ಬೆಂಗಳೂರು: ಸೋಮವಾರ ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡುವುದಾಗಿ ತಿಳಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತೂಂದು ಆಘಾತ ಎದುರಾಗಿದ್ದು, ಬಿಎಸ್‌ಪಿ ಶಾಸಕ ಎನ್.ಮಹೇಶ್ ಸದನಕ್ಕೆ ಗೈರು ಹಾಜರಾಗುವ ಸಾಧ್ಯತೆಯಿದೆ. ಆದರೆ, “ಬಿಎಸ್ಪಿ ಶಾಸಕ ಎನ್.ಮಹೇಶ್ ಅವರು ಕುಮಾರಸ್ವಾಮಿಯವರ ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸಬೇಕು’ ಎಂದು ಪಕ್ಷದ ರಾಷ್ಟೀಯ ಅಧ್ಯಕ್ಷೆ ಮಾಯಾವತಿ ಟ್ವೀಟ್ ಮೂಲಕ ನಿರ್ದೇಶನ ನೀಡಿದ್ದಾರೆ.
ಪಕ್ಷದ ವರಿಷ್ಠರ ನಿರ್ದೇಶನದಂತೆ ತಾವು ವಿಶ್ವಾಸಮತ ಯಾಚನೆ ವೇಳೆ ತಟಸ್ಥವಾಗಿ ಉಳಿಯುವುದಾಗಿ ಶಾಸಕ ಮಹೇಶ್ ಹೇಳಿಕೆ ನೀಡಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ದೂರವಾಣಿ ಮೂಲಕ ಮಾಯಾವತಿಯನ್ನು ಸಂಪರ್ಕಿಸಿ ಸರ್ಕಾರವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಪರ ಮತ ಚಲಾಯಿಸುವಂತೆ ಪಕ್ಷದ ಶಾಸಕರಿಗೆ ಟ್ವೀಟ್ ಮೂಲಕ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ.
ಆದರೆ, ವೈಯಕ್ತಿಕ ಕೆಲಸದ ಕಾರಣ ನಾಳೆಯಿಂದ ಎರಡು ದಿನ ಸದನಕ್ಕೆ ಹಾಜರಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ, ದೋಸ್ತಿ ಸರ್ಕಾರದ ಸಂಖ್ಯಾಬಲ ಮತ್ತೂಂದು ಕಡಿಮೆಯಾಗುವ ಆತಂಕ ಕಾಡುತ್ತಿದೆ. ಈಗಾಗಲೇ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಎದೆನೋವು ಎಂದು ಮುಂಬೈ ಸೇರಿದ್ದಾರೆ. ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅನಾರೋಗ್ಯ ಎಂದು ಆಸ್ಪತ್ರೆ ಸೇರಿದ್ದಾರೆ. ಇದೀಗ ಬಿಎಸ್‌ಪಿ ಶಾಸಕ ಎನ್.ಮಹೇಶ್ ಸಹ ಗೈರು ಆಗುವುದಾಗಿ ತಿಳಿಸಿದ್ದು, ಕಾಂಗ್ರೆಸ್ -ಜೆಡಿಎಸ್ ಎದೆ ಬಡಿತ ಹೆಚ್ಚಿಸಿದೆ.
ಹದಿನೈದು ಶಾಸಕರ ರಾಜೀನಾಮೆ, ಇಬ್ಬರು ಪಕ್ಷೇತರರ ಬೆಂಬಲ ವಾಪಸ್ ಹಿನ್ನೆಲೆಯಲ್ಲಿ ಸರ್ಕಾರದ ಸಂಖ್ಯಾಬಲ 102ಕ್ಕೆ ಇಳಿದಿದೆ. ಇದೀಗ ಇಬ್ಬರು ಶಾಸಕರ ಅನಾರೋಗ್ಯ, ಬಿಎಸ್‌ಪಿ ಶಾಸಕರ ಗೈರು ಸಾಧ್ಯತೆಯಿಂದ 99ಕ್ಕೆ ಇಳಿಯಲಿದೆ. (ಸ್ಪೀಕರ್ ಸೇರಿ). ಇಬ್ಬರು ಶಾಸಕರ ಅನಾರೋಗ್ಯ ನೆಪ, ಬಿಎಸ್‌ಪಿ ಶಾಸಕರ ಗೈರು ಹಿಂದೆ ಬಿಜೆಪಿಯ ಕೈವಾಡ ಇದೆಯಾ ಎಂಬ ಅನುಮಾನ ದೋಸ್ತಿನಾಯಕರಲ್ಲಿ ಮೂಡಿದೆ. ಜತೆಗೆ, ಬಿಜೆಪಿ ಮತ್ತಷ್ಟು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ತಂತ್ರಗಾರಿಕೆ ನಡೆಸಿದೆ ಎಂಬ ಮಾಹಿತಿಯೂ ಗುಪ್ತದಳದಿಂದ ಗೊತ್ತಾಗಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಕುಮಾರಸ್ವಾಮಿಯವರು ಸೋಮವಾರವೂ ವಿಶ್ವಾಸಮತ ಸಾಬೀತಿಗೆ ಮುಂದಾಗುವುದು ಅನುಮಾನ ಎಂದು ಹೇಳಲಾಗಿದೆ.
ಜ್ಯೋತಿಷಿಗಳ ಸಲಹೆ: ಜ್ಯೋತಿಷಿಗಳು ಬುಧವಾರದ ನಂತರ ಒಳ್ಳೆಯದಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ, ಅಲ್ಲಿವರೆಗೂ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ತಳ್ಳುವ ಸಾಧ್ಯತೆಯೂ ಇದೆ. ಜೊತೆಗೆ, ಸುಪ್ರೀಂಕೋರ್ಟ್‌ಗೂ ಅರ್ಜಿ ಸಲ್ಲಿಸಿರುವ ನೆಪ ಮುಂದೊಡ್ಡಬಹುದು. ಇಲ್ಲವೇ ರಾಜ್ಯಪಾಲರೇ ಮುಂದಾಗಿ ಕ್ರಮ ಕೈಗೊಳ್ಳಲಿ, ವಿಧಾನಸಭೆ ಅಮಾನತು ಅಥವಾ ವಜಾಗೊಳಿಸಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು, ಬಿಜೆಪಿ ವಿರುದ್ದ ಹೋರಾಟಕ್ಕೆ ಅಸ್ತ್ರ ಮಾಡಿಕೊಳ್ಳುವುದು ಜೆಡಿಎಸ್-ಕಾಂಗ್ರೆಸ್ ಉದ್ದೇಶ ಎಂದು ಹೇಳಲಾಗಿದೆ.