ಇಷ್ಟು ಬೇಗ 200 ಎಪಿಸೋಡುಗಳಾಯ್ತಾ ಅಂತ ಸೃಜನ್‌ಗೆ ಅನಿಸಿದೆಯಂತೆ. ಕಲರ್ಸ್ ಕನ್ನಡದವರು ಸುಜನ್‌ಗೆ “ಮಜಾ ಟಾಕೀಸ್’ ಕಾರ್ಯಕ್ರಮವನ್ನು ನಿರೂಪಿಸುವುದಕ್ಕೆ ಮತ್ತು ನಿರ್ಮಿಸುವುದಕ್ಕೆ ಹೇಳಿದಾಗ, ಕೊಟ್ಟ ಗಡವು ಕೇವಲ 32 ಎಪಿಸೋಡುಗಳು ಮಾತ್ರ. ಕಾರ್ಯಕ್ರಮ ಹಿಟ್ ಆಗಿ, 32 ಎಪಿಸೋಡುಗಳು ಡಬ್ಬಲ್ ಆಗಿ, ಥ್ರಿಬ್ಬಲ್ ಆಗಿ … ಈಗ 300 ಕಂತುಗಳನ್ನು ಪೂರೈಸುವ ಹಂತದಲ್ಲಿದೆ.
“32 ಎಪಿಸೋಡುಗಳು ಅಂತ ಶುರುವಾಗಿದ್ದು. ಮುಂದುವರೆಯುತ್ತಲೇ ಇದೆ. ಇನ್ನಷ್ಟು ಮುಂದುವರೆಯುತ್ತದೆ ಎಂಬ ನಂಬಿಕೆ ಇದೆ …’
“ಮಜಾ ಟಾಕೀಸ್’ಗೆ ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಬಂದು ಹೋಗಿದ್ದಾರೆ. ಬಂದಿಲ್ಲ ಎನ್ನುವವರ ಸಂಖ್ಯೆ ಬೆರಳಣಿಕೆಯಷ್ಟು ಮಾತ್ರ ಇದೆ. ಅದರಲ್ಲೂ ಇದುವರೆಗೂ ಪುನೀತ್ ರಾಜಕುಮಾರ್, ಯಶ್ ಮತ್ತು ಗಣೇಶ್ ಮಾತ್ರ ಬಂದಿಲ್ಲವಂತೆ. ಮಿಕ್ಕಂತೆ ಎಲ್ಲರೂ ಬಂದಿದ್ದಾರೆ. ಸುದೀಪ್ ಅವರು 25ನೇ ಎಪಿಸೋಡಿಗೆ ಬಂದಿದ್ದರು. ದರ್ಶನ್ 50ನೇ ಎಪಿಸೋಡ್‌ಗೆ ಬಂದರು. ಅರ್ಜುನ್ ಸರ್ಜಾ ಮತ್ತು ಶಿವರಾಜಕುಮಾರ್ 75 ಮತ್ತು 100ನೇ ಎಪಿಸೋಡ್‌ಗೆ ವಿಶೇಷ ಅತಿಥಿಯಾಗಿ ಬಂದಿದ್ದರು. 200 ನೇ ಎಪಿಸೋಡಿಗೆ ಪುನಿತ್ ರಾಜಕುಮಾರ್ ಬಂದಿದ್ದರು.
ಸರಿ, ಇಷ್ಟು ಎಪಿಸೋಡುಗಳಲ್ಲಿ ಬಹಳ ಕಷ್ಟ ಎಂದನಿಸಿದ ಎಪಿಸೋಡು ಯಾವುದು? ಎಂದರೆ, ಪ್ರತಿ ಕಂತು ಸಹ ಬಹಳ ಕಷ್ಟವಾಗಿರುತ್ತೆ ಎಂಬ ಉತ್ತರ ಸೃಜನ್ ಅವರಿಂದ ಬರುತ್ತದೆ. “ಹ್ಯೂಮರ್ ಅಷ್ಟು ಸುಲಭದ ವಿಷಯವಲ್ಲ. ನಗು ತರಿಸುವುದು ಬಹಳ ಕಷ್ಟದ ವಿಷಯ. ಅದೇ ಕಾರಣಕ್ಕೆ ಪ್ರತಿ ಕಂತು ಸಹ ಒಂದೊಂದು ಸವಾಲು. ಯಾವುದೇ ಒಂದು ಎಪಿಸೋಡು ಮಾಡುವುದಕ್ಕಿಂತ ಮುಂಚೆ, ನಮ್ಮ ಹತ್ತಿರ ಬರಿ ಹೀಗೆ ಮಾಡಬಹುದು ಅಂತ ಸ್ಕೆಲಿಟನ್ ಮಾತ್ರ ಇರ್ತದೆ.
