Advertisement
ಇಂಥ ಹೋಟೆಲ್‌ನಲ್ಲಿ ಮಸಾಲೆ ದೋಸೆ ಚೆಂದ, ಈ ಹೋಟೆಲ್ ಇಡ್ಲಿ ಸಾಂಬಾರ್‌ಗೆ ಫೇಮಸ್ಸು, ಈ ಹೋಟೆಲ್‌ನಲ್ಲಿ ಊಟ ಚೆನ್ನಾಗಿರುತ್ತದೆ ಅಂತ ಗ್ರಾಹಕರು ಹೇಳ್ಳೋದನ್ನ ಕೇಳಿದ್ದೀವಿ. ಆದರೆ ಈ ಇಲ್ಲಿ ಏನೇ ತಿಂದರು ಸಖತ್ತಾಗಿರುತ್ತೆ ಅನ್ನೋ ಹೋಟೆಲ್‌ಗಳು ಅಪರೂಪ. ಅಂಥದ್ದೊಂದು ಹೋಟೆಲ್ ಮೈಸೂರಿನ ಚಾಮರಾಜಪುರಂನ ಬಲ್ಲಾಳ್ ಸರ್ಕಲ್ ನಲ್ಲಿ ಇದೆ. ಹೆಸರು-ಮಹೇಶ್ ಪ್ರಸಾದ್ .
ಇಲ್ಲಿ ಬೆಳಗಿನ ಉಪಾಹಾರಕ್ಕೆ ಮಾಡುವ ಕೇಸರಿ ಬಾತು ರುಚಿಯೋ ರುಚಿ. ಅದನ್ನೊಮ್ಮೆ ತಿಂದವರು, ಎಲ್ಲಾದರು ಇರಿ. ನೆನೆಸಿಕೊಂಡರೆ ಬಾಯಲ್ಲಿ ನೀರೂರುವುದು ಗ್ಯಾರಂಟಿ! ಶುದ್ಧ ನಂದಿನಿ ತುಪ್ಪದಲ್ಲಿ ಮಾಡಿದ ಕೇಸರಿ ಬಣ್ಣದ ಬಾತನ್ನು ಬಾಯಲ್ಲಿಟ್ಟರೆ, ಅದನ್ನು ಅಗಿಯುವ ಪ್ರಮೇಯವೇ ಬರುವುದಿಲ್ಲ. ನಾಲಿಗೆಯಲ್ಲಿ ಕರಗಿ ನೀರಾಗಿ ಗಂಟಲಲ್ಲಿ ಇಳಿಯುತ್ತದೆ. ಮಧ್ಯೆ, ಮಧ್ಯೆ ಸಿಗುವ ಗೋಡಂಬಿ, ದ್ರಾಕ್ಷಿಯ ಸವಿಯನ್ನು ದುಪ್ಪಟ್ಟು ಮಾಡುತ್ತವೆ. ಸೆಟ್ ಮಸಾಲೆಯನ್ನು ಮುರಿದು, ಆಲೂಗೆಡ್ಡೆ ಪಲ್ಯ, ಕಾಯಿ ಚಟ್ನಿಯನ್ನು ಅದರೊಳಗೆ ಸೇರಿಸಿ ಬಾಯಲ್ಲಿಟ್ಟರೆ ಆಹಾ! ಇನ್ನು ಇಡ್ಲಿ-ವಡೆ ಸಾಂಬಾರಿನ ಟೇಸ್ಟಿನದೇ ಇನ್ನೊಂದು ವರಸೆ. ಅದಲ್ಲದೇ, ಕೇವಲ ವಡೆ , ಉದ್ದಿನಬೋಂಡ ಸಾಂಬಾರ್ ತಿನ್ನಲು ಬರುವ ಪ್ರತ್ಯೇಕ ವರ್ಗವೂ ಇದೆ. ಪೊಂಗಲ್, ಪುಳಿಯೋಗರೆ, ಏನು ತಿಂದರೂ ಸೊಗಸೇ. ತಿಂಡಿಯ ನಂತರ ಕಾಫಿ ಆರ್ಡರ್ ಮಾಡಿದರೆ ಗಾಜಿನ ಲೋಟದಲ್ಲಿ ನೊರೆ ನೊರೆಯಾಗಿ ತಂದಿಟ್ಟ ಕಾಫಿಯೂ ಅಷ್ಟೇ ಟೇಸ್ಟು. ಬಾಸುಂದಿ ರುಚಿ ಬಲ್ಲವನೇ ಬಲ್ಲ
ಇನ್ನು ಮಹೇಶ್ ಪ್ರಸಾದ್‌ನಲ್ಲಿ ಸಿಗುವ ಬಾಸುಂದಿ ರುಚಿ ಬಲ್ಲವನೇ ಬಲ್ಲ! ಕಪ್‌ನಲ್ಲಿರುವ ಬಾಸುಂದಿಯನ್ನು ಸ್ಟೀಲಿನ ಚಮಚ ಮುಳುಗಿಸಿ ಬಾಯಲ್ಲಿಳಿಸಿದರೆ, ನೀವು ಒಮ್ಮೆ ಕಣ್ಣು ಮುಚ್ಚಿ, ಸಿಹಿಕಹಿ ಚಂದ್ರು ಸ್ಟೈಲಲ್ಲಿ ಮ್ ಮ್ ಮ್ ಅನ್ನುವಂತಾಗುತ್ತದೆ.
