Advertisement

‘ಡ್ಯಾಡ್ಸ್‌ ಆರ್ಮಿ’ಯ ಸಾಹಸಕ್ಕೆ ಧೋನಿ ಖುಷ್‌

01:41 AM Sep 21, 2020 | Hari Prasad |

ಅಬುಧಾಬಿ: ಐಪಿಎಲ್‌ನಲ್ಲಿ ಎಲ್ಲರ ಕೇಂದ್ರವಾಗಿದ್ದ ಧೋನಿ ಸಹಜವಾಗಿಯೇ ಆರಂಭಿಕ ಪಂದ್ಯವನ್ನು ಗೆದ್ದ ಸಂತಸದಲ್ಲಿದ್ದಾರೆ.

Advertisement

ಜತೆಗೆ ಇನ್ನೂ ಅನೇಕ ವಿಭಾಗಗಳಲ್ಲಿ ಸಾಕಷ್ಟು ಸುಧಾರಣೆ ಆಗಬೇಕಿದೆ ಎಂದಿದ್ದಾರೆ.

ಅಬುಧಾಬಿಯಲ್ಲಿ ಶನಿವಾರ ರಾತ್ರಿ ಮುಂಬೈ ಇಂಡಿಯನ್ಸ್‌ ವಿರುದ್ಧ 5 ವಿಕೆಟ್‌ ಗೆಲುವು ಸಾಧಿಸಿದ ಬಳಿಕ ಧೋನಿ ಮಾತಾಡಿದರು. ವೈಯಕ್ತಿಕವಾಗಿ ಅನೇಕ ಮೈಲುಗಲ್ಲು ನೆಡುವುದರ ಜತೆಗೆ, ಚೆನ್ನೈಗೆ ಐಪಿಎಲ್‌ ಕೂಟದ ಮೊದಲ ಪಂದ್ಯದಲ್ಲಿ ಗೆಲುವಿನ ಹ್ಯಾಟ್ರಿಕ್‌ ತಂದಿತ್ತ ನಾಯಕನೆಂಬ ಹೆಗ್ಗಳಿಕೆಯೂ ಅವರದಾಗಿತ್ತು.

‘ನಮ್ಮದು ಬಹುತೇಕ ನಿವೃತ್ತ ಆಟಗಾರರ ಪಡೆ. ಡ್ಯಾಡ್ಸ್‌ ಆರ್ಮಿಯೂ ಹೌದು. ಆದರೆ ಟಿ20 ಪಂದ್ಯಗಳಲ್ಲಿ ಅನುಭವದ ಪಾತ್ರವೂ ಮುಖ್ಯವಾಗುತ್ತದೆ ಎಂಬುದನ್ನು ನಮ್ಮ ತಂಡ ಮತ್ತೂಮ್ಮೆ ತೋರಿಸಿಕೊಟ್ಟಿದೆ. ಅದೃಷ್ಟವಶಾತ್‌ ನಮ್ಮಲ್ಲಿ ಗಾಯದ ಸಮಸ್ಯೆಗಳೇನೂ ಇಲ್ಲ’ ಎಂಬುದಾಗಿ ಧೋನಿ ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ ಕಾರಣ ಐಪಿಎಲ್‌ನಲ್ಲಿ ಮಾತ್ರ ಧೋನಿ ಆಟವನ್ನು ಕಾಣಬಹುದಿತ್ತು. ಸಹಜವಾಗಿಯೇ ಅವರು ಈ ಕೂಟದ ಕೇಂದ್ರಬಿಂದು. ಹೀಗಾಗಿ ಚೆನ್ನೈ ತಂಡದ ಗೆಲುವಿನ ಆರಂಭ ಧೋನಿ ಅಭಿಮಾನಿಗಳನ್ನು ಸಂಭ್ರಮಿಸುವಂತೆ ಮಾಡಿದೆ.

