ರಬಕವಿ-ಬನಹಟ್ಟಿ: ಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ನೀರಿನಿಂದಾಗಿ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಸದ್ಯ ನೀರು ಇಳಿಮುಖವಾದ ಹಿನ್ನಲೆಯಲ್ಲಿ ಅದು ಪುನರ್ ಪ್ರಾರಂಭವಾಗಿದ್ದು, ರಬಕವಿ-ಬನಹಟ್ಟಿ ಜನತೆಯಲ್ಲಿ ಮಂದಹಾಸ ಮೂಡುವಂತಾಗಿದೆ.
2018 ರಲ್ಲಿ ಅಂದಿನ ಸಚಿವೆ ಉಮಾಶ್ರೀಯವರು 30 ಕೋಟಿ ರೂ.ಗಳಷ್ಟು ಟೆಂಡರ್ ಕಾಮಗಾರಿ ಮೂಲಕ ನಾಗಾರ್ಜುನ ಕನಸ್ಟ್ರಕ್ಷನ್ಸ್ ಕಂಪನಿಗೆ ನೀಡಿತ್ತು. ಕಳೆದ ಐದು ವರ್ಷಗಳಲ್ಲಿ ಕೇವಲ ಶೇ.25 ರಷ್ಟು ಮಾತ್ರ ಕಾಮಗಾರಿ ನಡೆದಿತ್ತು.
ಇದಕ್ಕೆ ಪೂರಕವಾಗಿ 2021 ರಲ್ಲಿ ಕಾಮಗಾರಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಹಾಲಿ ಶಾಸಕ ಸಿದ್ದು ಸವದಿ ಈ ಟೆಂಡರ್ ಕಾಮಗಾರಿಯನ್ನು 50 ಕೋಟಿ ರೂ.ಗಳವರೆಗೆ ಹೆಚ್ಚಳಗೊಳಿಸುವ ಮೂಲಕ ಕಾಮಗಾರಿ ಮತ್ತಷ್ಟು ಒಳ್ಳೆಯ ಹಾಗು ವಿಸ್ತರಣೆಯಾಗಲೆಂದು ಸರ್ಕಾರದಿಂದ ಅನುಮೋದನೆ ಮಾಡಿದ್ದರು.
ಸಹ ಗುತ್ತಿಗೆಯನ್ನು ಪಡೆದಿರುವ ತೇಜಸ್ ಕನಸ್ಟ್ರಕ್ಷನ್ಸ್ ಕಂಪನಿಯು ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ಅಲ್ಲಿಂದ ಕಾಮಗಾರಿಗೆ ಸಂಬಂಧಿಸಿದ ಯಂತ್ರಗಳೆಲ್ಲವನ್ನೂ ಸ್ಥಳಾಂತರಗೊಳಿಸಿ ಕಾಲ್ಕಿತ್ತಿದ್ದರು. ಇದೀಗ ಮತ್ತೇ ಸೋಮವಾರದಿಂದ ಕಾಮಗಾರಿ ಪ್ರಾರಂಭಗೊಂಡಿದೆ.
ಪರಿಹಾರವಿಲ್ಲ: ಸೇತುವೆ ನಿರ್ಮಾಣಕ್ಕಾಗಿ ಸುಮಾರು ನಾಲ್ಕೈದು ಎಕರೆಯಷ್ಟು ಭೂಮಿಯನ್ನು ವಶಪಡಿಸಿಕೊಂಡಿರುವ ಸರ್ಕಾರದಿಂದ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಈ ಕುರಿತು ಕೃಷಿ ಭೂ ಮಾಲಿಕರು ಸೇತುವೆ ನಿರ್ಮಾಣಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಅಥವಾ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡು, ಶೀಘ್ರವೇ ಪರಿಹಾರ ಒದಗಿಸಬೇಕಿದೆ.
ಟೆಂಡರ್ ಕಾರ್ಯದಲ್ಲಿ ವೈಫಲ್ಯ: ಟೆಂಡರ್ ಸಮಯದಲ್ಲಿ ಸೇತುವೆ ನಿರ್ಮಾಣಕ್ಕಾಗಿ ಕೃಷ್ಣಾ ನದಿಯಲ್ಲಿನ ನೀರು ಇಲ್ಲದಂತೆ ನಿರ್ಮಿಸಿಕೊಂಡು ಸೇತುವೆಗಳ ಪಿಲ್ಲರ್‌ಗಳನ್ನು ಅಳವಡಿಸುವಂತೆ ಆಗಿದೆ. ಆದರೆ ಸಮೀಪವೇ ಹಿಪ್ಪರಗಿ ಜಲಾಶಯವಿರುವ ಕಾರಣ ವರ್ಷಪೂರ್ತಿ ನೀರು ನದಿಯಲ್ಲಿರುತ್ತದೆ. ನದಿಯಲ್ಲಿ ಸೇತುವೆ ನಿರ್ಮಾಣದ ವೆಚ್ಚದ ವ್ಯವಸ್ಥೆ ಬದಲಿಸಬೇಕಾಗಿದೆ ಎಂಬುದು ಗುತ್ತಿಗೆದಾರನ ಮಾತು.
`ಪುನರ್ ಕಾಮಗಾರಿ ಪ್ರಾರಂಭಗೊಂಡಿದ್ದು ಸ್ವಾಗತ. ಬೇಸಿಗೆ ದಿನಗಳಲ್ಲಿ ನದಿಗಳಲ್ಲಿನ ಸೇತುವೆಯ ಎಲ್ಲ ಕಾರ್ಯ ಮುಕ್ತಾಯಗೊಳ್ಳಬೇಕು. ಇದಕ್ಕೆ ನಾಗರಿಕರಿಂದ ಸಕಲ ರೀತಿಯ ಸಹಕಾರವಿದೆ.’
– ಡಾ. ರವಿ ಜಮಖಂಡಿ, ಅಧ್ಯಕ್ಷ, ಹೋರಾಟ ಸಮಿತಿ, ರಬಕವಿ-ಬನಹಟ್ಟಿ.
`ಸುಮಾರು 8 ವರ್ಷಗಳಿಂದ ವಿಳಂಬ ಕಾರ್ಯ ಇದಾಗಿದೆ. ಶೀಘ್ರವೇ ಸೇತುವೆ ನಿರ್ಮಿಸಿ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಗಡಿ ಜನತೆಗೆ ಅನುಕೂಲ ಕಲ್ಪಿಸಬೇಕು’.
– ಪ್ರವೀಣ ಹಜಾರೆ, ಉದ್ಯಮಿ, ರಬಕವಿ.