ಪಣಜಿ: ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಕನ್ನಡಿಗರ ಹಲವು ವರ್ಷಗಳ ಕನಸಾಗಿದೆ. ನಾನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಆಯ್ಕೆಯಾದರೆ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುವುದು ಮಾತ್ರವಲ್ಲದೆಯೇ ಗೋವಾದಲ್ಲಿ ಕನ್ನಡಶಾಲೆಗಳನ್ನು ಕಾಲೇಜು ಶಿಕ್ಷಣದ ವರೆಗೂ ವಿಸ್ತರಣೆ ಮಾಡುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾಗಿರುವ ಮಹೇಶ್ ಜೋಶಿ ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಗೋವಾದ ಮಡಗಾಂವನಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು-ಕಳೆದ ಸುಮಾರು ಎರಡು ದಶಕಗಳ ಹಿಂದೆ ಗೋವಾದಲ್ಲಿ ಕೇವಲ 7 ರಿಂದ 8 ಕನ್ನಡ ಸಂಘಗಳಿದ್ದವು.
ಆದರೆ ಇಂದು ಗೋವಾದಲ್ಲಿ 30 ಕ್ಕೂ ಹೆಚ್ಚು ಕನ್ನಡ ಸಂಘಗಳಿವೆ. ಇದನ್ನು ಗಮನಿಸಿದರೆ ಗೋವಾದಲ್ಲಿ ನೆಲೆಸಿರುವ ಕನ್ನಡಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿರುವುದು ಕಂಡುಬರುತ್ತಿದೆ. ಈ ಹಿಂದೆಯೂ ಕೂಡ ನಾನು ಗೋವಾದಲ್ಲಿರುವ ಕನ್ನಡಿಗರಿಗೆ ಕೈಲಾದ ಸಹಾಯ ಸಹಕಾರ ಮಾಡಿದ್ದೇನೆ, ಮುಂಬರುವ ದಿನಗಳಲ್ಲಿಯೂ ಇದೇ ರೀತಿ ಸಹಾಯ ಸಹಕಾರ ಮುಂದುವರೆಸುತ್ತೇನೆ ಎಂದು ಮಹೇಶ್ ಜೋಶಿ ನುಡಿದರು.
ಇದನ್ನೂ ಓದಿ :ಹೈದರಾಬಾದ್- ಬೆಂಗಳೂರು ಬುಲೆಟ್ ಟ್ರೈನ್‌ಗೆ ವಿಶ್ವಬ್ಯಾಂಕ್ ನೆರವು
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ಧಣ್ಣ ಮೇಟಿ ಮಾತನಾಡಿ- ಇಂದು ನಮಗೆ ಮಹೇಶ್ ಜೋಶಿಯವರಂತಹ ಉತ್ತಮ ನಾಯಕರು ಸಿಕ್ಕಿದ್ದಾರೆ. ಅವರನ್ನು ಬಹುಮತ ನೀಡಿ ಆಯ್ಕೆ ಮಾಡುವ ಮೂಲಕ ಗೋವಾ ಕನ್ನಡಿಗರ ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಅಖಿಲಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್, ಕನ್ನಡ ಸಾಹಿತ್ಯ ಪರಿಷತ್ ಗೋವಾ ಘಟಕದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್, ಅರವಿಂದ ಯಾಳಗಿ, ಜಯಶ್ರೀ ಹೊಸ್ಮನಿ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹೇಶ್ ಜೋಶಿಯವರ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.