Advertisement

ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಮಹೇಶ್‌ ಗರಂ

12:27 PM Jun 20, 2018 | Team Udayavani |

ಮೈಸೂರು: ನಗರದ ಜಿಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪರಿಚಯಾತ್ಮಕ ಸಭೆಗೆ ಗೈರಾಗಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ವಿರುದ್ಧ ಪ್ರವಾಸೋದ್ಯಮ ಮತ್ತು ರೇಷ್ಮೆ ಖಾತೆ ಸಚಿವರಾಗಿರುವ ಸಾ.ರಾ.ಮಹೇಶ್‌ ಗರಂ ಆದರು. 

Advertisement

ಅಬಕಾರಿ ಇಲಾಖೆ ಜಿಲ್ಲಾ ಅಧೀಕ್ಷಕ ಅಧಿಕಾರಿ ಸಭೆಗೆ ಬಾರದೆ ಕಿರಿಯ ಅಧಿಕಾರಿಯನ್ನು ಕಳುಹಿಸಿಕೊಟ್ಟಿರುವುದಕ್ಕೆ ಗರಂ ಆದ ಸಚಿವರು, ನಿಮ್ಮ ಜಿಲ್ಲಾ ಅಧಿಕಾರಿ ಇಷ್ಟೊಂದು ಒತ್ತಡದ ಮಧ್ಯೆ ಕೆಲಸ ಮಾಡುವುದು ಬೇಡ, ತೀರಾ ಒತ್ತಡ ಇದ್ದರೆ ಬೇರೆ ಜಿಲ್ಲೆಗೆ ವರ್ಗಾವಣೆ ತೆಗೆದುಕೊಳ್ಳಲು ಹೇಳಿ, ಬೇಕಿದ್ದರೆ ನಾನೇ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು. 

ಅಧಿಕಾರಿಗಳಿಗೆ ತರಾಟೆ: ಸಭೆಯ ಆರಂಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಹೆಸರು ಹಾಗೂ ಪದನಾಮದೊಂದಿಗೆ ಪರಿಚಯ ಮಾಡಿಕೊಳ್ಳಲು ಆರಂಭಿಸಿದಾಗ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ  ಅಧೀಕ್ಷಕ ಎಂಜಿನಿಯರ್‌ ಸುರೇಶ್‌ಬಾಬು,ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ ಸತ್ಯನಾರಾಯಣ ಅವರನ್ನು ಉದ್ದೇಶಿಸಿ, ನೀವಿಬ್ಬರು ಬಹಳ ವರ್ಷದಿಂದ ಮೈಸೂರಿನಲ್ಲೇ ಇದ್ದೀರಲ್ಲವೇ ಎಂದು ಪ್ರಶ್ನಿಸಿದರು. 

ಚುನಾವಣೆ ವೇಳೆ ವರ್ಗಾವಣೆ ಆಗಿತ್ತು, ಮತ್ತೆ ಇಲ್ಲಿಗೇ ಬಂದಿದ್ದೇವೆ ಎಂದು ಇಬ್ಬರು ಎಂಜಿನಿಯರ್‌ಗಳು ಉತ್ತರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀವು ಸಾರ್ವಜನಿಕರ ಕೆಲಸ ಮಾಡಬೇಕು. ಹಿಂದೆ ಏನು ಮಾಡಿದ್ದೀರೋ ನನಗೆ ಗೊತ್ತಿಲ್ಲ. ಸಾರ್ವಜನಿಕರ ಕೆಲಸಗಳನ್ನು ವಿಳಂಬ ಮಾಡದೆ ಅಗತ್ಯ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.

ರೈತರಿಗೆ ಪರಿಹಾರ ಕೊಡಲು ಸೂಚನೆ: ಜಿಲ್ಲೆಯ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ಕಬಿನಿ ಜಲಾಶಯದಿಂದ ನದಿಗೆ  ಏಕಾಏಕಿ ನೀರು ಬಿಡುಗಡೆಮಾಡಿದ್ದರಿಂದ ಬೆಳೆ ಹಾನಿಗೀಡಾದ ರೈತರಿಗೆ ಕಾನೂನು ನೋಡದೆ ಮಾನವೀಯತೆ ದೃಷ್ಟಿಯಿಂದ ಕೂಡಲೇ ಪರಿಹಾರ ಕೊಡುವಂತೆ ಸೂಚಿಸಿದರು.

