Advertisement

ಹಣ, ಅಧಿಕಾರದಾಹದಿಂದ ಎನ್‌.ಮಹೇಶ್‌ ಬಿಜೆಪಿಗೆ; ಎಂ. ಕೃಷ್ಣಮೂರ್ತಿ

05:39 PM May 04, 2022 | Team Udayavani |

ಮಂಡ್ಯ: ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಹಣ ಮತ್ತು ಅಧಿಕಾರದಾಹದಿಂದ ಬಿಜೆಪಿ ಸೇರಿದ್ದಾರೆ. ಅವರಿಗೆ ಅಂಬೇಡ್ಕರ್‌ ತತ್ವ ಸಿದ್ಧಾಂತ ಮತ್ತು ದಲಿತ ಸಮಾಜದ ಮೇಲೆ ಯಾವುದೇ ಕಾಳಜಿ ಇಲ್ಲ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.

Advertisement

ನಗರದ ಬಿಎಸ್ಪಿ ಕಚೇರಿಯಲ್ಲಿ ಜಿಲ್ಲಾ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ವತಿಯಿಂದ ನಡೆದ ಜಗಜ್ಯೋತಿ ಬಸವಣ್ಣನವರ ಜಯಂತಿಯಲ್ಲಿ ಮಾತನಾಡಿದರು.

ಶಾಸಕ ಎನ್‌.ಮಹೇಶ್‌ ಮಂಡ್ಯ, ಮೈಸೂರು ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ತಮಗೆ ಸಾವಿರಾರು ಬೆಂಬಲಿಗರಿದ್ದಾರೆ ಎಂದು ಬಿಜೆಪಿಯವರಿಗೆ ಸುಳ್ಳು ಹೇಳುತ್ತಿದ್ದಾರೆ. ಈಗ ಯಾವ ಜಿಲ್ಲೆಯಲ್ಲೂ ನೂರು ಜನರೂ ಸೇರ್ಪಡೆಯಾಗಿಲ್ಲ. ಇದು ಅವರ ಬಂಡವಾಳ ಬಯಲು ಮಾಡಿದೆ ಎಂದು ಹೇಳಿದರು.

ತಾಕತ್ತಿದೆಯೇ?: ಶಾಸಕ ಎನ್‌.ಮಹೇಶ್‌ರಿಗೆ ತಾಕತ್ತಿದ್ದರೆ ಈಗ ತಮ್ಮ ಜತೆ ಬಿಜೆಪಿ ಸೇರಿರುವ ಅವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ಒಂದೊಂದು ಜಿಲ್ಲೆಯಲ್ಲಿ ಒಬ್ಬರಿಗೆ ಟಿಕೆಟ್‌ ಕೊಡಿಸಲಿ. ಹಾಗೆಯೇ 4 ಜಿಲ್ಲೆಗಳಲ್ಲಿ ಕನಿಷ್ಠ ಒಬ್ಬರಿಗಾದರೂ ಜಿಲ್ಲಾಧ್ಯಕ್ಷರ ಹುದ್ದೆ ಕೊಡಿಸಲಿ. ಹಾಗೆಯೇ ಒಂದು ಜಿಲ್ಲೆಯಲ್ಲಿ 4 ಜನಕ್ಕೆ ಜಿಪಂ ಮತ್ತು ತಾಪಂ ಟಿಕೆಟ್‌ ಕೊಡಿಸಲು ಸಾಧ್ಯವೇ? ಕನಿಷ್ಠ ತಮ್ಮ ಒಬ್ಬ ಬೆಂಬಲಿಗನಿಗೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುವ
ತಾಕತ್ತಿದೆಯೇ? ಎಂದು ಸವಾಲು ಹಾಕಿದರು.

ಇನ್ನು ಬಿಜೆಪಿ ಸರ್ಕಾರ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್ಪಿಯ 8885 ಕೋಟಿ ರೂ. ಹಣ ಇತರ ಇಲಾಖೆಗಳಿಗೆ ವರ್ಗಾಯಿಸಿದೆ. ಜಲ ಜೀವನ್‌ ಮಿಷನ್‌ಗೆ 3 ಸಾವಿರ ಕೋಟಿ ರೂ. ವರ್ಗಾಯಿಸಿದೆ. ರಾಜ್ಯದಲ್ಲಿ ಸಾವಿರಾರು ಎಸ್ಸಿ, ಎಸ್ಟಿ ನೌಕರರು ಮತ್ತು ಬ್ಯಾಕ್‌ ಲಾಗ್‌ ಎಂಜಿನಿಯರ್ ಗಳಿಗೆ ಬಡ್ತಿಯಲ್ಲಿ ಅನ್ಯಾಯವಾಗಿದೆ. ಇವರಿಗೆ ನ್ಯಾಯ ಕೊಡಿಸಲು ಎನ್‌.ಮಹೇಶ್‌ಗೆ ತಾಕತ್ತಿದೆಯೇ? ಎಂದು ಪ್ರಶ್ನಿಸಿದರು.

Advertisement

ಪ್ರಶ್ನಿಸಲು ಸಾಧ್ಯವೇ?: ಮಂಗಳೂರಿನಲ್ಲಿ ಭಜರಂಗದಳದ ಕಾರ್ಯಕರ್ತನಿಂದ ಕೊಲೆಯಾದ ದಲಿತ ದಿನೇಶ್‌ ಮತ್ತು ತುಮಕೂರಿನ ಪೆದ್ದನಹಳ್ಳಿಯಲ್ಲಿ ಕೊಲೆಯಾಗಿರುವ ಗಿರೀಶ್‌ ಮತ್ತು ಪಿ.ಗಿರೀಶ್‌ ಎಂಬ ದಲಿತರ ಕುಟುಂಬಕ್ಕೆ ಶಿವಮೊಗ್ಗದ ಹರ್ಷನ ಕುಟುಂಬಕ್ಕೆ ನೀಡಿರುವ ಹಾಗೆ ಸರ್ಕಾರದ ವತಿಯಿಂದ ತಲಾ 25 ಲಕ್ಷ ಪರಿಹಾರ ಕೊಡಿಸೋ ಮೂಲಕ ಬಿಜೆಪಿ ಸರ್ಕಾರ ದಲಿತರ ಪರ ಇದೆ ಎಂಬುದನ್ನು ಸಾಬೀತು ಪಡಿಸಲಿ. ಉತ್ತರಪ್ರದೇಶದ ಬಿಜೆಪಿ ಸರ್ಕಾರ ಖಾಸಗಿ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮೀಸಲಾತಿ ರದ್ದುಪಡಿಸಿದೆ. ಇದನ್ನು ಪ್ರಶ್ನಿಸಲು ಸಾಧ್ಯವೇ? ಎಂದು ಗುಡುಗಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಶಂಕರ್‌, ವಿಧಾನಸಭಾ ಅಧ್ಯಕ್ಷ ವಕೀಲ ಅನಿಲ್‌ ಕುಮಾರ್‌, ಗೋವಿಂದರಾಜು, ತಾಲೂಕು ಉಸ್ತುವಾರಿ ಕುಮಾರ್‌, ನಗರ ಸಂಯೋಜಕ ಅನಿಲ್‌ ಆಲನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next