“ಮಜ್ಜಿಗೆ ಹುಳಿ’ ಅಂದರೆ ಸಾಕು ಅದೆಷ್ಟೋ ಭೋಜನ ಪ್ರಿಯರ ಕಿವಿ ನೆಟ್ಟಗಾಗುತ್ತದೆ, ಬಾಯಲ್ಲಿ ನೀರೂರುತ್ತದೆ. ಇಂಥ ಟೇಸ್ಟಿ “ಮಜ್ಜಿಗೆ ಹುಳಿ’ ಈಗ ಸಿನಿಮಾವೊಂದರ ಟೈಟಲ್ ಆಗಿ ಈ ವಾರ ಪ್ರೇಕ್ಷಕರ ಮುಂದೆ ಬರುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೆ ಸೇರಿ ತಯಾರಿಸಿರುವ “ಮಜ್ಜಿಗೆ ಹುಳಿ’ ಇದು.
ಚಿತ್ರಕ್ಕೆ ರವೀಂದ್ರ ಕೋಟಕಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈವರೆಗೆ ಕೆಲ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ರವೀಂದ್ರ, ಮೊದಲ ಬಾರಿಗೆ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇನ್ನು “ಮಜ್ಜಿಗೆ ಹುಳಿ’ ಟೈಟಲ್ ಬಗ್ಗೆ ಮೊದಲು ಮಾತನಾಡುವ ಅವರು, “ಮಜ್ಜಿಗೆ ಹುಳಿ’ ಅಂದರೆ, ಬಹುತೇಕರಿಗೆ ಪ್ರಿಯವಾದ ಆಹಾರ ಪದಾರ್ಥ. ಚಿತ್ರದ
ಸಬ್ಜೆಕ್ಟ್ಗೆ ಹೊಂದಾಣಿಕೆಯಾಗುತ್ತದೆ ಎನ್ನುವ ಕಾರಣಕ್ಕೆ ಅದೇ ಹೆಸರನ್ನೆ ಚಿತ್ರಕ್ಕೂ ಇಟ್ಟುಕೊಂಡಿದ್ದೇವೆ. ನವ ವಿವಾಹಿತ ಜೋಡಿಯ ಮೊದಲ ರಾತ್ರಿ ಏನೆಲ್ಲಾ ನಡೆಯುತ್ತದೆ ಎನ್ನುವುದೇ ಚಿತ್ರದ ಕಥೆಯ ಒಂದು ಎಳೆ. ಹಾಗಂತ, ಇಲ್ಲಿ ಅಶ್ಲೀಲತೆಯಿಲ್ಲ, ಡಬಲ್ ಮೀನಿಂಗ್ ಮಾತುಗಳಿಲ್ಲ. ಇಡೀ ಚಿತ್ರ ನವಿರಾದ ಹಾಸ್ಯ, ಮನರಂಜನೆ ಜೊತೆ ಸಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಇಡೀ ಚಿತ್ರ ಒಂದೇ ಕೋಣೆಯಲ್ಲಿ ನಡೆಯುತ್ತದೆ. ಸುಮಾರು 28 ಪಾತ್ರಗಳು ಚಿತ್ರದಲ್ಲಿ ಬಂದು ಹೋಗುತ್ತವೆ. ಮೊದಲ ರಾತ್ರಿ ಎಂದರೆ ಮದುವೆಯಾದವರಿಗೆ ಅದೊಂದು ಸವಿ ನೆನಪು, ಮದುವೆ ಆಗದವರಿಗೆ ಅದೊಂದು ಸವಿ ನಿರೀಕ್ಷೆ. ಅಂಥ ಮೊದಲ ರಾತ್ರಿಯಲ್ಲಿ ಏನೆಲ್ಲಾ ನಡೆಯಬಹುದು ಎನ್ನುವುದೇ ಚಿತ್ರದ ವಿಶೇಷ. “ಮಜ್ಜಿಗೆ ಹುಳಿ’ ಮೊದಲ ರಾತ್ರಿಯ ಮಹಾಕಾವ್ಯ. ಇಡೀ ಕುಟುಂಬ ಸಮೇತರಾಗಿ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಚಿತ್ರ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು ನಿರ್ದೇಶಕ ರವೀಂದ್ರ.