ಆ ನಂತರ ಅವತ್ತಿನ ಅತಿಥಿಗಳನ್ನು ನೋಡಿಕೊಂಡು ಕಾನ್ಸೆಪ್ಟ್ ಬದಲಾಯಿಸಿಕೊಳ್ಳುತ್ತೇವೆ. ಇಷ್ಟು ಎಪಿಸೋಡುಗಳ ಚಿತ್ರೀಕರಣ ಮಾಡಿದ್ದೀವಲ್ಲ. ಯಾವ ಎಪಿಸೋಡು ಸಹ ರಿಹರ್ಸಲ್ ಇಲ್ಲದೆ ಮಾಡಿಯೇ ಇಲ್ಲ. ಆನ್ ಸ್ಪಾಟ್‌ನಲ್ಲಿ ಒಂದಿಷ್ಟು ಬದಲಾವಣೆಗಳಾಗಬಹುದು. ಹೊಸದೇನೋ ಸೇರಿಕೊಳ್ಳಬಹುದು. ಆದರೆ, ಒಂದು ಸಾರಿ ಚಿತ್ರೀಕರಣ ಶುರುವಾದರೆ, ಮಧ್ಯದಲ್ಲಿ ನಿಲ್ಲುಸುವುದಿಲ್ಲ. ಸಣ್ಣಸಣ್ಣ ಬ್ರೇಕ್‌ಗಳನ್ನು ತೆಗೆದುಕೊಳ್ಳಬಹುದು. ಮಿಕ್ಕಂತೆ ಸಾಧ್ಯವಾದಷ್ಟು ಒಂದೇ ಸ್ಪೀಡ್‌ನಲ್ಲಿ ಚಿತ್ರೀಕರಣ ಮಾಡುತ್ತೀವಿ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಸೃಜನ್.
ಈ ಕಾರ್ಯಕ್ರಮ ಮಾಡುವುದಕ್ಕಿಂತ ಮುಂಚೆಯೇ ಇಂಥದ್ದೊಂದು ಕಾರ್ಯಕ್ರಮ ಮಾಡಬೇಕು ಮತ್ತು ಇಂತಿಂಥಾ ಕಲಾವಿದರು ಇರಬೇಕು ಎಂದು ಸೃಜನ್ ಬಹಳ ಕ್ಲಿಯರ್ ಆಗಿದ್ದಾರಂತೆ. “ಈ ಕಾರ್ಯಕ್ರಮದಲ್ಲಿ ಶ್ವೇತಾ, ಅಪರ್ಣಾ, ವಿ.ಮನೋಹರ್, ದಯಾನಂದ್ ಇರಬೇಕು ಅಂತ ಮುಂಚೆಯೇ ಡಿಸೈಡ್ ಮಾಡಿಬಿಟ್ಟಿದ್ದೆ. ಅದಕ್ಕೆ ಸರಿಯಾಗಿ ಎಲ್ಲರೂ ಸಿಕ್ಕರು. ವಿಶೇವೆಂದರೆ, ಇವತ್ತು ಪ್ರತಿ ಪಾತ್ರ ಸ್ಟಾರ್ ಆಗಿದೆ. ಎಲ್ಲರೂ ಈ ಪಾತ್ರಗಳ ಬಗ್ಗೆ ಮಾತಾಡುವಂತೆ ಆಗಿದೆ. ಆ ಮಟ್ಟಿಗೆ ಗೆದ್ದ ಖುಷಿ ಇದೆ. ತ್ರಗಳನ್ನಿಟ್ಟುಕೊಂಡು ಕಥೆ ಮಾಡಿದ್ದೂ ಇದೆ. ಇಲ್ಲಿ ಕಥೆ ನನ್ನೊಬ್ಬನ ನಿರ್ಧಾರವಲ್ಲ. ನಮ್ಮ ಇಡೀ ತಂಡವೇ ಕಥೆಯಲ್ಲಿ ಪಾಲ್ಗೊಳ್ಳತ್ತೆ. ಎಲ್ಲಾ ಕಲಾವಿದರಿಗೂ ನಾನು ಏನು ಮಾಡಬಹುದು ಎಂದು ಮುಂಚೆಯೇ ಹೇಳಿಬಿಟ್ಟಿರುತ್ತೇನೆ. ನನಗೆ ಐಡಿಯಾಗಳನ್ನು