Advertisement

Belthangady”ಉನ್ನತ ಶಿಕ್ಷಣದಲ್ಲಿ ವ್ಯಾಪಕ ಬದಲಾವಣೆ ಅವಶ್ಯ’

11:42 PM Aug 23, 2023 | Team Udayavani |

ಬೆಳ್ತಂಗಡಿ: ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣಕ್ಕೆ ಪರಿಪೂರ್ಣತೆ ನೀಡುವುದು ಉನ್ನತ ಶಿಕ್ಷಣ. ದೇಶಾದ್ಯಂತ ಉನ್ನತ ಶಿಕ್ಷಣದಲ್ಲಿ ವ್ಯಾಪಕ ಬದಲಾವಣೆಯ ಅಗತ್ಯವಿದೆ. ವಿದ್ಯಾರ್ಥಿಗೆ ನೈತಿಕ ಶಿಕ್ಷಣ ನೀಡುವಲ್ಲಿ ಗುರುವಿನ ಪಾತ್ರ ಮಹತ್ತರ ಎಂದು ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಸತೀಶ್ಚಂದ್ರ ಎಸ್‌. ತಿಳಿಸಿದರು.

Advertisement

ಉಜಿರೆ ಶ್ರೀ ಸಿದ್ಧವನ ಗುರುಕುಲದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮಂಗಳೂರು ವಿಶ್ವವಿದ್ಯಾ ನಿಲಯ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಹಯೋಗದೊಂದಿಗೆ ನಡೆದ ಪ್ರೇರಣಾ ದಿನದಂಗವಾಗಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಉತ್ತಮ ಶಿಕ್ಷಕರಿಗೆ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉಜಿರೆ ಎಸ್‌ಡಿಎಂ ಕಾಲೇಜು ಪ್ರಾಚಾರ್ಯ ಡಾ| ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಮಹಾವಿದ್ಯಾ ಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಡಾ| ಗುರುನಾಥ ಬಡಿಗೇರ ಮಾತನಾಡಿ, ಸಂಘವು ರಾಜ್ಯ ಮಟ್ಟದಲ್ಲಿ ಪ್ರತೀ ವರ್ಷ ವಿವೇಕಾನಂದ ಜಯಂತಿ, ಸುಭಾಸಚಂದ್ರ ಬೋಸ್‌ ಜಯಂತಿ, ಕಾಯಕ ಸಂಕಲ್ಪ ದಿನ, ಗುರುವಂದನಾ ಹಾಗೂ ಪ್ರೇರಣಾ ದಿನಗಳನ್ನು ಆಚರಿಸುತ್ತಿದೆ. ಪ್ರೇರಣಾ ದಿನದಂದು ಸಾಧಕ ಶಿಕ್ಷಕರಿಗೆ “ಅಧ್ಯಾಪಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.

ರಾಜ್ಯ ಜಂಟಿ ಪ್ರಧಾನ ಕಾರ್ಯ ದರ್ಶಿ ಡಾ| ಮಾಧವ ಎಂ.ಕೆ. ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.

ಮಂಗಳೂರು ವಿ.ವಿ. ಸಿಂಡಿಕೇಟ್‌ ಸದಸ್ಯರಾದ ಡಾ| ಕೆ.ಸಿ. ಮಹದೇಶ್‌, ಸಿಂಡಿಕೇಟ್‌ ಮಾಜಿ ಸದಸ್ಯ ರಮೇಶ್‌, ಕೆಆರ್‌ಎಂಎಸ್‌ಎಸ್‌ ಅಧ್ಯಕ್ಷ ಡಾ| ಸುಧಾ ಎನ್‌. ವೈದ್ಯ, ಕಾರ್ಯಕ್ರಮ ಸಂಯೋಜಕಿ ಡಾ| ರತಿ ಉಪಸ್ಥಿತರಿದ್ದರು.
ಡಾ| ಸುಧಾ ಎನ್‌. ವೈದ್ಯ ಸ್ವಾಗತಿಸಿ, ವೆಂಕಟೇಶ್‌ ನಾಯಕ್‌ ವಂದಿಸಿದರು. ಉಪನ್ಯಾಸಕಿ ಮಮತಾ ಎಂ. ಶೆಟ್ಟಿ ನಿರ್ವಹಿಸಿದರು.

Advertisement

ಶಿಕ್ಷಣ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಉಜಿರೆ ಶ್ರೀ ಧ.ಮಂ. ಕಾಲೇಜಿನ ವಿಶ್ರಾಂತ ಕಾರ್ಯದರ್ಶಿ ಹಾಗೂ ಸ್ಥಾಪಕ ಪ್ರಾಂಶುಪಾಲರಾದ ಪ್ರೊ| ಎಸ್‌. ಪ್ರಭಾಕರ್‌, ಅತ್ಯುತ್ತಮ ಆಡಳಿತಗಾರ ವಿಭಾಗದಲ್ಲಿ ಮಾಜಿ ಪ್ರಾಂಶುಪಾಲರು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ವಿಶ್ರಾಂತ ಹೆಚ್ಚುವರಿ ನಿರ್ದೇಶಕ ಪ್ರೊ| ಎಸ್‌. ರಾಜಶೇಖರ ಹೆಬ್ಟಾರ್‌, ಅತ್ಯುತ್ತಮ ಸಂಶೋಧಕ ವಿಭಾಗದಲ್ಲಿ ಮಂಗಳೂರು ವಿ.ವಿ. ವಸ್ತುವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ| ಮಂಜುನಾಥ ಪಟ್ಟಾಭಿ, ಅತ್ಯುತ್ತಮ ಶಿಕ್ಷಕ ವಿಭಾಗದಲ್ಲಿ ಮಡಿಕೇರಿಯ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ನಾಗರಾಜ ಕೆ.ಪಿ., ಅತ್ಯುತ್ತಮ ಗ್ರಂಥಪಾಲಕ ವಿಭಾಗದಲ್ಲಿ ಮಂಗಳೂರು ಸಂತ ಆ್ಯಗ್ನೆಸ್‌ ಸ್ವಾಯತ್ತ ಕಾಲೇಜಿನ ಗ್ರಂಥಪಾಲಕಿ ಡಾ| ವಿಶಾಲ ಬಿ.ಕೆ., ಅತ್ಯುತ್ತಮ ದೈಹಿಕ ಶಿಕ್ಷಣ ನಿರ್ದೇಶಕ ವಿಭಾಗದಲ್ಲಿ ಉಡುಪಿಯ ಡಾ| ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ದೈಹಿಕ ಶಿಕ್ಷಣ ಶಿಕ್ಷಕ ಡಾ| ರಾಮಚಂದ್ರ ಪಾಟ್ಕರ್‌ ಅವರಿಗೆ “ಅಧ್ಯಾಪಕ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next