Related Articles
Advertisement
ಇನ್ನು ಸಂಜೆ 4ಕ್ಕೆ ಶಾವಿಗೆ ಬಾತು, ರವಾ ಇಡ್ಲಿ, ಮಂಗಳೂರು ಬಜ್ಜಿ ಉಂಟು. ರವಾ ಇಡ್ಲಿಗೆ ನಂದಿನಿ ತುಪ್ಪದ ಕಾಂಬಿನೇಷನ್ ಇರುತ್ತದೆ. ಸಂಜೆ 5 ರಿಂದ ಆರಂಭವಾಗುವ ಚಾಟ್ಸ್ ಗೂ ಇದು ಪ್ರಸಿದ್ಧಿ. ಮಸಾಲಾ ಪುರಿ, ದಹಿಪುರಿ, ಸೇವ್ ಪುರಿ, ಕಟ್ಲೆಟ್, ಭೇಲ್‌ಪುರಿ, ಕಚೋರಿ, ಗೋಬಿ ಮಂಚೂರಿಯನ್ ಇತ್ಯಾದಿ ಚೈನೀಸ್ ಫುಡ್ ಕೂಡ ಇಲ್ಲಿ ರುಚಿಕರ. ಹೀಗೆ ಬೆಳಗಿನ ತಿಂಡಿಯಿಂದ ಹಿಡಿದು, ರಾತ್ರಿಯ ಚಾಟ್ಸ್ ತನಕ ಎಲ್ಲ ಬಗೆಯ ಐಟಂಗಳಲ್ಲೂ ರುಚಿ ಕಾಯ್ದುಕೊಂಡು ಬರುವುದು ಕಷ್ಟಕರ. ಅದರಲ್ಲಿ ಯಶಸ್ವಿಯಾಗಿರುವುದು ಮಹೇಶ್ ಪ್ರಸಾದ್ ಹೆಗ್ಗಳಿಕೆ.
100 ಜನರಿಗೆ ಆಸನ ವ್ಯವಸ್ಥೆಯುಳ್ಳ ಮಹೇಶ್‌ಪ್ರಸಾದ್‌ನಲ್ಲಿ ರಶ್‌ನದ್ದೇ ಸಮಸ್ಯೆ. ಬೆಳಿಗ್ಗೆ 8.30ರ ನಂತರ 10.30ರವರೆಗೆ, ಮಧ್ಯಾಹ್ನ 1 ಗಂಟೆಯಿಂದ 3.30ರವರೆಗೆ ಬಹಳ ರಶ್ ಇರುತ್ತದೆ. ಬಂದವರು ಸ್ವಲ್ಪ ಸಮಯ ಕಾದು ನಿಲ್ಲಬೇಕು. ಮೈಸೂರಿಗೆ ಯೋಗ ಕಲಿಯಲು ಬಂದ ವಿದೇಶಿಯರು ಬೆಳಗ್ಗೆ ಇಲ್ಲಿಗೇ ಉಪಾಹಾರಕ್ಕೆ ಬರುತ್ತಾರೆ. ಈ ಪರಿಯಲ್ಲಿ ಜನರು ಅಲ್ಲಿಗೆ ಬರಲು ಕಾರಣ ಅಲ್ಲಿನ ರುಚಿ ಮತ್ತು ಶುಚಿ. ರುಚಿ ಎಷ್ಟು ಚೆಂದವೂ, ಶುಚಿಗೂ ಅಷ್ಟೇ ಮಹತ್ವ. 2017ನೇ ಸಾಲಿನಲ್ಲಿ ಸ್ವತ್ಛ ಭಾರತ್ ನಲ್ಲಿ ಮೈಸೂರಿನ ಮೂರು ಹೋಟೆಲ್‌ಗಳಿಗೆ ದೊರೆತ ಪ್ರಶಸ್ತಿಯಲ್ಲಿ ಮಹೇಶ್ ಪ್ರಸಾದ್ ಕೂಡ ಒಂದು. (ಅದರಲ್ಲಿ ಉಳಿದೆರಡು ಕಾರ್ಪೊರೇಟ್ ಸ್ಟಾರ್ ಹೋಟೆಲ್‌ಗಳು!)
