ಹಾವೇರಿ: ಸೂಕ್ತ ಮಾರುಕಟ್ಟೆ, ಯೋಗ್ಯ ದರ ಇಲ್ಲದೇ ಕಂಗಾಲಾಗಿರುವ ಮೆಕ್ಕೆಜೋಳ ಬೆಳೆಗಾರರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳ) ವತಿಯಿಂದ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಿದೆ.
ಇದು ರೈತರಲ್ಲಿ ಮಂದಹಾಸ ಮೂಡಿಸಿದೆ ಅದರೂ ಇದರ ಪ್ರಯೋಜನ ಎಷ್ಟು ರೈತರಿಗೆ ಸಿಗುತ್ತದೆ ಎಂಬ ಲೆಕ್ಕಾಚಾರ ನಿರಾಸೆಗೊಳಿಸಿದೆ. ಹಾವೇರಿ, ದಾವಣಗೆರೆ, ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಮುಖ್ಯ ಬೆಳೆಯಾಗಿ ಮೆಕ್ಕೆಜೋಳವನ್ನೇ ಬೆಳೆಯಲಾಗುತ್ತಿದೆ. ಪ್ರಸ್ತುತ ಅಂದಾಜು 50ಲಕ್ಷ ಮೆಟ್ರಿಕ್ ಟನ್‌ನಷ್ಟು ಮೆಕ್ಕೆಜೋಳ ಮಾರಾಟಕ್ಕೆ ಸಿದ್ಧವಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸರ್ಕಾರ ಕೆಎಂಎಫ್ ಮೂಲಕ ಕೇವಲ 20ಸಾವಿರ ಮೆಟ್ರಿಕ್ ಟನ್ ಮೆಕ್ಕೆಜೋಳವನ್ನು ಬೆಂಬಲ ಬೆಲೆ ಯಲ್ಲಿ ಖರೀದಿಸಿದರೆ ಅದರಿಂದ ರೈತರಿಗೆ ಅನುಕಲವಾಗಲಿದೆಯೇ? ಇದು “ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ನೀಡಿದಂತಾಗುತ್ತದೆ ಎಂಬ ವಿಮರ್ಶೆ ಶುರುವಾಗಿದೆ.
ಕೆಎಂಎಫ್‌ಗೆ ಪಶು ಆಹಾರ ತಯಾರಿಕೆಗೆ ವಾರ್ಷಿಕ 2.20ಲಕ್ಷ ಮೆ.ಟನ್ ಮೆಕ್ಕೆಜೋಳ ಬೇಕಾಗುತ್ತದೆ. ಪ್ರಸ್ತುತ ಕೇವಲ 20,000ಮೆ. ಟನ್. ಮೆಕ್ಕೆಜೋಳವನ್ನು 1760ರೂ. ಬೆಂಬಲ ಬೆಲೆಯಲ್ಲಿ ಖರೀಸಲು ತೀರ್ಮಾನಿಸಿದ್ದು ಅಧಿಕ ಬೆಳೆಯುವ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಹೆಚ್ಚು ಪ್ರಮಾಣದ ಖರೀದಿಗೆ ಮುಂದಾದರೂ ಒಂದು ಜಿಲ್ಲೆಯಲ್ಲಿ ಸರಾಸರಿ ಗರಿಷ್ಠ ನಾಲ್ಕೈದು ಸಾವಿರ ಮೆ.ಟನ್ ಮಾತ್ರ ಖರೀದಿಸಲು ಸಾಧ್ಯವಾಗುತ್ತದೆ. ಇದು ತೀರಾ ಕಡಿಮೆ ರೈತರಿಗೆ ಅನುಕೂಲವಾಗಲಿದೆ. ಆಗ ಮಾರಾಟವಾಗದ ರೈತರ ಕೆಂಗಣ್ಣಿಗೆ ಸರ್ಕಾರ ಗುರಿಯಾಗುವುದು ಅನಿವಾರ್ಯ.
ಘಟಕಕ್ಕೆ ಒಯ್ಯಬೇಕು: ಕೆಎಂಎಫ್ ತನ್ನ ಗೋದಾಮು ಲಭ್ಯವಿರುವ ಹಾಸನ, ಧಾರವಾಡ, ಶಿಕಾರಿಪುರದ ಪಶು ಆಹಾರ ಘಟಕಗಳಿಗೆ ರೈತರು ನೇರವಾಗಿ ತಂದು ಕೊಡಬೇಕು ಎಂದು ಹೇಳಿದೆ. ಆದರೆ, ಇಂದಿನ ಲಾಕ್‌ಡೌನ್ ಅವಧಿಯಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಮೊದಲು ಹತ್ತಿರದ ಕೆಎಂಎಫ್ ಪಶು ಆಹಾರ ಘಟಕ ಕಚೇರಿಗೆ ಸ್ಯಾಂಪಲ್ ನೊಂದಿಗೆ ಹೋಗಬೇಕು. ಅಲ್ಲಿ ಅವರು ಗುಣಮಟ್ಟ ಪರೀಕ್ಷೆ ಮಾಡುತ್ತಾರೆ. ನಂತರ ಅದನ್ನು ತರಲು ದಿನಾಂಕ ಕೊಡುತ್ತಾರೆ. ಅಂದು ಆ ರೈತ ಪಾಸ್ ಪಡೆದು, ವಾಹನ ವ್ಯವಸ್ಥೆ ಮಾಡಿಕೊಂಡು ಮೆಕ್ಕೆಜೋಳ ಮಾರಾಟ ಮಾಡಬೇಕಾಗಿದೆ.