“ಮಜ್ಜಿಗೆ ಹುಳಿ’ ಚಿತ್ರದಲ್ಲಿ ದೀಕ್ಷಿತ್ ವೆಂಕಟೇಶ್ ನಾಯಕನಾಗಿ ಮತ್ತು ರೂಪಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೀಕ್ಷಿತ್ ಅವರದ್ದು ಸಾಫ್ಟ್ ಆಗಿರುವ ಸಾಫ್ಟ್ವೇರ್ ಗಂಡನ ಪಾತ್ರವಾದರೆ, ರೂಪಿಕಾ ಅವರದ್ದು ಬೋಲ್ಡ್ ಆಗಿರುವ ಸಾಫ್ಟ್ವೇರ್ ಹೆಂಡತಿಯ ಪಾತ್ರವಂತೆ. ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡುವ ದೀಕ್ಷಿತ್ ಮತ್ತು ರೂಪಿಕಾ, “ಈಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ
ಸಾಫ್ಟ್ವೇರ್ ಗಂಡ-ಹೆಂಡತಿ ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಅನ್ನೋದನ್ನ ಚಿತ್ರದಲ್ಲಿ ಹಾಸ್ಯವಾಗಿ ಹೇಳಲಾಗಿದೆ. ಚಿತ್ರದ ಕಥೆ ಎಲ್ಲರಿಗೂ ಕನೆಕ್ಟ್ ಆಗುವಂಥದ್ದು. ಪ್ರತಿ ದೃಶ್ಶಗಳು ಕುತೂಹಲ ಮೂಡಿಸುತ್ತದೆ. ಚಿತ್ರ ನೋಡಿದವರಿಗೆ ಕಂಪ್ಲೀಟ್ ಮನರಂಜನೆ ಗ್ಯಾರಂಟಿ. ಇಡೀ ಚಿತ್ರ ಒಂದೊಳ್ಳೆ ಅನುಭವ ಕೊಟ್ಟಿದೆ. ಚಿತ್ರ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತುಗಳನ್ನಾಡುತ್ತಾರೆ ಅವರು.
ಉಳಿದಂತೆ “ಮಜ್ಜಿಗೆ ಹುಳಿ’ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಮಿಮಿಕ್ರಿ ದಯಾನಂದ್, ರಮೇಶ್ ಭಟ್, ಮೋಹನ್ ಜುನೇಜಾ, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ…, ಶಂಕರ ನಾರಾಯಣ್, ಯತಿರಾಜ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಮಜ್ಜಿಗೆ ಹುಳಿ’ ಚಿತ್ರಕ್ಕೆ “ಒಳ್ಳೆ ಬಾಡೂಟ ಗುರು’ ಎಂಬ ಟ್ಯಾಗ್ ಲೈನ್ ಇದ್ದು, ಚಿತ್ರಕ್ಕೆ ಯೋಗರಾಜ್ ಭಟ್ ಹಿನ್ನೆಲೆ ಧ್ವನಿ ನೀಡಿ¨ªಾರೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿದ್ದು, ಲಹರಿ ಮ್ಯೂಸಿಕ್ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಸುಮಾರು 15 ದಿನಗಳ ಕಾಲ ಬೆಂಗಳೂರು, ಕಾರವಾರ ಸುತ್ತಮುತ್ತ ಚಿತ್ರದ ಚಿತ್ರೀಕರಿಸಲಾಗಿದೆ. “ಎಸ್‌ಎಲ್‌ವಿ ಆರ್ಟ್ಸ್’ ಬ್ಯಾನರ್ ಮೂಲಕ ರಾಮಚಂದ್ರ ಎಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ಇದೇ ವಾರ ರಾಜ್ಯಾದ್ಯಂತ ಸುಮಾರು 90ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆಯಾಗಿ ತೆರೆಗೆ ಬರುತ್ತಿದ್ದು, “ಮಜ್ಜಿಗೆ ಹುಳಿ’ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ರುಚಿಸಲಿದೆ ಅನ್ನೋದಷ್ಟೇ ಬಾಕಿ.