Advertisement


ರಾಯುಡು-ಡು ಪ್ಲೆಸಿಸ್‌ ಪರಾಕ್ರಮ

ಮೊದಲು ಬ್ಯಾಟಿಂಗ್‌ ನಡೆಸಿದ ಮುಂಬೈ 9 ವಿಕೆಟಿಗೆ 162 ರನ್‌ ಮಾಡಿದರೆ, ಚೆನ್ನೈ 19.2 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿ ಗೆದ್ದು ಬಂದಿತು. ಆರಂಭಿಕರಾದ ಮುರಳಿ ವಿಜಯ್‌ (1) ಮತ್ತು ಶೇನ್‌ ವಾಟ್ಸನ್‌ (4) ಆರು ರನ್‌ ಆಗುವಷ್ಟರಲ್ಲಿ ನಿರ್ಗಮಿಸಿದ ಬಳಿಕ ಅಂಬಾಟಿ ರಾಯುಡು ಮತ್ತು ಫಾ ಡು ಪ್ಲೆಸಿಸ್‌ ಸೇರಿಕೊಂಡು ಮುಂಬೈ ಮೇಲೆ ಸವಾರಿ ಮಾಡಲಾರಂಭಿಸಿದರು. 3ನೇ ವಿಕೆಟಿಗೆ 115 ರನ್‌ ಪೇರಿಸಿ ಚೆನ್ನೈ ಆತಂಕವನ್ನು ದೂರ ಮಾಡಿದರು.

48 ಎಸೆತಗಳಿಂದ 71 ರನ್‌ (48 ಎಸೆತ, 6 ಬೌಂಡರಿ, 3 ಸಿಕ್ಸರ್‌) ಬಾರಿಸಿದ ರಾಯುಡು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರೆ, ಡು ಪ್ಲೆಸಿಸ್‌ 58 ರನ್‌ ಮಾಡಿ ಅಜೇಯರಾಗಿ ಉಳಿದರು (44 ಎಸೆತ, 6 ಬೌಂಡರಿ). ‘ರಾಯುಡು-ಡು ಪ್ಲೆಸಿಸ್‌ ಅಮೋಘ ಜತೆಯಾಟ ನಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಡು ಪ್ಲೆಸಿಸ್‌ ಅವರ ಅದ್ಭುತ ಕ್ಯಾಚ್‌ಗಳನ್ನು ಮರೆಯುವಂತಿಲ್ಲ’ ಎಂಬುದಾಗಿ ಧೋನಿ ಪ್ರಶಂಸಿಸಿದರು.

ಬ್ಯಾಟಿಂಗ್‌ ಕ್ಲಿಕ್‌ ಆಗಲಿಲ್ಲ: ರೋಹಿತ್‌
‘ನಮಗೆ ಬ್ಯಾಟಿಂಗ್‌ ವೈಫಲ್ಯ ಮುಳುವಾಗಿ ಪರಿಣಮಿಸಿತು. ಸ್ಕೋರ್‌ಬೋರ್ಡ್‌ನಲ್ಲಿ ಇನ್ನೂ ಹೆಚ್ಚಿನ ರನ್‌ ಅಗತ್ಯವಿತ್ತು. ಚೆನ್ನೈ ಪರ ರಾಯುಡು-ಡು ಪ್ಲೆಸಿಸ್‌ ಜೋಡಿ ನಿಂತು ಆಡಿದಂತೆ ನಮ್ಮಲ್ಲಿ ಯಾರಾದರೂ ಕ್ರೀಸ್‌ ಆಕ್ರಮಿಸಿಕೊಂಡಿದ್ದರೆ ಹೋರಾಟ ತೀವ್ರಗೊಳ್ಳುತ್ತಿತ್ತು. ಚೆನ್ನೈ ಬೌಲರ್‌ಗಳಿಗೆ ಎಲ್ಲ ಕ್ರೆಡಿಟ್‌ ಸಲ್ಲುತ್ತದೆ’ ಎಂಬುದು ಪರಾಜಿತ ಮುಂಬೈ ತಂಡದ ನಾಯಕ ರೋಹಿತ್‌ ಶರ್ಮ ಪ್ರತಿಕ್ರಿಯೆ.


ಎಕ್ಸ್‌ಟ್ರಾ ಇನ್ನಿಂಗ್ಸ್‌

– ಮುಂಬೈ ಸತತ 8 ಐಪಿಎಲ್‌ ಆವೃತ್ತಿಗಳಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸೋಲನುಭವಿಸಿತು. ಮುಂಬೈ ಕೊನೆಯ ಸಲ ಕೂಟದ ತನ್ನ ಮೊದಲ ಪಂದ್ಯವನ್ನು ಜಯಿಸಿದ್ದು 2012ರಲ್ಲಿ. ಅಂದು ಚೆನ್ನೈಯಲ್ಲಿ ಧೋನಿ ಪಡೆಯನ್ನು 8 ವಿಕೆಟ್‌ಗಳಿಂದ ಹಿಮ್ಮೆಟ್ಟಿಸಿತ್ತು.

– ಮುಂಬೈ ಯುಎಇಯಲ್ಲಿ ಆಡಿದ ಎಲ್ಲ 6 ಪಂದ್ಯಗಳಲ್ಲೂ ಸೋಲನ್ನೇ ಕಂಡಿತು. 2014ರ ಸಾಲಿನ ಸತತ 5 ಪಂದ್ಯಗಳಲ್ಲಿ ಮುಂಬೈ ಗೆಲುವು ಕಾಣಲು ವಿಫಲವಾಗಿತ್ತು.

