Advertisement

ಕಂಬಕ್ಕೆ ತಲೆ ಬಡಿದುಕೊಂಡ ಮಹಿಷಾಸುರ! ಅದುರಿದ ರಂಗಸ್ಥಳ

11:21 PM Feb 23, 2021 | Team Udayavani |

ಕುಂದಾಪುರ: ಚಿತ್ತೂರಿನಲ್ಲಿ ಸೋಮವಾರ ರಾತ್ರಿ ನಡೆದ ಶ್ರೀ ದೇವೀ ಮಹಾತ್ಮೆ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡಿದ್ದು, ಕಂಬ ಅದುರಿದ ಕಾರಣ ಸ್ವಲ್ಪ ಕಾಲ ಆತಂಕದ ಸ್ಥಿತಿ ಉಂಟಾಯಿತು.

Advertisement

ಪೆರ್ಡೂರು ಮೇಳದ ಪ್ರದರ್ಶನಕ್ಕೆ ಮಾರಣಕಟ್ಟೆ ಮೇಳದ ಯುವ ಕಲಾವಿದ ನಂದೀಶ್‌ ಮೊಗವೀರ ಜನ್ನಾಡಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಅವರ ಮಹಿಷಾಸುರ ವೇಷ ಅಬ್ಬರದ ಪ್ರವೇಶಕ್ಕೆ ಮಾತ್ರವಲ್ಲದೆ, ರಂಗಸ್ಥಳದ ಕಂಬಕ್ಕೆ ತಲೆ ಹೊಡೆದುಕೊಳ್ಳುವ ದೃಶ್ಯಕ್ಕಾಗಿಯೂ ಪ್ರಸಿದ್ಧ.

ಅಲುಗಿದ ರಂಗಸ್ಥಳ
ಚಿತ್ತೂರಿನಲ್ಲಿ ನಡೆದ ಪ್ರದರ್ಶನ ಸಂದರ್ಭವೂ ದೇವಿಯ ಜತೆಗಿನ ಹೋರಾಟದ ಸನ್ನಿವೇಶದಲ್ಲಿ ಕಂಬಕ್ಕೆ ತಲೆ ಬಡಿದುಕೊಂಡರು. ರಂಗಸ್ಥಳದ ಒಂದು ಕಂಬಕ್ಕೆ ಅಳವಡಿಸಿದ್ದ ಹೂವಿನ ಅಲಂಕಾರ ಚೆಲ್ಲಾಪಿಲ್ಲಿಯಾಯಿತು. ಇನ್ನೊಂದು ಕಂಬಕ್ಕೆ ಬಡಿದಾಗ ಅದು ಅಲುಗಾಡತೊಡಗಿತು. ಇದನ್ನು ಗಮನಿಸಿದ ಭಾಗವತರು ರಂಗಸ್ಥಳ ಸಹಾಯಕರಿಗೆ ಸೂಚನೆ ನೀಡಿ ಸರಿಪಡಿಸುವಂತೆ ಹೇಳಿದರು.

ವೈರಲ್‌
ಈ ಮಹಿಷಾಸುರನ ಅಬ್ಬರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೆಚ್ಚುಗೆಯ ಜತೆಗೇ ಕಲಾವಿದನ ಕುರಿತು ಕಾಳಜಿಯ ಮಾತುಗಳೂ ಕೇಳಿ ಬಂದಿವೆ. ಜೀವಕ್ಕೆ ಅಪಾಯ ಆಗುವಂತಹ ಪ್ರದರ್ಶನ ನೀಡಬಾರದು, ದೈಹಿಕ ಆಘಾತವಾಗದಂತೆ ಅಭಿನಯ ನೀಡಬೇಕು ಎಂದಿದ್ದಾರೆ. ಇಂತಹ ಪ್ರದರ್ಶನಗಳು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದೇ ಕಲಾವಿದರ ಕುರಿತು ಪ್ರೀತಿಯಿಂದ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ.

Advertisement

ಅಪಾಯ ತರವಲ್ಲ
ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು, ಕಲಾವಿದರು ದೈಹಿಕ ಶ್ರಮ ಹಾಕಿ ಪ್ರದರ್ಶನ ನೀಡುವಾಗ ಅಪಾಯ ಮೈಮೇಲೆ ಎಳೆದು ಕೊಳ್ಳ ಬಾರದು ಎಂದಿದ್ದಾರೆ. “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಕಲಾವಿದರ ಜತೆಗೂ ಈ ಕುರಿತು ಮಾತನಾಡಿದ್ದೇನೆ.

ನಿಜವಾಗಿ ಕಂಬಕ್ಕೆ ತಲೆ ಹೊಡೆದು ಕೊಳ್ಳುವ ಬದಲು ಆ ರೀತಿಯ ಅಭಿನಯ ಮಾತ್ರ ಮಾಡುವ ಮೂಲಕ ಕಲಾವಿದ ಜೀವಾಪಾಯ ತಂದುಕೊಳ್ಳದೆ ಪ್ರದರ್ಶನ ನೀಡಬೇಕು ಎಂದಿದ್ದಾರೆ.

ಅಪಾಯ ಇದೆ
ನಿರಂತರವಾಗಿ ಕಂಬಕ್ಕೆ ತಲೆ ಹೊಡೆದುಕೊಳ್ಳುವುದರಿಂದ ಮೆದುಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ ಪ್ರತಿಕ್ರಿಯಿಸಿದ್ದಾರೆ.

ಜಾಗರೂಕತೆ ಅಗತ್ಯ
ಅಪಾಯವಾಗದ ರೀತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇನೆ. ಅನೇಕ ಹಿತೈಷಿಗಳು ಹಿತವಚನ ಹೇಳಿದ್ದು, ಕಲಾಭಿಮಾನಿಗಳಿಗೆ ನಿರಾಸೆಯಾಗದಂತೆ, ವೈಯಕ್ತಿಕವಾಗಿ ತೊಂದರೆ ಮಾಡಿಕೊಳ್ಳದೇ ಪ್ರದರ್ಶನ ನೀಡುವ ಕುರಿತು ಗಮನ ಹರಿಸುತ್ತೇನೆ.
-ನಂದೀಶ್‌ ಜನ್ನಾಡಿ, ಕಲಾವಿದ

Advertisement

Udayavani is now on Telegram. Click here to join our channel and stay updated with the latest news.

Next