ಬಳ್ಳಾರಿ: ಜಿಲ್ಲೆಯ ಎಲ್ಲ ನಗರ ಸಂಸ್ಥೆಗಳಲ್ಲಿ ಬಾಕಿ ಇರುವ ವಿವಿಧ ಕಾಮಗಾರಿಗಳನ್ನು ನಿಗದಿಪಡಿಸಿದ ಸಮಯದಲ್ಲಿ ಮುಗಿಸಬೇಕು ಹಾಗೂ ಆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎಸ್‌ಎಫ್‌ಸಿ, 14ನೇ ಹಣಕಾಸು ಯೋಜನೆ, ಡಿಎಂಎಫ್, ಎಚ್ಕೆಆರ್‌ಡಿ ಹಾಗೂ ಇತರೆ ಯೋಜನೆಗಳ ಅನುಷ್ಠಾನಗೊಳಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವ್ಯಾಪ್ತಿಯಲ್ಲಿ ನೀಡಿರುವ ಟೆಂಡರ್ ಕಾಮಗಾರಿಗಳು ಶೇ. 100ರಷ್ಟು ಮುಗಿಯದಿದ್ದಲ್ಲಿ ಗುತ್ತಿಗೆ ನೀಡಿದ ಗುತ್ತಿಗೆದಾರರನ್ನು ಕರೆಸಿ ಅವರ ಜೊತೆ ಸಭೆ ನಡೆಸಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಬೇಕು. ಟೆಂಡರ್‌ಗೆ ಸಂಬಂಧಿಸಿದ ಹಣವನ್ನು ಅಥವಾ ಬಾಕಿ ಉಳಿಸಿಕೊಂಡಿರುವ ಬಿಲ್ಲುಗಳನ್ನು ಚುಕ್ತಾ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಿಯಮಾವಳಿ ಪ್ರಕಾರ ಟೆಂಡರ್ ಪ್ರಕ್ರಿಯೆ ಮುಗಿದು ನಂತರ ಗುತ್ತಿಗೆದಾರರು ಕೆಲಸವನ್ನು ಆಯಾ ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿಯನ್ನು ಪ್ರಾರಂಭಿಸಬೇಕು. ಒಂದುವೇಳೆ ಟೆಂಡರ್ ಪಡೆದ ನಂತರ ಕೆಲಸವನ್ನು ಕೈಗೆತ್ತಿಕೊಳ್ಳದಿದ್ದರೆ ಅಂತಹ ಗುತ್ತಿಗೆದಾರರ ಟೆಂಡರ್‌ನ್ನು ನಿಯಮಾವಳಿ ಪ್ರಕಾರ ನನ್ನ ಗಮನಕ್ಕೆ ತಂದು ರದ್ದುಗೊಳಿಸಬೇಕು ಎಂದು ಹೇಳಿದ ಡಿಸಿ ನಕುಲ್ ಅವರು ಈ ವಿಷಯದಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದರು.
ಬಾಕಿ ಹಣ ಚುಕ್ತಾ ಮಾಡಿ: ಈಗಾಗಲೇ ಜಿಲ್ಲೆಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರ ಮೇಲೆ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಕೂಡಲೇ ಪರಿಶೀಲಿಸಿ ಹಾಗೂ ಅದರ ಗುಣಮಟ್ಟವನ್ನು ನೋಡಿಕೊಂಡು ಅದಕ್ಕೆ ಸಂಬಂಧಿಸಿದ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಿ, ಇನ್ನುಳಿದ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಕೈಗೆತ್ತಿಕೊಂಡು ಕೊಟ್ಟಿರುವ ಅವಧಿಯಲ್ಲಿ ಕಾಮಗಾರಿಗಳನ್ನು ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 2009ರಿಂದ 2019ರವರೆಗೆ ವಿವಿಧ ಯೋಜನೆಗಳ ಅಡಿಯಲ್ಲಿ ನಡೆದ ಕಾಮಗಾರಿಗಳ ದಾಖಲೆಗಳ ಪರಿಶೀಲನೆ ಮಾಡಿ, ಅದಕ್ಕೆ ಸಂಬಂಧಿಸಿದ ಮಾಹಿತಿ ತಿಳಿದುಕೊಂಡು, ಈ ಅವಧಿಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ತಾಕೀತು ಮಾಡಿದರು. ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.