Advertisement

ಮುಖ್ಯ ರಸ್ತೆ ಅಗಲೀಕರಣ ಕಾರ್ಯ ಶೀಘ್ರ ಆರಂಭ: ತಿಪ್ಪಾರೆಡ್ಡಿ

04:45 PM Dec 02, 2018 | |

ಚಿತ್ರದುರ್ಗ: ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿಮಂದಿರದವರೆಗಿನ ಮುಖ್ಯ ರಸ್ತೆ ಅಗಲೀಕರಣವನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಈಗಾಗಲೇ ತಾಲೂಕು ಕಚೇರಿ ಮತ್ತು ಪೊಲೀಸ್‌ ಠಾಣೆಯಿಂದ ಜಿಲ್ಲಾಧಿಕಾರಿಗಳ ವೃತ್ತದ ಮೂಲಕ ತುರುವನೂರು ರಸ್ತೆವರೆಗಿನ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ಇಲ್ಲಿನ ಪ್ರವಾಸಿಮಂದಿರದ ಮುಂಭಾಗ ರಸ್ತೆ, ಗುರುಭವನ, ಡಿಸಿ ಕಚೇರಿ ರಸ್ತೆಗಳ ಅಗಲೀಕರಣದ ಸಂಬಂಧ ಶನಿವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ನಗರದ ಪ್ರಮುಖ ರಸ್ತೆ ಸೇರಿದಂತೆ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಲಯದ ಮುಂಭಾಗದ ರಸ್ತೆಗಳು ಕಿರಿದಾಗಿದ್ದು ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಎಲ್ಲ ಸಂದರ್ಭದಲ್ಲಿ ನಾನೇ ಮುಂದೆ ನಿಂತು ಅಗಲೀಕರಣ ಮಾಡಿಸುತ್ತಿದ್ದೇನೆ. ಅಲ್ಲದೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಿದ್ದು ಎಲ್ಲೂ ಕಳಪೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.

ಚಳ್ಳಕೆರೆ ಟೋಲ್‌ಗೇಟ್‌ ರಸ್ತೆಯಿಂದ ಸರ್ಕಾರಿ ವಿಜ್ಞಾನ ಕಾಲೇಜು ಮಾರ್ಗವಾಗಿ ಡಿಎಚ್‌ಒ ಆಫಿಸ್‌, ಮದಕರಿ ನಾಯಕ ವೃತ್ತ, ಅಂಬೇಡ್ಕರ್‌ ವೃತ್ತದ ಮೂಲಕ ಪ್ರವಾಸಿಮಂದಿರದವರೆಗೆ ದ್ವಿಪಥ ನಿರ್ಮಾಣಕ್ಕಾಗಿ 19.5 ಕೋಟಿ ರೂ. ಮೀಸಲಿಡಲಾಗಿದೆ. ಈ ಅನುದಾನದಲ್ಲಿ ಸಿಸಿ ರಸ್ತೆ, ಯುಜಿಡಿ, ಪುಟ್‌ಪಾತ್‌ ನಿರ್ಮಾಣ ಕಾರ್ಯ ಶುರು ಮಾಡಲಾಗಿದೆ. ಪ್ರವಾಸಿಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತಕ್ಕೆ ಮತ್ತು ಗುರುಭವನದಿಂದ ಕೋರ್ಟ್‌ ಮುಂಭಾಗ ತುರುವನೂರು ರಸ್ತೆವರೆಗೆ 2 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ನಿರ್ಮಾಣ ಮಾಡಲಾಗುತ್ತಿದೆ ಮತ್ತು 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಕಲಾ ಕಾಲೇಜು ಮತ್ತು ವಿಜ್ಞಾನ ಕಾಲೇಜು ಮಧ್ಯದ
ರಸ್ತೆಗಳ ಕಾಮಗಾರಿ ನಡೆಯುತ್ತಿದೆ. ನಗರದ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳಿಗೆ ನನ್ನ ಸಂಪೂರ್ಣ ಸಹಕಾರವಿದೆ. ಬಾಲಕಿಯರ ಸರ್ಕಾರಿ ಕಾಲೇಜು ಮುಂಭಾಗದ ಗೂಡಂಗಡಿಗಳನ್ನು ತೆರವುಗೊಳಿಸಿ ಸಹಕರಿಸಬೇಕು ಎಂದು ಶಾಸಕರು ಅಂಗಡಿ ಮಾಲೀಕರಿಗೆ ತಿಳಿಸಿದರು.

 ರಸ್ತೆ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಅಗಲೀಕರಣ ಮಾಡಲು ಅಗತ್ಯ ಇರುವ ಕಡೆ ಮರಗಳನ್ನು ತೆಗೆದು ಹೊಸ ಮರಗಳನ್ನು ಹಾಕಲಾಗುತ್ತದೆ. ನಗರದ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರು ಸ್ಪಂದಿಸಬೇಕು. ಉತ್ತಮ ರಸ್ತೆ ನಿರ್ಮಿಸಲು ಪಣ ತೊಟ್ಟಿದ್ದೇನೆ. ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕೆಲವು ಕಡೆಗಳಲ್ಲಿ ಕಾಂಪೌಂಡ್‌ ಮತ್ತು ಮೆಟ್ಟಿಲುಗಳನ್ನು ತೆರವುಗೊಳಿಸುವಂತೆ ಆಸ್ತಿ ಮಾಲೀಕರ ಬಳಿ ಚರ್ಚಿಸಿದ್ದೇನೆ. ಅವರು ಸಹ ರಸ್ತೆ ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡುವುದರ ಜೊತೆಯಲ್ಲಿ ಸುಂದರ ನಗರ ಮಾಡಿ ಎಂದು ಹೇಳಿದ್ದಾರೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಿ ಹೆಚ್ಚು ದಿನಗಳ ಕಾಲ ಬಿಡಬೇಡಿ. ಜನರಿಗೆ ತೊಂದರೆ ಆಗುತ್ತದೆ. ರಸ್ತೆ ನಿರ್ಮಾಣ ಕಾರ್ಯ ವೇಗವಾಗಿ ನಡೆಯಬೇಕು. ಗುತ್ತಿಗೆದಾರರಿಂದ ಉತ್ತಮ ಕೆಲಸ ಪಡೆಯುವ ಹೊಣೆಗಾರಿಕೆ ಇಲಾಖೆ ಇಂಜಿನಿಯರ್‌ಗಳ ಮೇಲಿದೆ ಎಂದು ಎಚ್ಚರಿಸಿದರು.

ತಹಶೀಲ್ದಾರ್‌ ಟಿ.ಸಿ. ಕಾಂತರಾಜ್‌, ನಗರಸಭೆ ಪೌರಾಯುಕ್ತ ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಸತೀಶ್‌ಬಾಬು, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೆ.ಜಿ. ಜಗದೀಶ್‌, ಹನುಮಂತಪ್ಪ, ಗುತ್ತಿಗೆದಾರ ಬಾಲರಾಮ ರೆಡ್ಡಿ ಮತ್ತಿತರರು ಇದ್ದರು. 

Advertisement

ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಂದಾಜು ಪಟ್ಟಿಯಲ್ಲಿ ಅನುಮೋದನೆ ಪಡೆದಿರುವ ರಸ್ತೆ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.
ಜಿ.ಎಚ್‌. ತಿಪ್ಪಾರೆಡ್ಡಿ. ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next