ನುಗ್ಗುವ ಸಾಧ್ಯತೆ: ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಅಪಾರ ಪ್ರಮಾಣದಲ್ಲಿದ್ದು ಖರೀದಿಸುವ ಪ್ರಮಾಣ ತೀರಾ ಕಡಿಮೆ ಇರುವುದರಿಂದ ರೈತರು ಮುಗಿಬೀಳುವ ಸಾಧ್ಯತೆ ಹೆಚ್ಚಾಗಿದೆ. ಹಾವೇರಿ ಜಿಲ್ಲೆಯೊಂದರಲ್ಲೇ 50,000ಮೆ.ಟನ್. ಮೆಕ್ಕೆಜೋಳವಿದೆ. ಎಲ್ಲರೂ ಹೇಗಾದರೂ ಮಾಡಿ ಮಾರಾಟ ಮಾಡಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಇದರಿಂದ ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಓಡಾಡುವುದು ಅಷ್ಟು ಸುಲಭವಲ್ಲ. ಜಿಲ್ಲಾವಾರು ಸ್ಯಾಂಪಲ್ ಸ್ವೀಕಾರ ಹಾಗೂ ಪರೀಕ್ಷೆ ಕೇಂದ್ರ ತೆರೆದರೂ ಅಲ್ಲಿ ಕಿಮೀ ಗಟ್ಟಲೆ ಸಾಲು, ಜನದಟ್ಟಣೆ ತಪ್ಪಿಸಿ, ಸಾಮಾಜಿಕ ಅಂತರ ಕಾಯಲು ಜಿಲ್ಲಾಡಳಿತ ಕ್ರಮವಹಿಸುವುದು ಅನಿವಾರ್ಯ. ಇದರಿಂದ ಖರೀದಿ ಪ್ರಕ್ರಿಯೆಯೂ ಸಾಕಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಕೆಎಂಎಫ್ ಮೂಲಕ ಮೆಕ್ಕೆಜೋಳ ಖರೀದಿಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ಕೆಎಂಎಫ್ ಖರೀದಿಸುವ ಪ್ರಮಾಣ ತೀರಾ ಕಡಿಮೆಯಾದ್ದರಿಂದ ಇದರ ಲಾಭ ಎಲ್ಲ ರೈತರಿಗೆ ಸಿಗುವುದಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಇನ್ನೊಮ್ಮೆ ಕೇಂದ್ರದ ಮೇಲೆ ಒತ್ತಡ ಹೇರಿ ಸರ್ಕಾರದಿಂದಲೇ ಖರೀದಿಸಲು ಮುಂದಾಗುವುದು ಸೂಕ್ತ. ಖರೀದಿ ಪ್ರಕ್ರಿಯೆಗೆ ಈಗಲೇ ಚಾಲನೆ ಕೊಟ್ಟರೆ ಪಾತಾಳಕ್ಕೆ ಕುಸಿಯುತ್ತಿರುವ ಮೆಕ್ಕೆಜೋಳ ದರ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಬಹುದು. ಕೆಎಂಎಫ್ ಖರೀದಿಗಾಗಿ ಜಿಲ್ಲಾವಾರು ಸ್ಥಳೀಯವಾಗಿಯೇ ಸ್ಯಾಂಪಲ್ ಸ್ವೀಕಾರ, ಪರೀಕ್ಷೆ ಹಾಗೂ ಖರೀದಿ ಪ್ರಕ್ರಿಯೆ ನಡೆಸಿದರೆ ಅನುಕೂಲವಾಗುತ್ತದೆ.
-ಬಸವರಾಜ ಅರಬಗೊಂಡ, ಅಧ್ಯಕ್ಷರು, ಧಾರವಾಡ ಹಾಲು ಒಕ್ಕೂಟ.
ಕೆಎಂಎಫ್‌ನಿಂದ ಮೆಕ್ಕೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವುದು ಒಳ್ಳೆಯ ಕೆಲಸ. ಆದರೆ, ಅದರ ಲಾಭ ಎಲ್ಲ ರೈತರಿಗೆ ಸಿಗಲ್ಲ. ಆದ್ದರಿಂದ ಸರ್ಕಾರವೇ ನೇರವಾಗಿ ಬೆಂಬಲ ಬಲೆಯಲ್ಲಿ ಖರೀದಿಸಲು ಮುಂದಾಗಬೇಕು. ಇನ್ನು ಕೆಎಂಎಫ್ ಖರೀದಿಸುವಾಗ ಅರ್ಹ ಬಡ ರೈತರ ಬೆಳೆ ಖರೀದಿಯಾಗುವಂತೆ ನೋಡಿಕೊಳ್ಳುವುದು ಮುಖ್ಯ. ಗೋದಾಮುಗಳಲ್ಲಿನ ಸಂಗ್ರಹ ಖರೀದಿಯಾಗಿ ಉಳ್ಳವರಿಗೆ ಅನುಕೂಲ ಮಾಡಿಕೊಡುವಂತಾದರೆ ಸರ್ಕಾರದ ಉದ್ದೇಶ ಈಡೇರುವುದಿಲ್ಲ.
-ರಾಮಣ್ಣ ಕೆಂಚಳ್ಳೇರ, ಜಿಲ್ಲಾಧ್ಯಕ್ಷರು, ರೈತ ಸಂಘ.
-ಎಚ್.ಕೆ. ನಟರಾಜ