ಮುಂಬಯಿ: ಹಾಸ್ಯನಟ ಸುನೀಲ್ ಪಾಲ್ (Sunil Pal) ಮತ್ತು ನಟ ಮುಷ್ತಾಕ್ ಖಾನ್ ( Mushtaq Khan) ಅವರ ಅಪಹರಣ ಪ್ರಕರಣದ ( Kidnapping Case) ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಎನ್ಕೌಂಟರ್ ನಂತರ ಭಾನುವಾರ (ಡಿ.22 ರಂದು) ಬಂಧಿಸಿದ್ದಾರೆ.
ಲವಿ ಪಾಲ್ ಬಂಧಿತ ಆರೋಪಿ.
ಲವಿ ಪಾಲ್ ಮತ್ತು ಅವರ ಸಹಚರರು ಭಾನುವಾರ ರಾತ್ರಿ ಬಿಜ್ನೋರ್ನ ಮಂದಾವರ್ ಪ್ರದೇಶದ ಮೂಲಕ ತೆರಳುತ್ತಿದ್ದರು. ಈ ಬಗ್ಗೆ ಪೊಲೀಸರಿಗೆ ಸುಳಿವು ಸಿಕಿದ್ದು, ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದ್ದಾರೆ. ಆರೋಪಿಯ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಲು ಮುಂದಾಗಿದ್ದಾರೆ. ಪ್ರತಿಯಾಗಿ ಪೊಲೀಸರು ಲವಿ ಬಲ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದಾರೆ.
ಆರೋಪಿ ಲವಿಯನ್ನು ಮೊದಲು ಬಂಧಿಸಲಾಗಿದೆ. ಆದರೆ ಆತನ ಸಹಚರರು ಗುಂಡು ಹಾರಿಸಿದಾಗ ಲವಿ ಪರಾರಿ ಆಗಲು ಯತ್ನಿಸಿದ್ದು, ಈ ಕಾರಣದಿಂದ ಆತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ನಾವು ಲವಿ ಪಾಲ್ 35,000 ರೂಪಾಯಿಗಳ ಜೊತೆಗೆ ದೇಶಿಯ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದೇವೆ. ಮೀರತ್ ಮತ್ತು ಬಿಜ್ನೋರ್ ಪೊಲೀಸರು ಈಗಾಗಲೇ ಈ ಗ್ಯಾಂಗ್ ನ 6 ಸದಸ್ಯರನ್ನು ಬಂಧಿಸಿದ್ದಾರೆ. ಬಂಧಿತ ಗ್ಯಾಂಗ್ ಸದಸ್ಯರಿಂದ ಇದುವರೆಗೆ 4 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಬಾಜಪೈ ಹೇಳಿದ್ದಾರೆ.
ಪಾಲ್ ಅವರನ್ನು ಪ್ರಸ್ತುತ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಬಿಜ್ನೋರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಮೇಲೆ ದರೋಡೆಕೋರ ಕಾಯಿದೆಯಡಿ, ಅಪಹರಣ ಮತ್ತು ಸುಲಿಗೆಗಾಗಿ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಏನಿದು ಪ್ರಕರಣ?: ಹಾಸ್ಯನಟ ಸುನಿಲ್ ಪಾಲ್ ಅವರನ್ನು ಡಿಸೆಂಬರ್ 2 ರಂದು ದೆಹಲಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಬಳಿಕ ಕೆಲವರು ಅವರನ್ನು ಕಾರಿನಲ್ಲಿ ಬಂದು ಅಪಹರಿಸಿದ್ದರು. ಕಿಡ್ನಾಪ್ ಮಾಡಿದ ಬಳಿಕ ಅವರಿಂದ 7.5 ಲಕ್ಷ ರೂಪಾಯಿಯನ್ನು ಸುಲಿಗೆ ಮಾಡಲಾಗಿತ್ತು. ಆ ನಂತರ ಅವರನ್ನು ಬಿಡುಗಡೆ ಮಾಡಿದ್ದರು.
ಅವಾರ್ಡ್ ಕಾರ್ಯಕ್ರವವಿದೆ ಎಂದು ನಟ ಮುಸ್ತಾಕ್ ಅವರಿಗೆ ನವೆಂಬರ್ 20ಕ್ಕೆ ಕರೆಯೊಂದು ಬಂದಿತ್ತು. ಸಂಘಟಕರು ಮುಂಗಡ ಹಣವನ್ನು ಅವರ ಖಾತೆಗೆ ವರ್ಗಾಯಿಸಿ, ವಿಮಾನ ಟಿಕೆಟ್ಗಳನ್ನು ಸಹ ನೀಡಿದ್ದರು. ಅವರು ದೆಹಲಿ ತಲುಪಿದಾಗ ಅವರನ್ನು ಕಾರಿನೊಳಗೆ ಕೂರಲು ಹೇಳಲಾಗಿತ್ತು. ಆ ಬಳಿಕ ಅವರನ್ನು ದೆಹಲಿಯ ಬಿಜ್ನೋರ್ ಬಳಿ ಕರೆದುಕೊಂಡು ಹೋಗಿ 12 ಗಂಟೆಗಳ ಕಾಲ ಹಿಂಸೆ ನೀಡಿದ್ದರು.
ನಟ ಮತ್ತು ಅವರ ಮಗನ ಖಾತೆಯಿಂದ 2 ಲಕ್ಷಕ್ಕೂ ಹೆಚ್ಚಿನ ಹಣವನ್ನು ಸುಲಿಗೆ ಮಾಡಿದ್ದರು. ಅಪಹರಣಕಾರರ ಕಣ್ತಪ್ಪಿಸಿ ನಿಗೂಢ ಸ್ಥಳದಿಂದ ಓಡಿಹೋಗಿ ಮಸೀದಿ ತಲುಪಿ ಅಲ್ಲಿನ ಸ್ಥಳೀಯರ ಸಹಾಯ ಪಡೆದು ಪೊಲೀಸ್ ಠಾಣೆಗೆ ತಲುಪಿದ್ದರು.