2000 ನೇ ಇಸವಿಯ ಸೆಪ್ಟೆಂಬರ್ ತಿಂಗಳಲ್ಲಿ ಈ ಹೋಟೆಲ್ ಆರಂಭವಾಯಿತು. ಪುತ್ತೂರಿನವರಾದ ಪ್ರಕಾಶ್ ಶೆಟ್ಟಿ ಮತ್ತು ಅವರ ಸಂಬಂಧಿ ಸುರೇಶ್ ಆಳ್ವ ಇದರ ಪಾಲುದಾರರು. ಇಲ್ಲಿ ಸ್ವಾರಸ್ಯವೊಂದಿದೆ, ಪ್ರಕಾಶ್ ಶೆಟ್ಟಿ ವಿಜಯಾಬ್ಯಾಂಕ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದವರು. ಮೈಸೂರಿನ ವಿಜಯಾ ಬ್ಯಾಂಕ್ ಹೌಸಿಂಗ್ ಫೈನಾನ್ಸ್ ಮ್ಯಾನೇಜರ್ ಆಗಿ, ಈಗ ಅವರ ಹೋಟೆಲ್ ಕಟ್ಟಡದ ಮಹಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸ್ವಯಂ ನಿವೃತ್ತಿ ಪಡೆದು, ಅದೇ ಕಟ್ಟಡದ ಕೆಳಗೆ ಈ ಹೋಟೆಲ್ ಆರಂಭಿಸಿದರು. ಅವರು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಜಾಗದಲ್ಲೇ ಹೋಟೆಲ್ ಉಸ್ತುವಾರಿ ನಿರ್ವಹಿಸುತ್ತಿದ್ದಾರೆ!
ಈ ಬಗ್ಗೆ ಮಾತನಾಡಿದ ಪ್ರಕಾಶ್ ಶೆಟ್ಟಿ, “ವಿಆರ್‌ಎಸ್ ಪಡೆದ ನಂತರ ಏನಾದರೂ ಸ್ವಯಂ ಉದ್ಯೋಗ ಮಾಡಬೇಕೆಂಬ ಆಲೋಚನೆ ಬಂತು. ಆಗ ಮೈಸೂರಿನ ಜನರಿಗೆ ರುಚಿ, ಶುಚಿ ಮತ್ತು ಮಿತವ್ಯಯದ ದರವುಳ್ಳ ಹೋಟೆಲ್ ಅನ್ನು ಸಾಂಪ್ರದಾಯಿಕ ಶೈಲಿಯಲ್ಲಿ ನೀಡಬೇಕೆಂದು ಯೋಚಿಸಿದೆವು. ನಮ್ಮ ಹೋಟೆಲ್ ಇರುವುದು ಒಂದು ಮನೆಯಲ್ಲಿ. ಹಾಲ್ ಮತ್ತು ಕೋಣೆಗಳು ಈಗಲೂ ಹಾಗೇ ಇವೆ. ಗ್ರಾಹಕರಿಗೆ ಉತ್ತಮವಾದುದನ್ನು ನೀಡಬೇಕೆಂಬ ಪ್ರೇರಣೆ ನನಗೆ ಬಂದಿದ್ದು ಸದಾನಂದ ಮಯ್ಯ ಅವರಿಂದ. ಅವರ ಬರಹಗಳನ್ನು ಓದುತ್ತಿದ್ದೆ. ಹಾಗಾಗಿ, ನಮ್ಮ ಹೋಟೆಲಿನ ತಿನಿಸುಗಳನ್ನು ತಯಾರಿಸುವ ದಿನಸಿ ಪದಾರ್ಥ, ಅಡುಗೆ ಎಣ್ಣೆ, ತರಕಾರಿ ಇತ್ಯಾದಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಸನ್‌ಪ್ಯೂರ್ ಎಣ್ಣೆ, ನಂದಿನಿ ತುಪ್ಪವನ್ನೇ ಬಳಸುತ್ತೇವೆ. ಪಾತ್ರೆಗಳ ಶುಚಿತ್ವ, ಅಡುಗೆ ಕೋಣೆಯ ಶುಚಿತ್ವಕ್ಕೆ ಗಮನ ನೀಡಿದ್ದೇವೆ. ಕಳೆದ 18 ವರ್ಷಗಳಿಂದ ಮೈಸೂರಿನ ಜನರು ನಮ್ಮ ಕೈಹಿಡಿದಿದ್ದಾರೆ’ ಎಂದು ಕೃತಜ್ಞರಾಗುತ್ತಾರೆ.ಮಾಹಿತಿಗೆ: 0821-2330820 ಕೆ.ಎಸ್.ಬಿ. ಆರಾಧ್ಯ