ್ದು ಜೆಡಿಎಸ್‌ಗೆ ತೀವ್ರ ಹಿನ್ನೆಡೆಯುಂಟಾಯಿತು. ಉಪ ಚುನಾವಣೆಯಲ್ಲಿ ಜೆಡಿಎಸ್ ಐದು ಕ್ಷೇತ್ರ ಗೆಲ್ಲುವ ಗುರಿ ಹೊಂದಿದ್ದರೂ ಒಂದೇ ಒಂದು ಸ್ಥಾನದಲ್ಲೂ ಗೆಲ್ಲಲಾಗದೆ 38 ಸಂಖ್ಯಾಬಲ 35 ಕ್ಕೆ ಇಳಿಯುವಂತಾಯಿತು. ಮುಂದೆಯೂ ಜೆಡಿಎಸ್ ಶಾಸಕರು ಬಿಜೆಪಿಯತ್ತ ಹೋಗುವ ಆತಂಕ ಪಕ್ಷಕ್ಕೆ ಇದ್ದೇ ಇದೆ.