– ಮಹೇಂದ್ರ ಸಿಂಗ್‌ ಧೋನಿ ಐಪಿಎಲ್‌ ನಾಯಕನಾಗಿ 100ನೇ ಗೆಲುವನ್ನು ದಾಖಲಿಸಿದರು. ಅವರು ಒಂದೇ ತಂಡದ ನಾಯಕನಾಗಿ ಈ ಸಾಧನೆಗೈದದ್ದು ವಿಶೇಷ.

– ಧೋನಿ 100 ಕ್ಯಾಚ್‌ಗಳನ್ನು ಪೂರ್ತಿಗೊಳಿಸಿದರು. ಅವರು ಕೀಪರ್‌ ಆಗಿ 96 ಹಾಗೂ ಫೀಲ್ಡರ್‌ ಆಗಿ 4 ಕ್ಯಾಚ್‌ ಪಡೆದಿದ್ದಾರೆ. ಕ್ಯಾಚ್‌ಗಳ ಶತಕ ಸಾಧನೆಯಲ್ಲಿ ಧೋನಿಗೆ 3ನೇ ಸ್ಥಾನ. ದಿನೇಶ್‌ ಕಾರ್ತಿಕ್‌ (109) ಮತ್ತು ಸುರೇಶ್‌ ರೈನಾ (102)ಮೊದಲೆರಡು ಸ್ಥಾನದಲ್ಲಿದ್ದಾರೆ.

– ಧೋನಿ ಟಿ20 ಇತಿಹಾಸದಲ್ಲಿ 250 ವಿಕೆಟ್‌ ಪತನಕ್ಕೆ ಕಾರಣರಾದ ವಿಶ್ವದ ಮೊದಲ ಕೀಪರ್‌ ಎನಿಸಿದರು. ಇದರಲ್ಲಿ 167 ಕ್ಯಾಚ್‌, 83 ಸ್ಟಂಪಿಂಗ್‌ ಸೇರಿದೆ.

– ಮುಂಬೈ ವಿರುದ್ಧ ಸತತ 5 ಪಂದ್ಯಗಳ ಸೋಲಿನ ಸರಪಣಿಯನ್ನು ಚೆನ್ನೈ ಕಡಿದುಕೊಂಡಿತು. ಅದು ಮುಂಬೈ ವಿರುದ್ಧ ಕೊನೆಯ ಗೆಲುವು ದಾಖಲಿಸಿದ್ದು 2018ರ ಕೂಟದ ಆರಂಭಿಕ ಪಂದ್ಯದಲ್ಲಿ.

– ಕೈರನ್‌ ಪೊಲಾರ್ಡ್‌ 2018ರ ಬಳಿಕ ಚೆನ್ನೈ ಎದುರಿನ ಪಂದ್ಯದಲ್ಲಿ ಮೊದಲ ಸಲ ಔಟ್‌ ಆದರು. ಈ ಅವಧಿಯ 4 ಇನ್ನಿಂಗ್ಸ್‌ಗಳಲ್ಲಿ ಅವರು 89 ರನ್‌ ಬಾರಿಸಿದ್ದಾರೆ (58 ಎಸೆತ, 6 ಸಿಕ್ಸರ್‌, 6 ಫೋರ್‌).

– ರೋಹಿತ್‌ ಶರ್ಮ ಐಪಿಎಲ್‌ ಸೀಸನ್‌ನ ಪ್ರಥಮ ಎಸೆತವನ್ನೇ ಬೌಂಡರಿಗೆ ಅಟ್ಟಿದ ಮೊದಲ ಕ್ರಿಕೆಟಿಗ.

– ದೀಪಕ್‌ ಚಹರ್‌ ಸತತ 3 ಐಪಿಎಲ್‌ ಸೀಸನ್‌ಗಳಲ್ಲಿ ಮೊದಲ ಓವರ್‌ ಎಸೆದ ಬೌಲರ್‌ ಎನಿಸಿದರು.

– ಈ ಪಂದ್ಯದಲ್ಲಿ ಎರಡೂ ತಂಡಗಳು ಕೇವಲ 5 ಬೌಲರ್‌ಗಳನ್ನು ದಾಳಿಗಿಳಿಸಿದವು. ಪ್ರತಿಯೊಬ್ಬರೂ ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾದರು. ಇದು ಐಪಿಎಲ್‌ ಇತಿಹಾಸದ ಮೊದಲ ನಿದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next