ಚಿಕ್ಕಮಗಳೂರು: ಜಿಲ್ಲಾ ಕೃಷಿಕ ಸಮಾಜ ರೈತರ ಅನುಕೂಲಕ್ಕಾಗಿ ಕೃಷಿ ಚಟುವಟಿಕೆ ಕಾರ್ಯಾಗಾರ ಆಯೋಜಿಸಿ ಸರ್ಕಾರ ಮತ್ತು ರೈತರ ನಡುವೆ ಕೊಂಡಿಯಾಗಿ ಕಾರ್ಯ ನಿರ್ವಹಿಸುವಂತೆ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹೇಂದ್ರನಾಥ್ ಹೇಳಿದರು.
ಮಂಗಳವಾರ ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಕ ಸಮಾಜ ರೈತರು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ವರ್ಷಕ್ಕೆ ಎರಡು ಬಾರಿಯಾದರೂ ಕೃಷಿ ಚಟುವಟಿಕೆ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಕೃಷಿ ತಜ್ಞರು ಮತ್ತು ವಿಜ್ಞಾನಿಗಳಿಂದ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ರೈತ ಸಂಪರ್ಕ ಕಾರ್ಯಕ್ರಮಗಳು ನಡೆಯಬೇಕು. ರೈತ ದಿನಾಚರಣೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆ ಕಾರ್ಯಾಗಾರಗಳಿಗೆ ಸರ್ಕಾರದಿಂದ ನಿಗದಿತ ಆರ್ಥಿಕ ನೆರವು ಒದಗಿಸಲಾಗುವುದು ಎಂದ ಅವರು, ತಾಲೂಕು ಹಂತದಲ್ಲಿಯೂ ಕೃಷಿಕ ಸಮಾಜ ಹಣವನ್ನು ಕ್ರೋಢೀಕರಿಸಿ ರೈತರು ಆರ್ಥಿಕವಾಗಿ ಸಬಲರಾಗಲು ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ಧರ್ಮಸ್ಥಳ ಸಂಸ್ಥೆ ಸೇವೆ ಸ್ತುತ್ಯರ್ಹ
ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕಡೂರು ಮತ್ತು ಚಿಕ್ಕಮಗಳೂರು ಭಾಗದ ನಡುವೆ ರೈತರಿಗೆ ಅನುಕೂಲವಾಗುವಂತೆ ಬೀಜ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಮೇಲ್ಮಟ್ಟದಲ್ಲಿ ಚರ್ಚಿಸಿ ಘಟಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ತಿಳಿಸಿದರು.
ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಿ.ಸಿ. ನರೇಂದ್ರ ಮಾತನಾಡಿದರು. ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಚ್. ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಹಾವೇರಿಯ ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಚ್. ಪಾಟೀಲ್, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಿ.ಆರ್. ರವಿ, ಸದಸ್ಯರಾದ ವಸಂತೇಗೌಡ, ಚಂದ್ರಮೌಳಿ, ನಾಗರಾಜ್ ರಾವ್, ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಇದ್ದರು.