ಧಾರವಾಡ: ಸೌಹಾರ್ದ ಸಹಕಾರಿಯು ಉತ್ತಮ ರೀತಿಯಲ್ಲಿ ನಡೆದುಕೊಂಡು ಹೋಗಲು ಸದಸ್ಯರು ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಪಾಡಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಡಾ|ಎಚ್.ಬಿ.ಪ್ರಭಾಕರ ಶಾಸ್ತ್ರಿ ಹೇಳಿದರು.
ನಗರದ ಧಾರವಾಡ ವಕೀಲರ ಸಂಘದಲ್ಲಿ ದಿ ಧಾರವಾಡ ಡಿಸ್ಟ್ರಿಕ್ಟ್ ಲೀಗಲ್ ಪ್ರಾಕ್ಟಿಷನರ್ಸ್ ಮಲ್ಟಿಪರ್ಪಸ್ ಸೌಹಾರ್ದ ಸಹಕಾರಿಯ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸದಸ್ಯರು ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರು ಸಂದಾಯ ಮಾಡಿ ಸಹಕಾರಿ ಸದೃಢವಾಗಿ ಮುನ್ನಡೆಯಲು ಸಹಕರಿಸಬೇಕು ಎಂದರು. ಭಾರತೀಯರಿಗೆ ಯುಗಾದಿ ಹೊಸ ವರ್ಷವಾದರೂ ವ್ಯಾವಹಾರಿಕ ಕೆಲಸ ಕಾರ್ಯಗಳಿಗಾಗಿ ನಾವು ಆಂಗ್ಲ ಮಾದರಿಯ ಕ್ಯಾಲೆಂಡರ್‌ನ್ನು ಈಗಲೂ ಅನುಸರಿಸಿಕೊಂಡು ಬರುತ್ತಿದ್ದೇವೆ. ಕ್ಯಾಲೆಂಡರ್ ಮನುಷ್ಯ ಬದುಕಿನಲ್ಲಿ ದಿನನಿತ್ಯ ಹಲವಾರು ಕಾರಣಗಳಿಗಾಗಿ ಬಹಳ ಮಹತ್ವದ್ದಾಗಿದೆ. ವರ್ಷದ ಹಬ್ಬ ಹರಿದಿನ ಮತ್ತು ಮಹತ್ವದ ದಿನಗಳ ಕುರಿತು ಮಾಹಿತಿ ನಮ್ಮ ಕಣ್ಮುಂದೆ ಇದ್ದಾಗ ನಾವು ಅಚ್ಚುಕಟ್ಟಾಗಿ ಸಮಯ ಹೊಂದಾಣಿಕೆ ಮಾಡಿಕೊಂಡು ಸಮಯ, ದಿನಕ್ಕನುಗುಣವಾಗಿ ಕಾರ್ಯ ನಿರ್ವಹಿಸಲು ಕ್ಯಾಲೆಂಡರ್ ಬಹಳ ಸಹಕಾರಿಯಾಗಿದೆ ಎಂದರು.
ಧಾರವಾಡ ವಕೀಲರ ಸಂಘದಿಂದ ನ್ಯಾಯಮೂರ್ತಿ ಡಾ|ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ವಿ.ಡಿ. ಕಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಎಮ್ ಅಡಿಗ, ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್.ಪೋಲಿಸ್ ಪಾಟೀಲ, ಪ್ರಧಾನ ಕಾರ್ಯದರ್ಶಿ ಎನ್.ಆರ್.ಮಟ್ಟಿ ಇದ್ದರು. ಸಹಕಾರಿಯ ಉಪಾಧ್ಯಕ್ಷ ಅನೂಪ ದೇಶಪಾಂಡೆ ಸ್ವಾಗತಿಸಿದರು. ಕೆ.ಎಚ್.ಪಾಟೀಲ ನಿರೂಪಿಸಿದರು. ಆರತಿ ಎಸ್. ಮುತಾಲಿಕದೇಸಾಯಿ ವಂದಿಸಿದರು.