Advertisement

ಹದಗೆಟ್ಟ ತ್ರಾಸಿ ಜಂಕ್ಷನ್‌ ಸಂಪರ್ಕಿಸುವ ಮುಖ್ಯ ರಸ್ತೆ

10:02 AM Oct 18, 2022 | Team Udayavani |

ತ್ರಾಸಿ: ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಜಂಕ್ಷನ್‌ ಬಳಿಯಿಂದ ಗುಜ್ಜಾಡಿ, ಗಂಗೊಳ್ಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯ ಅಲ್ಲಲ್ಲಿ ಅನೇಕ ಹೊಂಡ- ಗುಂಡಿ ಬಿದ್ದಿದ್ದು, ವಾಹನ ಸಂಚಾರ ದುಸ್ತರಗೊಂಡಿದೆ. ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಅಭಿವೃದ್ಧಿಗೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ತ್ರಾಸಿ ಜಂಕ್ಷನ್‌ ಬಳಿಯಿಂದ ಕೊಡಪಾಡಿ, ನಾಯಕವಾಡಿ, ಗುಜ್ಜಾಡಿ, ಗಂಗೊಳ್ಳಿಗೆ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆಯ ಅಧೀನದ ರಸ್ತೆ ಇದಾಗಿದೆ. ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರ ಮುತುವರ್ಜಿಯಲ್ಲಿ ಗಂಗೊಳ್ಳಿಯಿಂದ ಕಾಂಕ್ರೀಟ್‌ ಕಾಮಗಾರಿ ನಡೆದಿದೆ. ಆದರೆ ಗುಜ್ಜಾಡಿಯಿಂದ ತ್ರಾಸಿವರೆಗಿನ ಸುಮಾರು 2-3 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದರಿಂದ ವಾಹನ ಸವಾರರು ಸಂಕಷ್ಟ ಪಡುವಂತಾಗಿದೆ. ಅದರಲ್ಲೂ ತ್ರಾಸಿ ಜಂಕ್ಷನ್‌ ಬಳಿ ದೊಡ್ಡ – ದೊಡ್ಡ ಹೊಂಡದಿಂದಾಗಿ ಸವಾರರು ಪ್ರಯಾಸ ಪಡುವಂತಾಗಿದೆ.

ವ್ಯಾಪಾರ-ವಹಿವಾಟಿಗೂ ಅಡ್ಡಿ

ಈ ರಸ್ತೆಯು ತ್ರಾಸಿಯಿಂದ ಗಂಗೊಳ್ಳಿಯ ಮೀನುಗಾರಿಕಾ ಬಂದರು, ಬೆಣ್ಗೆರೆ, ಕಂಚುಗೋಡಿನ ಮೀನುಗಾರಿಕಾ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಗಂಗೊಳ್ಳಿಯ ಬಂದರಿನಿಂದ ಬೇರೆ ಬೇರೆ ಕಡೆಗಳಿಗೆ ಮೀನು ಸಾಗಾಟ ಮಾಡಲಾಗುತ್ತದೆ. ಮೀನು ಸಾಗಾಟದ ಲಾರಿಗಳು, ಐಸ್‌ ಸಾಗಾಟದ ವಾಹನ, ಮೀನುಗಾರಿಕೆ ಸಲಕರಣೆ ಸಾಗಿಸುವ ವಾಹನಗಳು, ಪ್ರತಿದಿನ ಹತ್ತಾರು ಸರಕಾರಿ ಹಾಗೂ ಖಾಸಗಿ ಬಸ್‌ಗಳು, ಶಾಲಾ ವಾಹನಗಳು, ಕಾರು, ಆಟೋರಿûಾ ಸಹಿತ ಸಾವಿರಾರು ವಾಹನಗಳು ಪ್ರತಿನಿತ್ಯ ಇದೇ ಮಾರ್ಗವಾಗಿ ಸಂಚರಿಸುತ್ತವೆ. ಈ ಹೊಂಡ – ಗುಂಡಿಗಳ ರಸ್ತೆಯಿಂದಾಗಿ ಮೀನುಗಾರಿಕೆ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೂ ಅಡ್ಡಿಯಾಗುತ್ತಿದೆ.

ಚರಂಡಿಯೇ ಇಲ್ಲ

Advertisement

ಗಂಗೊಳ್ಳಿಯಿಂದ ತ್ರಾಸಿಯವರೆಗಿನ ಮುಖ್ಯ ರಸ್ತೆಯುದ್ದಕ್ಕೂ ಅನೇಕ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತೀ ವರ್ಷ ರಸ್ತೆಯಲ್ಲಿಯೇ ಮಳೆ ನೀರು ಹರಿದು ಹೋಗುತ್ತಿದೆ. ಇದರಿಂದ ವರ್ಷದಿಂದ ವರ್ಷಕ್ಕೆ ಈ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿ, ಅಲ್ಲಲ್ಲಿ ಹೊಂಡ, ಗುಂಡಿಗಳು ಬೀಳುತ್ತವೆ. ಪ್ರತೀ ವರ್ಷ ತೇಪೆ ಹಾಕುವ ಕಾರ್ಯ ಮಾಡುತ್ತಿದ್ದರೂ, ಮಳೆಗಾಲದಲ್ಲಿ ಆ ತೇಪೆ ಹಾಕಿದ ಡಾಮರೆಲ್ಲ ಕಿತ್ತು ಹೋಗುತ್ತಿದೆ. ರಸ್ತೆಯ ಅಭಿವೃದ್ಧಿಯೊಂದಿಗೆ ಇಕ್ಕೆಲಗಳಲ್ಲಿ ಚರಂಡಿಯನ್ನು ನಿರ್ಮಾಣ ಮಾಡಲಿ ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ತೇಪೆ ಹಾಕುವುದು ಮಾತ್ರ

ಪ್ರತೀ ಮಳೆಗಾಲ ಮುಗಿದಾಗಲೂ ಈ ರಸ್ತೆಗೆ ತೇಪೆ ಹಾಕುವುದು ಮಾತ್ರ. ನಾವು ಅನೇಕ ವರ್ಷಗಳಿಂದ ಈ ರಸ್ತೆಗೆ ಮರು ಡಾಮರು ಕಾಮಗಾರಿ ಅಥವಾ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಭಿವೃದ್ಧಿಗೆ ಅನುದಾನ ಮಂಜೂರಾಗುತ್ತದೆ ಎನ್ನುವ ಆಶ್ವಾಸನೆ ಕೇವಲ ಭರವಸೆಯಾಗಿಯೇ ಉಳಿದಿದೆ. ಈ ಬಾರಿಯಾದರೂ ಈ ರಸ್ತೆಯ ಅಭಿವೃದ್ಧಿಯಾಗಲಿ ಎನ್ನುವುದಾಗಿ ಈ ಭಾಗದ ನಾಗರಿಕರು ಆಗ್ರಹಿಸಿದ್ದಾರೆ.

ಅನುದಾನಕ್ಕೆ ಪ್ರಯತ್ನ: ಈಗಾಗಲೇ ಗಂಗೊಳ್ಳಿಯಿಂದ ಮುಖ್ಯ ರಸ್ತೆಯ ಕಾಂಕ್ರೀಟ್‌ ಕಾಮಗಾರಿ ಆಗಿದೆ. ಗುಜ್ಜಾಡಿಯಿಂದ ತ್ರಾಸಿಯವರೆಗಿನ ಮುಖ್ಯ ರಸ್ತೆಯ ಅಭಿವೃದ್ಧಿ ಬಗ್ಗೆ ಗಮನ ದಲ್ಲಿದ್ದು, ಈ ರಸ್ತೆಯ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಆದ್ಯತೆ ನೆಲೆಯಲ್ಲಿ ಅನುದಾನ ಬಿಡುಗಡೆಗೆ ಪ್ರಯತ್ನಿಸ ಲಾಗುವುದು.- ಬಿ.ಎಂ. ಸುಕುಮಾರ್‌ ಶೆಟ್ಟಿ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next