Advertisement

ಅಬ್ಬರಿಸಿದ ಅಂಧಕಾಸುರ

12:30 AM Mar 08, 2019 | |

ಉಡುಪಿ ಬೈಲೂರಿನ ಮಹಿಷ ಮರ್ದಿನಿ ಯಕ್ಷಗಾನ ಮಂಡಳಿ (ರಿ.) ಇದರ 35ನೇ ವಾರ್ಷಿಕೋತ್ಸವವು “ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಇತ್ತೀಚೆಗೆ ಜರಗಿತು. ಯಕ್ಷಗಾನವನ್ನು ಹವ್ಯಾಸಿ ಕಲಾವಿದರು, ವೃತ್ತಿಪರ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿ ತೋರಿಸಬಲ್ಲರು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಯಾವುದೇ ರೀತಿಯ ಅತಿರೇಖದ ಅಶ್ಲೀಲದ ಸಂಭಾಷಣೆಗಳಿಲ್ಲದೆ, ಶುದ್ಧವಾದ ಮಾತುಗಳಿಂದ, ನಾಟ್ಯಾಭಿನಯಗಳಿಂದ ಯಕ್ಷಗಾನವನ್ನು ಆಸ್ವಾದಿಸುವಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸಿ, ಸಹೃದಯ ಪ್ರೇಕ್ಷಕರು ಕಾರ್ಯಕ್ರಮವನ್ನು ಸಂತೋಷದಿಂದ ವೀಕ್ಷಿಸುವಂತೆ ನಡೆಸಿಕೊಟ್ಟರು. 

Advertisement

ಹೆಚ್ಚು ಪ್ರಚಾರವನ್ನು ಬಯಸದ ಶುದ್ಧ ಯಕ್ಷಗಾನ ಶೈಲಿಯ ಭಾಗವತರೆನಿಸಿರುವ ದೇವಿಪ್ರಕಾಶ್‌ ಕಟೀಲು ಇವರ ಭಾಗವತಿಕೆಯು ಯಕ್ಷಗಾನ ಯಶಸ್ವಿಯಾಗುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಅವರಿಗೆ ಜೊತೆಯಾಗಿ ಚಂಡೆಯಲ್ಲಿ ಗುರುಗಳಾದ ಮುರಳೀಧರ್‌ ಭಟ್‌ ಕಟೀಲು, ಗಣೇಶ್‌ ಭಟ್‌ ಹಾಗೂ ಮದ್ದಲೆಯಲ್ಲಿ ಅವಿನಾಶ್‌ ಚಣಿಲರ ಸಹಕಾರ ಉತ್ತಮವಾಗಿತ್ತು. ದೇವೇಂದ್ರನಾಗಿ (ರಾಘವೇಂದ್ರ ಆಚಾರ್ಯ) ವಿದ್ವತ್‌ಪೂರ್ಣ ಮಾತುಗಳಿಂದ ತನ್ನ ಪ್ರತಿಭೆಯನ್ನು ತೋರಿಸಿದರು. ಅಗ್ನಿ (ಆದಿತ್ಯ ಜೆ.ಬಿ.) ವಾಯು (ಕಿರಣ್‌), ವರುಣ (ವಾದಿರಾಜ) ಇವರ ಪಾತ್ರ ಪೂರಕವಾಗಿತ್ತು. 

ಬಿರುಸಿನ ಗತ್ತುಗಾರಿಕೆಯ ನಡೆಯಿಂದ ರಂಗಸ್ಥಳವನ್ನು ಪ್ರವೇಶಿಸಿ ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ಸಭಿಕರ ಮನದಲ್ಲಿ ಅಚ್ಚಳಿಯದೆ ನಿಲ್ಲುವಂತೆ ಮಾಡಿದ ರಮಣ ಆಚಾರ್ಯ ಅಂಧಕಾಸುರನಾಗಿ ತನ್ನ ನೈಪುಣ್ಯವನ್ನು ಕಾರ್ಯಕ್ರಮದ ಮುಕ್ತಾಯದ ವರೆಗೆ ಪರಿಣಾಮಕಾರಿಯಾಗಿ ಅಭಿನಯಿಸಿ ತೋರಿಸಿದರು. ಮಂತ್ರಿಯಾಗಿ ಮುರಳಿ, ಸೇನಾಧಿಪತಿಯಾಗಿ ಆಕಾಂಕ್‌ ಜೆ.ಬಿ. ಹಾಗೂ ದಂಡನಾಯಕನಾಗಿ ಪ್ರಜ್ವಲ್‌ ಇವರ ಉತ್ತಮ ರೀತಿಯ ನಾಟ್ಯ ಹಾಗೂ ಮುಖವರ್ಣಿಕೆ ದೀರ್ಘ‌ಕಾಲ ನೆನಪಿನಲ್ಲಿ ಉಳಿಯುವಂತಹದ್ದು. ಇತಿಮಿತಿಯ ಹಾಸ್ಯದೊಂದಿಗೆ ಗುರುಪ್ರಸಾದ್‌, ಸ್ತ್ರೀ ವೇಷದಲ್ಲಿ ಶಚಿಯಾಗಿ ಪ್ರಜ್ವಲ್‌ ಪರ್ಕಳ ನಾರದರಾಗಿ ವಿ| ರಾಮಕೃಷ್ಣ ಕೊಡಂಚ ವಿಷ್ಣುವಾಗಿ ಶ್ರೀಶ ಆಚಾರ್ಯ ಮಟ್ಟು, ಈಶ್ವರನಾಗಿ ಶ್ರೀಪತಿ ಅಲೆವೂರು ಪಾತ್ರಗಳಿಗೆ ನ್ಯಾಯ ಒದಗಿಸಿದರು. 

ಭಾರತಿ ಜಯಕರ್‌ 

Advertisement

Udayavani is now on Telegram. Click here to join our channel and stay updated with the latest news.

Next