Advertisement

ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ದರ ಕುಸಿತ: ರೈತ ಕಂಗಾಲು  

08:01 PM Feb 06, 2021 | Team Udayavani |

ಹಾವೇರಿ: ಜಿಲ್ಲೆಯ ಪ್ರಮುಖ ಬೆಳೆಗಳಲ್ಲಿ ಒಂದಾದ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದೇ ರೈತರು ಸಂಕಷ್ಟ ಎದುರಿಸುವಂತಾಗಿದ್ದು, ಅತಿವೃಷ್ಟಿ, ನೆರೆಯ ಹೊಡೆತದ ನಡುವೆಯೂ ಕಷ್ಟಪಟ್ಟು ಬೆಳೆದಿದ್ದ ಮೆಕ್ಕೆಜೋಳಕ್ಕೆ ಉತ್ತಮ ದರ  ಇಲ್ಲದಿರುವುದು ರೈತರನ್ನು ಚಿಂತೆಗೀಡು ಮಾಡಿದೆ.

Advertisement

ಜಿಲ್ಲೆಯಲ್ಲಿ ಅತಿಹೆಚ್ಚು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು ದರ ಏರಿಕೆ ನಿರೀಕ್ಷೆಯಲ್ಲಿ ಮಾರಾಟ ಮಾಡದೇ ಸಂಗ್ರಹಿಸಿದ್ದರು. ಆದರೆ, 2000 ರೂ. ಆಸುಪಾಸು ಮಾರಾಟವಾಗುತ್ತಿದ್ದ ಕ್ವಿಂಟಲ್‌ ಮೆಕ್ಕೆಜೋಳದ ಬೆಲೆ ಈಗ 1200-1400 ರೂ. ಸಮೀಪಕ್ಕೆ ಬಂದಿದೆ. ಬೆಲೆಕುಸಿತದಿಂದ ಕಂಗಾಲಾಗಿರುವ ರೈತರು ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂಬ ಆಸೆಯಿಂದ ಕಾಯುತ್ತಿದ್ದಾರೆ.

ಖರೀದಿ ಕೇಂದ್ರ ತೆರೆಯುವ ನಿರೀಕ್ಷೆ: ಎರಡು ವರ್ಷದ ಹಿಂದೆ ಮೆಕ್ಕೆಜೋಳಕ್ಕೆ ಒಳ್ಳೆಯ ಬೆಲೆ ಸಿಕ್ಕಿತ್ತು. ಹೀಗಾಗಿ ಸರ್ಕಾರ ಖರೀದಿ  ಕೇಂದ್ರ ತೆರೆದರೂ ರೈತರು ಖರೀದಿ ಕೇಂದ್ರಕ್ಕೆ ಬಾರದೇ ಮಾರುಕಟ್ಟೆಯಲ್ಲೇ ಮಾರಾಟ ಮಾಡುತ್ತಿದ್ದರು. ಆದರೆ, ಕಳೆದ  ವರ್ಷದಂತೆ ಈ ಬಾರಿಯೂ ಬೆಲೆ ಕುಸಿಯುತ್ತಿರುವುದು ರೈತರನ್ನು ಹೈರಾಣಾಗಿಸಿದೆ.

ನೆರೆ, ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ  ಮೆಕ್ಕೆಜೋಳ ಇಳುವರಿ ಕುಂಠಿತಗೊಂಡಿದೆ. ಆರಂಭದ ಫಸಲು ಬಂದಾಗ ಕಟಾವು ಮಾಡಿ ಕೆಲವರು ಮಾರಾಟ ಮಾಡಿದ್ದಾರೆ. ಇನ್ನೂ ಕೆಲವರು ಸರ್ಕಾರ ಮಾರುಕಟ್ಟೆಗಿಂತ ಹೆಚ್ಚಿನ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ  ಕೇಂದ್ರ ಆರಂಭಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಮೆಕ್ಕೆಜೋಳ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ, ಸರ್ಕಾರ ಮಾತ್ರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವ ಪ್ರಸ್ತಾವನ್ನೇ ಮಾಡಿಲ್ಲ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.

