ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಹಿತವಾಗಿ ಮೂರು ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಮಾ.26 ಕೊನೆಯ ದಿನವಾಗಿದೆ. ದಕ್ಷಿಣ ಕರ್ನಾಟಕದ ಚುನಾವಣ ಕ್ಷೇತ್ರಗಳಿಗೆ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಬಹುತೇಕರು ಮಂಗಳವಾರವನ್ನು ಅಶುಭ ಎಂದು ಪರಿಗಣಿಸಿರುವುದರಿಂದ ಸೋಮವಾರವೇ ಸಲ್ಲಿಕೆ ಮಾಡಲಿದ್ದಾರೆ. ನಂಬಿಕೆ ಪ್ರಕಾರ ಸೋಮವಾರ ರಂಗಪಂಚಮಿಯಾಗಿರುವುದರಿಂದ ಅದು ಅತ್ಯಂತ ಶುಭ ದಿನ ಎಂದು ಪರಿಗಣಿಸಿರುವ ಕೆಲವು ಹುರಿಯಾಳುಗಳು ಅಂದೇ ಚುನಾವಣ ರಂಗಪ್ರವೇಶ ಮಾಡಲಿದ್ದಾರೆ.
ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ದಕ್ಷಿಣ ಕನ್ನಡ ಕ್ಷೇತ್ರದಿಂದ ನಳಿನ್ ಕುಮಾರ್ ಕಟೀಲು, ಹಾಸನದಿಂದ ಎ.ಮಂಜು, ಚಿತ್ರದುರ್ಗ ಕ್ಷೇತ್ರದಿಂದ ಎ.ನಾರಾಯಣಸ್ವಾಮಿ, ಮೈಸೂರು-ಕೊಡಗು ಕ್ಷೇತ್ರದಿಂದ ಪ್ರತಾಪ್ ಸಿಂಹ, ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿ.ಎನ್.ಬಚ್ಚೇಗೌಡ, ಕೋಲಾರದಿಂದ ಎಸ್.ಮುನಿಸ್ವಾಮಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.
ತುಮಕೂರು ಕ್ಷೇತ್ರದಿಂದ ಜೆಡಿಎಸ್‌ಅಭ್ಯರ್ಥಿಯಾಗಿ ಎಚ್.ಡಿ. ದೇವೇಗೌಡ ನಾಮಪತ್ರ ಸಲ್ಲಿಸಲಿದ್ದರೆ, ಆ ಕ್ಷೇತ್ರದಿಂದ ಹಾಲಿ ಸಂಸದ ಮುದ್ದಹನುಮೇಗೌಡ ಅವರೂ ನಾಮಪತ್ರ ಸಲ್ಲಿಸಲಿದ್ದಾರೆ. ಮಂಡ್ಯ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ಕೂಡ ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸಲಿದ್ದಾರೆ.