Advertisement

Mangalore: ಮಹೇಶ್‌ ಮೋಟಾರ್ಸ್‌ ಮಾಲಕ ಎ.ಕೆ. ಪ್ರಕಾಶ್‌ ಶೇಕ ಅವರಿಗೆ ಶ್ರದ್ಧಾಂಜಲಿ

09:59 AM Oct 13, 2023 | Team Udayavani |

ಮಂಗಳೂರು: ಸಮರ್ಥ ಸಾರಿಗೆ ವ್ಯವಹಾರ ತಜ್ಞನಾಗಿ ಸರ್ವರ ಪ್ರೀತಿ ಗಳಿಸಿದ ಎ.ಕೆ. ಪ್ರಕಾಶ್‌ ಶೇಕ ಅವರು ನಮ್ಮನ್ನು ಅಗಲಿದರೂ ಅವರ ಬದುಕಿನ ಹೆಜ್ಜೆಗಳ ಕುರಿತಾದ ಪ್ರಕಾಶ ಪ್ರಜ್ಞೆ ಪುನರ್ಜನ್ಮ ಪಡೆಯಬೇಕು ಎಂದು ಹಿರಿಯ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅಭಿಪ್ರಾಯ ಪಟ್ಟರು.

Advertisement

ಅ. 1ರಂದು ನಿಧನ ಹೊಂದಿದ ಮಹೇಶ್‌ ಮೋಟಾರ್ಸ್‌ ಮಾಲಕ ಎ.ಕೆ. ಪ್ರಕಾಶ್‌ ಶೇಕ ಅವರಿಗೆ ಅಡ್ಯಾರ್‌ ಗಾರ್ಡನ್‌ನಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಹಿರಿಯರ ಹಿನ್ನೆಲೆಯನ್ನು ಉಪಯೋಗಿಸಿಕೊಂಡು ವ್ಯವಹಾರ ತಜ್ಞನಾಗಿ, ದಾನಿಯಾಗಿ ಪ್ರಕಾಶ್‌ ಶೇಕ ಹಲವರಿಗೆ ಮೌನವಾಗಿ ಸಹಾಯ ಮಾಡಿದ್ದಾರೆ. ಕುಟುಂಬ ಹಾಗೂ ಸಿಬಂದಿಯನ್ನು ತುಂಬಾ ಚೆನ್ನಾಗಿಯೇ ನೋಡಿ ಕೊಂಡಿದ್ದಾರೆ. ಸಾಂಸ್ಕೃತಿಕ ಕ್ಷೇತ್ರಕ್ಕೂ ಮರೆಯಲ್ಲೇ ನಿಂತು ನೆರವಾಗಿದ್ದಾರೆ. ಸಂಪತ್ತು, ಸೌಭಾಗ್ಯ, ಉಜ್ವಲ ಭವಿಷ್ಯ ಹಾಗೂ ಸಾಧನೆ ಮಾಡಲು ಅವಕಾಶ ಇರುವುದೆಲ್ಲವನ್ನು ಬಿಟ್ಟು ಅವರು ಅಗಲಿದ್ದು ದೊಡ್ಡ ಆಘಾತ ತಂದಿದೆ ಎಂದರು.

ಯಶಸ್ವಿ ಸಾರಿಗೆ ಉದ್ಯಮಿ: ಸಿಟಿ ಬಸ್‌ ಮಾಲಕರ ಸಂಘದ ಪ್ರಮುಖರಾದ ದಿಲ್‌ರಾಜ್‌ ಆಳ್ವ ಮಾತನಾಡಿ, ಪ್ರಕಾಶ್‌ ಅವರು ಯಶಸ್ವಿ ಸಾರಿಗೆ ಉದ್ಯಮಿಯಾಗಿ, ಬಸ್‌ ಮಾಲಕರ ಸಂಘದ ಪ್ರಮುಖರಾಗಿ, ಶಿಸ್ತುಬದ್ಧ ವ್ಯವಹಾರ ಮಾಡಿದ್ದಾರೆ. ಪ್ರಯಾಣಿಕರು ಹಾಗೂ ಸಿಬಂದಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಪ್ರಕಾಶ್‌ ಅವರ ತಂದೆ ಎ.ಕೆ. ಜಯರಾಮ ಶೇಕ, ತಾಯಿ ಪದ್ಮಾವತಿ ಶೇಕ, ಪತ್ನಿ, ಮಗಳು, ಸಹೋದರ, ಸಹೋದರಿಯರು ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ರಾಜೇಶ್‌ ನಾೖಕ್‌, ವಿ.ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮಾಜಿ ಸಚಿವರಾದ ಬಿ. ರಮಾನಾಥ ರೈ, ಕೃಷ್ಣ ಪಾಲೆಮಾರ್‌, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಭಾಸ್ಕರ ಕೆ., ಪ್ರಮುಖರಾದ ಕ್ಯಾ| ಬೃಜೇಶ್‌ ಚೌಟ, ಅಜಿತ್‌ ಕುಮಾರ್‌ ರೈ ಮಾಲಾಡಿ, ಪಟ್ಲ ಸತೀಶ್‌ ಶೆಟ್ಟಿ, ಮಿಥುನ್‌ ರೈ, ಪ್ರಕಾಶ್‌ ಕಾರಂತ ಸಹಿತ ಹಲವು ಗಣ್ಯರು ಶ್ರದ್ಧಾಂಜಲಿ ಸಮರ್ಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next