ದರ ಕುಸಿತ: ಸರ್ಕಾರ ಮೆಕ್ಕೆಜೋಳಕ್ಕೆ 1860 ರೂ. ಬೆಲೆ ನಿಗದಿ ಪಡಿಸಿದೆ. ಎರಡು ವರ್ಷದ ಹಿಂದೆ ಮಾರುಕಟ್ಟೆಯಲ್ಲಿ  ಮೆಕ್ಕೆಜೋಳದ ಬೇಡಿಕೆ ಹೆಚ್ಚಾಗಿದ್ದ ಪರಿಣಾಮ ಪ್ರತಿ ಕ್ವಿಂಟಲ್‌ ಮೆಕ್ಕೆಜೋಳ 1850 ರೂ.ರಿಂದ 2200 ರೂ.ವರೆಗೂ ಮಾರಾಟವಾಗುತ್ತಿತ್ತು. ಸರ್ಕಾರ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರ ಆರಂಭಿಸದಿರುವುದರಿಂದ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕುಸಿಯುತ್ತಿದೆ. ರೈತರ ಮನೆ ಬಾಗಿಲಿಗೆ ಬಂದು ಕೊಂಡ್ಯೊಯುತ್ತಿದ್ದ  ದಲ್ಲಾಳಿಗಳು ಈಗ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅಳಿದುಳಿದು ಬಂದಿರುವ ಫಸಲನ್ನು ರೈತರು ಸಂಗ್ರಹಣೆ ಮಾಡಿಕೊಳ್ಳುವುದೇ ದುಸ್ತರವಾಗಿದೆ. ಇದನ್ನೇ ಮುಂದಿಟ್ಟುಕೊಂಡು ವ್ಯಾಪಾರಸ್ಥರು ರೈತರನ್ನು ಸತಾಯಿಸುತ್ತಿದ್ದಾರೆ.

Advertisement

ಇದನ್ನು ಓದಿ :ವೀರಭದ್ರೇಶ್ವರ ಜಾತ್ರಾ ಮಹೋತ್ಸವ

ಇದರಿಂದಾಗಿ ದಿಕ್ಕುತೋಚದಂತಾಗಿರುವ ರೈತರು ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹೇಳಿದ ದರಕ್ಕೆ ತಮ್ಮ ಮೆಕ್ಕೆಜೋಳ ಮಾರಾಟ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಇಳುವರಿ ಕುಸಿತ: ಕಳೆದ ವರ್ಷವೂ ಅತಿವೃಷ್ಟಿಯಿಂದ ಆರ್ಥಿಕ ಸಂಕಷ್ಟ ಅನುಭವಿಸಿದ್ದ ರೈತರಿಗೆ ಈ ವರ್ಷವೂ ಮಳೆ ಬರೆ ಎಳೆದಿದೆ. ಆರಂಭದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೆಳೆಗಳು ಬಳಿಕ ಅತಿಯಾದ ಮಳೆಯಿಂದ ಜಮೀನುಗಳು ಜಲಾವೃತಗೊಂಡು ಬೆಳೆಗಳು ನಾಶವಾದವು. ಕೆಲವಡೆ ಅಲ್ಪಸ್ವಲ್ಪ ಬೆಳೆ ಉಳಿದರೂ ಇಳುವರಿ ಕುಂಠಿತವಾಗಿದೆ. ಎಕರೆಗೆ 20-25 ಕ್ವಿಂಟಲ್‌ ಬರುತ್ತಿದ್ದ ಇಳುವರಿ ಈ ಬಾರಿ 10-15 ಕ್ವಿಂಟಲ್‌ ಬಂದಿದೆ. ಬಿತ್ತನೆ ಹಾಗೂ ಒಕ್ಕಲು ಮಾಡಿದ್ದ ಖರ್ಚು ಸಹ ಬಾರದಂತಾಗಿದೆ ಎಂದು ರೈತರು ಅಳಲು ತೊಡಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next