ಕೊಡಿ ಎಂದೂ ಹೇಳಿರುತ್ತೇನೆ. ಅವರು ಹೇಳುತ್ತಿರುತ್ತಾರೆ. ಅದರಲ್ಲಿ ಬೆಸ್ಟ್ ಎನ್ನುವಂತದ್ದನ್ನು ನಾನು ಆಯ್ಕೆ ಮಾಡುತ್ತೇನೆ. ಈ ಕಾರ್ಯಕ್ರಮ ಶುರುವಾಗುವ ಮುನ್ನ ಇದು ಹಿಂದಿ “ಕಾಮಿಡಿ ನೈಟ್ಸ್ ವಿಥ್ ಕಪಿಲ್’ನ ರೀಮೇಕ್ ಎಂದು ಹೇಳಲಾಗುತಿತ್ತು. ಆದರೆ, ಅದಕ್ಕೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುತ್ತಾರೆ ಸೃಜನ್ ಲೋಕೇಶ್.
“ಮುಂಚೆ ರೀಮೇಕ್ ಎಂಬ ನಂಬಿಕೆ ಇತ್ತು. ಅದಕ್ಕೆ ಕಾರಣ ಏನಿರಬಹುದು ಎಂದರೆ, ಆ ಕಾರ್ಯಕ್ರಮ ಸಹ ಕಲರ್ಸ್ ಚಾನಲ್‌ನಲ್ಲಿ ಪ್ರಸಾರವಾಗುತಿತ್ತು. ಇದು ಸಹ ಅಲ್ಲೇ ಪ್ರಸಾರವಾಗುತ್ತಿರುವುದರಿಂದ, ಕಾಮನ್ ಆಗಿ ಇದು ರೀಮೇಕ್ ಎಂದು ಜನರಿಗೆ ಅನಿಸಿರಬಹುದು. ಅದು ಬಿಟ್ಟರೆ ಮಿಕ್ಕಂತೆ ಎರಡೂ ಕಾರ್ಯಕ್ರಮಗಳಲ್ಲಿ ಯಾವುದೇ ರೀತಿಯ ಸ್ವಾಮ್ಯತೆ ಇಲ್ಲ. ಅಲ್ಲಿ ಓನರ್, ಬಾಮೈದ ಇರಲಿಲ್ಲ. ಇನ್ನು ಇಲ್ಲಿಯ ಕಥೆ ಸಹ ಬಹಳಷ್ಟು ಬೇರೆ ತರಹ ಇದೆ. ಇಲ್ಲಿನ ನೇಟಿವಿಟಿಗೆ ಏನು ಸರಿಯೋ ಅದು ಮಾತ್ರ ಮಾಡುತ್ತಿದ್ದೇವೆ. ಅಲ್ಲಿ ಮಾಡಿದ್ದನ್ನ ಇಲ್ಲಿ ಮಾಡಬಾರದು ಎಂಬುದು ನಮ್ಮ ನಿರ್ಧಾರ. ಆದರೂ ಮೊದಲ ಎಪಿಸೋಡ್‌ನಲ್ಲಿ ಅಲ್ಲಿಯ ಕಥೆ ಬಳಸಿಕೊಂಡಿದ್ದವೆ. ಆಮೇಲೆಲ್ಲಾ ಚೇಂಜ್. ಎಲ್ಲವೂ ನಮ್ಮ ಕಲ್ಪನೆಯೇ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಸೃಜನ್. ಇಲ್ಲಿ ಬಹಳಷ್ಟು ವಿಷಯಗಳು ಆನ್‌ಸ್ಪಾಟ್‌ನಲ್ಲಿ ಹುಟ್ಟುತ್ತವೆ ಎಂಬ ವಿಷಯವನ್ನು ಹೇಳುವುದಕ್ಕೆ ಸೃಜನ್ ಮರೆಯುವುದಿಲ್ಲ. “ಕೆಲವು ಬಾರಿ ಮೇಕಪ್ ಮಾಡಿಕೊಳ್ಳುವಾಗ ಹೊಸ ಹೊಸ ಐಡಿಯಾಗಳು ಹೊಳೆದಿದ್ದೂ ಇದೆ. ಆ ಕ್ಷಣದಲ್ಲಿ ಯಾರಿದ್ದಾರೆ ನೋಡಿಕೊಂಡು, ಹೀಗೀಗೆ ಮಾಡೋಣ ಎಂದು ತೀರ್ಮಾಣ ಮಾಡಿದ್ದೂ ಇದೆ. ನಿಜ ಹೇಳಬೇಕೆಂದರೆ, “ಬದ್ಮಾಶ್’ ಟೀಂನವರು ಬಂದಿದ್ದಾಗ, ಏನೋ ಹೊಳೆಯಿತು. ತಕ್ಷಣ ಕುರಿ ಪ್ರತಾಪನ್ನ ಕರೆದು “ಹಪ್ಪಳಾ ಸ್ಮಾಶ್’ ಅಂತ ಮಾಡೋಣ ಅಂದೆ. ನೀನು ಏನಾದರೂ ಹೇಳುತ್ತಾ ಹೋಗು, ನಾನು ಕೌಂಟರ್ ಕೊಡುತ್ತಾ ಹೋಗುತ್ತೀನಿ. ಇನ್‌ಸ್ಟಂಟ್ ಆಗಿ ಏನು ಬರುತ್ತದೋ ಅದನ್ನ ಮಾಡೋಣ ಅಂತ ಮಾಡಿದೆವು. ಚೆನ್ನಾಗಾಯಿತು. ಎಷ್ಟೋ ಬಾರಿ ಪ್ಲಾನ್ ಮಾಡಿದರೂ ವಕೌಟ್ ಆಗುವುದಿಲ್ಲ. ತುಂಭಾ ಪ್ಲಾನ್ ಮಾಡಿ ತೋಪ್ ಆಗಿದ್ದೂ ಇದೆ’ ಎನ್ನುತ್ತಾರೆ ಸೃಜನ್.
ಮುಂದೇನು? ಅದು ಸೃಜನ್‌ಗೂ ಸದ್ಯಕ್ಕೆ ಗೊತ್ತಿಲ್ಲ. “ಮಜಾ ಟಾಕೀಸ್’ ಇದ್ದೇ ಇದೆ. ಬೇರೆ ಅವಕಾಶಗಳು ಬಂದರೂ ಅದಕ್ಕೆ ಅವರು ತಯಾರಂತೆ. “ನಿರೂಪಣೆ, ಅಭಿನಯದಲ್ಲಿ ಯಾವುದು ಹೆಚ್ಚು, ಕಡಿಮೆ ಅಂತೆಲ್ಲಾ ನಾನು ನೋಡುವುದಿಲ್ಲ. ಅದೂ ಕೆಲಸವೇ. ಒಬ್ಬ ಡಾಕ್ಟರ್‌ಗೆ ನೆಗಡಿಯಾದರೇನು, ಜ್ವರವಾದರೇನು. ಎರಡಕ್ಕೂ ಔಷಧ ಕೊಡಲೇಬೇಕಲ್ವಾ? ಅದೇ ತರಹ ನಮ್ಮ ಕೆಲಸ. ನಿರೂಪಣೆ ಆದರೇನು, ನಟನೆ ಆದರೇನು. ಸದ್ಯಕ್ಕೆ ಇದು ನಡೆಯುತ್ತಿದೆ. ಇನ್ನು ಲೋಕೇಶ್ ಕ್ರಿಯೇಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಮಾಡಿ, “ಮಂಗ್ಳೂರ್ ಹುಡ್ಗಿ ಹುಬ್ಳಿ ಹುಡ್ಗ’ ಅಂತ ಸೀರಿಯಲ್ ಮಾಡ್ತಿದ್ದೀನಿ. ಕಲರ್ಸ್ ಸೂಪರ್‌ನಲ್ಲಿ ಬರ್ತಾ ಇದೆ …’ ಎಂದು ಸೃಜನ್ ಹೇಳುತ್ತಲೇ, ಇನ್ನೊಂದು ಎಪಿಸೋಡ್‌ನ ಚಿತ್ರೀಕರಣಕ್ಕೆ ಎದ್ದು ಹೊರಟರು.