Advertisement

ಜಂಟಿ ಕೃಷಿ ನಿರ್ದೇಶಕ ಕೆ.ಎಂ.ಸೋಮ ಸುಂದರ್‌ ಅವರಿಗೆ ಜಿಲ್ಲೆಯ ಮಳೆ-ಬೆಳೆ ಪರಿಸ್ಥಿತಿ ಮಾಹಿತಿ ಕೇಳಿದ ಸಚಿವರು, ನೀವು ಕಚೇರಿಯಲ್ಲಿ ಕುಳಿತು ಕೆಲಸ ಮಾಡಿದರೆ ಸಾಲದು, ಕ್ಷೇತ್ರಗಳಿಗೆ ಭೇಟಿ ನೀಡಬೇಕು. ನೀವು ಕ್ಷೇತ್ರ ವೀಕ್ಷಣೆಗೆ ಹೋಗಿದ್ದು ಅಲ್ಲಿನ ರೈತರಿಗೆ ಗೊತ್ತಾಗಬೇಕು ಎಂದರು.

ಬಂದು ನೋಡೋಕೆ ಹೇಳಿ: ಭೂ ವಿಜ್ಞಾನ ಇಲಾಖೆ ಜಿಲ್ಲಾಮಟ್ಟದ ಅಧಿಕಾರಿ ಸೋಮಶೇಖರ್‌, ಸಭೆಗೆ ಬಾರದೆ ಅಧೀನ ಅಧಿಕಾರಿಯನ್ನು ಕಳುಹಿಸಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಸಚಿವರು, ಅವರು ಸಭೆಗೆ ಬಾರದೆ ಚಾಮರಾಜನಗರಕ್ಕೆ ಏಕೆ ಹೋಗಿದ್ದಾರೆ? ನನ್ನನ್ನು ಬಂದು ಕಾಣಲು ಹೇಳಿ. ಕೆ.ಆರ್‌.ನಗರದಲ್ಲಿ 3 ಗಾಡಿ ಹಿಡಿದು ತಿಂಗಳಾದ್ರು ಬಿಟ್ಟಿಲ್ಲ, ಲಾರಿಗಳನ್ನಾದರೆ 3 ದಿನಗಳಲ್ಲಿ ಬಿಡುಗಡೆ ಮಾಡುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

15 ಸಾವಿರ ಬೋನಸ್‌: ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆಯ ನೌಕರರಿಗೆ ಕೊಡಬೇಕಿದ್ದ 15ಸಾವಿರ ರೂ. ಬೋನಸ್‌ ಹಣವನ್ನು ಪಾವತಿಸಲು ಸರ್ಕಾರ ಆದೇಶ ಮಾಡಿದೆ ಎಂದು ಸಚಿವರು ತಿಳಿಸಿದರು.

ಸುಸಜ್ಜಿತ ಮಾರುಕಟ್ಟೆ: ಮೈಸೂರು ಭಾಗದ ರೇಷ್ಮೆ ಬೆಳೆಗಾರರು ರೇಷ್ಮೆಗೂಡು ಮಾರಾಟ ಮಾಡಲು ಕೊಳ್ಳೇಗಾಲ, ರಾಮನಗರಕ್ಕೆ ಕೊಂಡೊಯ್ಯಬೇಕಾಗಿದ್ದು, ಮೈಸೂರಿನಲ್ಲೇ ಸುಸಜ್ಜಿತ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪಿಸಲಾಗುವುದು. ರೇಷ್ಮೆ ಇಲಾಖೆಯ ಜಾಗ ಲಭ್ಯವಿದ್ದು, ಸೂಕ್ತವಾದುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿ. ರೈತರು, ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಒತ್ತಡ ರಹಿತವಾಗಿ ಕೆಲಸ ಮಾಡಿ.
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next