Advertisement

ನಿಧಾನ ಗತಿಯಲ್ಲಿ ಮಹಿಷವಾಡಗಿ ಸೇತುವೆ ಕಾರ್ಯ: ಶಾಸಕ ಸಿದ್ದು ಸವದಿ, ಜನರ ಆಕ್ರೋಶ

07:15 PM Jun 25, 2023 | Team Udayavani |

ರಬಕವಿ ಬನಹಟ್ಟಿ: ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳ ಮಹತ್ವದ ಸಂಪರ್ಕ ಸೇತುವೆಯಾಗಿರುವ ರಬಕವಿ ಬನಹಟ್ಟಿ ಸಮೀಪದ ಮಹಿಷವಾಡಗಿ ಸೇತುವೆ ಕಾಮಗಾರಿ ಅತ್ಯಂತ ನಿಧಾನ ಗತಿಯಲ್ಲಿ ಸಾಗಿರುವುದಕ್ಕೆ ಶಾಸಕ ಸಿದ್ದು ಸವದಿ ಮತ್ತು ರಬಕವಿಯ ಜನರು ಸಂಬಂಧಪಟ್ಟ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

Advertisement

2018ರಲ್ಲಿ ಅಂದಿನ ಸಚಿವೆಯಾಗಿದ್ದ ಉಮಾಶ್ರೀ ರೂ. 30 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಆರಂಭಿಸಿ ನಾಗಾರ್ಜುನ ಕನಸ್ಟ್ರಕ್ಷನ್ ಕಂಪನಿಗೆ ಟೆಂಡರ್ ನೀಡಿತ್ತು. ಕಂಪನಿಯು ಕೇವಲ ಆರು ವರ್ಷಗಳಲ್ಲಿ ಶೇ. 25 ರಷ್ಟು ಮಾತ್ರ ಕಾಮಗಾರಿ ನಡೆಯಿತು.

ನಂತರ 2021ರಲ್ಲಿ ಶಾಸಕ ಸಿದ್ದು ಸವದಿ ಟೆಂಡರ್‌ನಲ್ಲಿ ಬದಲಾವಣೆ ಮಾಡುವುದರ ಮೂಲಕ ರೂ. 5೦ ಕೋಟಿ ವೆಚ್ಚದಲ್ಲಿ ಸೇತುವೆ ಕಾಮಗಾರಿಗೆ ಸರ್ಕಾರದಿಂದ ಅನುಮೋದನೆ ಪಡೆದುಕೊಂಡರು. ಆದರೂ ಕಾಮಗಾರಿ ವಿಳಂಬವಾಗಿ ಸಾಗುತ್ತಿದೆ.

ಕಾಮಗಾರಿಯ ವಿಳಂಬವನ್ನು ಖಂಡಿಸಿ ಶಾಸಕ ಸಿದ್ದು ಸವದಿ ಮತ್ತು ರಬಕವಿ ನಗರದ ನೂರಾರು ಜನರು ಭಾನುವಾರ ಕೃಷ್ಣಾ ನದಿಗೆ ತೆರಳಿ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಗುತ್ತಿಗೆದಾರರಿಂದ ಕಾಮಗಾರಿ ವಿಳಂಬ: ಶಾಸಕ ಸಿದ್ದು ಸವದಿ ಮಾತನಾಡಿ, ಆರೇಳು ವರ್ಷಗಳಿಂದ ಕಾಮಗಾರಿ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಹಲವಾರು ಬಾರಿ ಒತ್ತಡವನ್ನು ಕೂಡಾ ಹಾಕಲಾಗಿದೆ. ಎಲ್ಲವನ್ನು ಸರಿದೂಗಿಸಿಕೊಂಡು ಕಾಮಗಾರಿಯನ್ನು ತೀವ್ರಗೊಳಿಸಬೇಕಾಗಿದೆ. ಗುತ್ತಿಗೆದಾರರಿಂದ ಕಾಮಗಾರಿ ವಿಳಂಬವಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ನೀಡಿ ಮಹಿಷವಾಡಗಿ ಸೇತುವೆ ಕಾಮಗಾರಿಗೆ ವೇಗವನ್ನು ನೀಡಬೇಕಾಗಿದೆ ಎಂದರು.

