ಗುತ್ತಲ: ಚಿಕನ್ ಗುನ್ಯಾ, ಡೆಂಘೀ, ಮಲೇರಿಯಾದಂತ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಸೊಳ್ಳೆಗಳು ಪ್ರಮುಖ ಕಾರಣವಾಗಿದ್ದು, ಅವುಗಳನ್ನು ನಿಯಂತ್ರಿಸಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡುವುದು ಅವಶ್ಯವಿದೆ ಎಂದು ನೆಗಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಬಸವರಾಜ ಪಟ್ಟಣಶೆಟ್ಟಿ ಹೇಳಿದರು.
ಸಮುದಾಯ ಆರೋಗ್ಯ ಕೇಂದ್ರ ಗುತ್ತಲ ಹಾಗೂ ನೆಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ನಿಯಂತ್ರಣ ಹಾಗೂ ಅರಿವು ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಡಾ| ಡಿಡಿಎಂ ಪ್ರೌಢಶಾಲೆ ಮಕ್ಕಳಿಂದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರ ಮನೆಯ ಸುತ್ತಮುತ್ತಲೂ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಯಾವುದೇ ರೀತಿಯ ಕಾಯಿಲೆಗಳಿಂದ ದೂರವಿರಬಹುದು. ಆದರಲ್ಲೂ ಮಳೆಗಾಲದಲ್ಲಿ ಮನೆಯ ಸುತ್ತಲಿನಲ್ಲಿ ನೀರು ನಿಲ್ಲದಂತೆೆ ಎಚ್ಚರ ವಹಿಸುವುದು ಅವಶ್ಯವಾಗಿದೆ. ನಿಂತ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚು ಕಂಡು ಬರುತ್ತದೆ. ಮಲೇರಿಯಾ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಹಾಗೂ ರಕ್ತ ಪರೀಕ್ಷೆ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಡಿಡಿಎಂ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಡಿ. ಪಾಟೀಲ ಮಾತನಾಡಿ, ಸೊಳ್ಳೆಗಳು ಕಚ್ಚುವುದರಿಂದ ಚಿಕನ್ ಗುನ್ಯಾ, ಡೆಂಘೀ, ಮಲೇರಿಯಾ, ಮೆದುಳು ಜ್ವರ ಸಂಬಂಧಿಸಿದಂತೆ ಅನೇಕ ಸಾಂಕ್ರಾಮಿಕ ರೋಗಗಳ ಹರಡುತ್ತವೆ. ಸ್ವಚ್ಛ ಪರಿಸರ ನಿರ್ಮಿಸಿಕೊಳ್ಳುವದರಿಂದ ಪ್ರತಿಯೊಬ್ಬರು ಸಾಂಕ್ರಾಮಿಕ ರೋಗಗಳಿಂದ ಮುಕ್ತರಾಗಿ ಭಾರತವನ್ನು ಮಲೇರಿಯಾ ಮುಕ್ತ ದೇಶವನ್ನಾಗಿ ಮಾಡಬಹುದು ಎಂದರು.
ಜಾಥಾದಲ್ಲಿ ಮಲೇರಿಯಾ ರೋಗ ತಡೆಗಟ್ಟುವ ಕುರಿತು ಘೋಷಣೆ ಕೂಗುತ್ತ ಸಾಗಿದರು. ನಂತರ ಆಸ್ಪತ್ರೆಯ ಆವರಣದಲ್ಲಿ ಪಟ್ಟಣ ಸೇರಿದಂತೆ ಹಳ್ಳಿಗಳಿಂದ ಬಂದ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ರೋಗ ತಡೆಗಟ್ಟುವ ಕುರಿತು ಅರಿವು ಮೂಡಿಸಲಾಯಿತು.
ಡಾ| ಚಂದ್ರಶೇಖರ ಹೊತ್ತಿಗೆಗೌಡ್ರ, ಡಾ| ದೀಪ್ತಿ ಮಮದಾಪುರ, ಆರೋಗ್ಯ ಸಹಾಯಕರಾದ ಚಂದ್ರಶೇಖರ ಹಿತ್ತಲಮನಿ, ಮಾಲತೇಶ ಪುಟ್ಟನಗೌಡ್ರ, ವೈ.ಎಂ. ಚೌಡಪ್ಪನವರ, ನಂದಿನಿ ಬಿ., ರೇಖಾ ಚಿಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ಜಿ. ಗೌಡಪ್ಪನವರ, ಜಿ.ಎಸ್. ವಿಭೂತಿ, ಯು.ಎಸ್. ಪಾಟೀಲ, ಎಂ.ಎಸ್. ಭತ್ತದ, ಆರ್.ಎಂ. ಬಳ್ಳಾರಿ ಸೇರಿದಂತೆ ಅನೇಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.