ಮೈಸೂರು: ಬೇರೆಯವರ ಮನೆಯಲ್ಲಿ ಟೀ ಲೋಟ ತೊಳೆಯುತ್ತಿದ್ದವರ ಆಸ್ತಿ ವರ್ಷದಿಂದ ವರ್ಷಕ್ಕೆ 200 ಪಟ್ಟು ಹೆಚ್ಚಾಗಿದೆ. ಆದರೆ, ಪ್ರತಿ ಚುನಾವಣೆಯಲ್ಲಿ ನಮ್ಮ ಮನೆಯ ಆಸ್ತಿ ಕರಗಿದೆ. ಇರುವ ಆಸ್ತಿಯನ್ನು ಚುನಾವಣೆ ಸಂದರ್ಭದಲ್ಲಿ ಮಾರಾಟ ಮಾಡಿ, ಮಾಡಿ ಪಿತ್ರಾರ್ಜಿತ ಆಸ್ತಿಯನ್ನು ಕಳೆದುಕೊಂಡಿದ್ದೇನೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದರು.
ದೇವೇಗೌಡರ ಕುಟುಂಬಕ್ಕೆ ವಿಷ ಇಟ್ಟವನು ನಾನಲ್ಲ. ನಾನು ಈಗಲೂ ದೇವೇಗೌಡರು ಮಾಡಿ ರುವ ಉಪಕಾರಕ್ಕೆ ದೇವರ ಮನೆಯಲ್ಲಿ ಅವರ ಫೋಟೊ ಇಟ್ಟು ಪೂಜಿಸುತ್ತೇನೆ. ಸಾ.ರಾ. ಮಹೇಶ್ ಅವರಿಂದಲೇ ಆ ಕುಟುಂಬ ಈ ಸ್ಥಿತಿಗೆ ಬಂದಿದೆ. ಕುಮಾರಸ್ವಾಮಿ ಈಗಲೂ ನಮ್ಮ ನಾಯಕರೇ. ಆದರೆ, ಅವರು ಸಾ.ರಾ.ಮಹೇಶ್ ಸೇರಿ ಯಾರ್ಯಾರಧ್ದೋ ಮಾತು ಕೇಳಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದರು.
ಮಾಧ್ಯಮಗಳು ನಮ್ಮನ್ನು ಅನರ್ಹರು, ಅಬ್ಬೇಪಾರಿಗಳು ಎಂದು ಕರೆಯುತ್ತಿದ್ದಾರೆ. ದಯವಿಟ್ಟು ಆ ರೀತಿ ಕರೆಯಬೇಡಿ.
-ಎಚ್.ವಿಶ್ವನಾಥ್, ಅನರ್ಹ ಶಾಸಕ