Advertisement

ಈ ಸಂದರ್ಭದಲ್ಲಿ ಗುತ್ತಿಗೆದಾರರೊಂದಿಗೆ ಶಾಸಕ ಸಿದ್ದು ಸವದಿ ಮಾತನಾಡಿದರೂ ಗುತ್ತಿಗೆದಾರರು ಸಮರ್ಪಕವಾಗಿ ಉತ್ತರ ನೀಡದೆ ಕೆಲಸ ಮಾಡುವುದಾಗಿ ತಿಳಿಸಿದರು. ಸೇರಿದ್ದ ಜನರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಮಾರ್ಗವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡಾ.ರವಿ ಜಮಖಂಡಿ, ಸಂಜಯ ತೆಗ್ಗಿ, ಶ್ರೀಶೈಲ ದಲಾಲ, ಗಣಪತಿರಾವ ಹಜಾರೆ, ಮಹಾದೇವ ಧೂಪದಾಳ, ಸಂಜಯ ತೇಲಿ, ಮಲ್ಲಿಕಾರ್ಜುನ ಜತ್ತಿ, ಮುರುಗೇಶ ಮುತ್ತೂರ, ಪ್ರವೀಣ ಹಜಾರೆ, ಬಿ.ಡಿ.ನೇಮಗೌಡ, ಬಸವರಾಜ ತೆಗ್ಗಿ, ರವಿ ಗಡಾದ, ವೀರಣ್ಣ ಹೊಸಮನಿ, ಪ್ರಭು ಪೂಜಾರಿ, ಮಹಾದೇವ ಆಲಕನೂರ, ಯಲ್ಲಪ್ಪ ಕಟಗಿ, ಈಶ್ವರ ನಾಗರಾಳ ಸೇರಿದಂತೆ ಅನೇಕರು ಇದ್ದರು.

ಕೃಷ್ಣಾ ನದಿಯೂ ಸಂಪೂರ್ಣವಾಗಿ ಬತ್ತಿದ್ದು, ನದಿಯಲ್ಲಿ ಅಳವಡಿಸಬೇಕಾದ ಪಿಲ್ಲರಗಳ ಕಾಮಗಾರಿಯನ್ನು ಆದಷ್ಟು ಬೇಗನೆ ಮುಕ್ತಾಯಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ತಿಳಿಸಲಾಗಿದೆ.
 -ಸಿದ್ದು ಸವದಿ ಶಾಸಕು ತೇರದಾಳ ಮತಕ್ಷೇತ್ರ

ಗುತ್ತಿಗೆದಾರರ ಹತ್ತಿರ ಸೇತುವೆ ನಿರ್ಮಾಣಕ್ಕೆ ಸಂಬಅಧಪಟ್ಟ ಯಾವುದೇ ಯಂತ್ರೋಪಕರಣಗಳು, ಸಾಕಷ್ಟು ಪ್ರಮಾಣದಲ್ಲಿ ಕೂಲಿ ಕಾರ್ಮಿಕರು ಮತ್ತು ವಸ್ತುಗಳು ಇಲ್ಲ. ಶೀಘ್ರ ಕಾಮಗಾರಿಗೆ ನಾವು ಸಂಪೂರ್ಣವಾಗಿ ಸ್ಪಂದಿಸಲು ಸಿದ್ಧರಿದ್ದೇವೆ.
 -ಸತೀಶ್ ಹಜಾರೆ, ಗಣ್ಯ ವ್ಯಾಪಾರಸ್ಥರು ರಬಕವಿ

Advertisement

Udayavani is now on Telegram. Click here to join our channel and stay updated with the latest news.

Next