ನಾನೂ ಜೋಕ್ ಮಾಡ್ತಿದ್ದೆ!
ಇತ್ತೀಚೆಗೊಂದು ಪ್ರಸಂಗ ನಡೆಯಿತು. ಅದೇನೆಂದರೆ, ಸೋಷಿಯಲ್ ಮೀಡಿಯಾದಲ್ಲಿ ಯಾರೋ ಒಂದು ಫೋಟೋ ಹಾಕಿದ್ದರು. ಸೃಜನ್ ಕುರಿತಾಗಿ ಒಂದು ಕಾಮೆಂಟ್ ಸಹ ಹಾಕಿದ್ದರು. ಅದಕ್ಕೆ ಪ್ರತಿಯಾಗಿ ಸೃಜನ್ ಸಹ ಪ್ರತಿಕ್ರಿಯಿಸಿದ್ದರು. ಈ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಸೃಜನ್ ತಮ್ಮ ಕಾರ್ಯಕ್ರಮದಲ್ಲಿ ಯಾರಿಗೆ ಏನು ಬೇಕಾದರೂ ಹೇಳಬಹುದು, ಅದೇ ಬೇರೆಯವರು ಸೃಜನ್ ಬಗ್ಗೆ ಏನಾದರೂ ಕಿಚಾಯಿಸಿದಾಗ ಸೃಜನ್ ಎಗರಾಡುವುದು ಎಷ್ಟು ಸರಿ ಎಂದು ಹಲವರು ಕೇಳಿದ್ದರು. ಈ ಬಗ್ಗೆ ಸೃಜನ್ ಯಾವುದೇ ಉತ್ತರವನ್ನೂ ಕೊಟ್ಟಿರಲಿಲ್ಲ. ಈಗ ಅದಕ್ಕೆ ಉತ್ತರ ನೀಡಿದ್ದಾರೆ.
“ನಿಜಕ್ಕೂ ನಾನು ಬೇಸರದಿಂದ ಹೇಳಿದ್ದಲ್ಲ. ಅವರು ಹೇಗೆ ತಮಾಷೆಗೆ ಹೇಳಿದರೋ, ನಾನು ಸಹ ತಮಾಷೆಗೆ ಹೇಳಿದ್ದೆ. ಇದೇನು ತಲೆ ಹೋಗೋ ವಿಷಯವಲ್ಲ. ಮುಖ್ಯವೂ ಅಲ್ಲ. ಹಾಗಾಗಿ ಪ್ರತಿಕ್ರಿಯೆ ನೀಡಬಾರದು ಅಂತ ಸುಮ್ಮನಿದ್ದೆ. ನಾನು ಏನೋ ಹೇಳಬಹುದು. ಅದಕ್ಕೆ ಇನ್ನೊಂದಿಷ್ಟು ಜನ, ಇನ್ನೂ ಬೆಳೆಸೋದು, ಇವೆಲ್ಲಾ ಬೇಕಾ? ಮುಖ್ಯವಾಗಿರುವ ವಿಷಯ ಸಾಕಷ್ಟಿದೆ. ಅದು ಬಿಟ್ಟು ಇವೆಲ್ಲಾ ಸುಮ್ಮನೆ ಟೈಂ ವೇಸ್ಟು’ ಎನ್ನುತ್ತಾರೆ ಸೃಜನ್.
ಬರಹ: ಚೇತನ್ ನಾಡಿಗೇರ್; ಚಿತ್ರಗಳು: ಸಂಗ್ರಹ