ಮಣಿಪಾಲ: ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯ, ಜಿಲ್ಲಾ ಆಮೆಚೂರ್ ಆ್ಯತ್ಲೆಟಿಕ್ ಅಸೋಸಿ ಯೇಶನ್, ಬೆಂಗಳೂರಿನ ಎನ್‌ಇಬಿ ನ್ಪೋರ್ಟ್ಸ್, ರೋಟರಿ ಕ್ಲಬ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಸಹಭಾಗಿತ್ವ ದಲ್ಲಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ನ ಬಗ್ಗೆ ಅರಿವು ಮೂಡಿಸಲು ರವಿವಾರ ಮಣಿಪಾಲ ಮ್ಯಾರಥಾನ್ ನಡೆಯಿತು.
ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, ವಿವಿಧ ಜಾಗೃತಿ ಓಟ, ಶಾಲಾ ಕಾಲೇಜು ವಿದ್ಯಾರ್ಥಿಗಳ ಓಟ, ದಿವ್ಯಾಂಗರ ವಿಶೇಷ ಓಟ ಈ ಮ್ಯಾರಥಾನ್‌ನ ಪ್ರಮುಖ ಆಕರ್ಷಣೆಯಾಗಿತ್ತು.
ರವಿವಾರ ಸೂರ್ಯೋದಯಕ್ಕೂ ಪೂರ್ವದಲ್ಲೇ ಮಾಹೆ ವಿ.ವಿ. ಆವರಣದ ಗ್ರೀನ್ಸ್, ಫುಡ್‌ಕೋರ್ಟ್, ಆಡಳಿತ ಕಚೇರಿಯ ಮುಖ್ಯದ್ವಾರದಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳಲು ಸಾವಿರಾರು ಉತ್ಸಾಹಿಗಳು ಸೇರಿದ್ದರು. ಆರಂಭದಲ್ಲಿ ಫುಲ್ ಮ್ಯಾರಥಾನ್, ಅನಂತರ ಹಾಫ್ ಮ್ಯಾರಥಾನ್, ಕ್ರಮವಾಗಿ ವಿವಿಧ ಓಟಗಳಿಗೆ ಚಾಲನೆ ನೀಡಲಾಯಿತು. ಸಿಂಡಿಕೇಟ್ ವೃತ್ತ, ಕಾಯಿನ್ ವೃತ್ತ, ಪೆರಂಪಳ್ಳಿ ಚರ್ಚ್, ಅಂಬಾಗಿಲು, ಕಲ್ಸಂಕ ವೃತ್ತ, ಎಂಜಿಎಂ ಕಾಲೇಜಿನ ವರೆಗೂ ಬಂದು ವಾಪಸ್ ಅದೇ ಮಾರ್ಗದಲ್ಲಿ ಫುಡ್ ಕೋರ್ಟ್ ತಲುಪಿತು. ಮ್ಯಾರಥಾನ್ ಮಾರ್ಗದ ಎರಡು ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರು ಹಾಗೂ ಸಾರ್ವಜನಿಕರು ನಿಂತು ಸ್ವರ್ಧಿಗಳನ್ನು ಪ್ರೋತ್ಸಾಹಿಸಿದರು. ಗ್ರೀನ್ಸ್‌ನಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮವು ನಡೆಯಿತು.
ಮ್ಯಾರಥಾನ್ ವಿಜೇತರು
42 ಕಿ.ಮೀ. ದೂರದ ಫುಲ್ ಮ್ಯಾರಥಾನ್‌ನ ಪುರುಷರ ವಿಭಾಗ ದಲ್ಲಿ ನಂಜುಂಡಪ್ಪ ಯಲ್ಲಪ್ಪ ಹಾಗೂ ಮಹಿಳೆಯರ ವಿಭಾಗದಲ್ಲಿ ಬಿಜೋಯ್ ಬರ್ಮನ್ ತಲಾ 50 ಸಾವಿರ ರೂ. ನಗದು ಬಹುಮಾನ ದೊಂದಿಗೆ ಪ್ರಥಮ ಪ್ರಶಸ್ತಿ ಪಡೆದು ಕೊಂಡರು. ಪುರುಷರ ವಿಭಾಗದಲ್ಲಿ ಇಸಾಕ್ ಕೆಂಬೊç ಕೊಮೊನ್ ದ್ವಿತೀಯ ಹಾಗೂ ಸಚಿನ್ ಪೂಜಾರಿ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಸುಸನ್ ಚೆಬೆಟ್ ದ್ವಿತೀಯ ಹಾಗೂ ದೀಪಿಕಾ ಪ್ರಕಾಶ್ ತೃತೀಯ ಸ್ಥಾನ ಪಡೆದಿದ್ದು 30 ಸಾವಿರ ರೂ. ಹಾಗೂ 20 ಸಾವಿರ ರೂ. ನಗದು ಬಹುಮಾನ ವಿತರಿಸಲಾಯಿತು.
21 ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಶಿವಮ್ ಯಾದವ್ ಪ್ರಥಮ, ಪರಸಪ್ಪ ಹಲಿಜೊಲ್ ದ್ವಿತೀಯ, ಸಾಹಿಲ್ ಅನ್ನಿಗೇರಿ ತೃತೀಯ ಮತ್ತು ಮಹಿಳೆಯರ ವಿಭಾಗದಲ್ಲಿ ಅರ್ಚನಾ ಕೆ.ಎಂ. ಪ್ರಥಮ, ಪ್ರೀಮು ಯಾದವ್ ದ್ವಿತೀಯ ಹಾಗೂ ಧನುಷಾ ಶೆಟ್ಟಿ ತೃತೀಯ ಬಹುಮಾನ ಗಳಿಸಿದರು.
Related Articles
ಮಣಿಪಾಲ ಗ್ರೀನ್‌ನಲ್ಲಿ ನಡೆದ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಶಾಸಕ ಕೆ.ರಘುಪತಿ ಭಟ್, ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಎಂಎಚ್‌ಇಪಿಎಲ್ ಚೇರ್ಮನ್ ಡಾ| ಸುದರ್ಶನ್ ಬಲ್ಲಾಳ್ ಬಹುಮಾನ ವಿತರಿಸಿದರು.
ಮಾಹೆಯ ಆಡಳಿತ ಕಚೇರಿ ಮುಂಭಾಗ ಮ್ಯಾರಥಾನ್‌ಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕೂರ್ಮಾರಾವ್, ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೇ, ಶಾಸಕ ಕೆ.ರಘುಪತಿ ಭಟ್, ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಎಂಎಚ್‌ಇಪಿಎಲ್ ಚೇರ್ಮನ್ ಡಾ| ಸುದರ್ಶನ್ ಬಲ್ಲಾಳ್, ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಮಾಜಿ ಸಚಿವ ಅಭಯಚಂದ್ರ ಜೈನ್, ಐಸಿಐಸಿಐ ಬ್ಯಾಂಕಿನ ಅತುಲ್ ಜೈನ್, ಮಾಹೆ ವಿ.ವಿ. ಉನ್ನತ ಅಧಿಕಾರಿಗಳಾದ ಡಾ| ಶರತ್ ರಾವ್, ಡಾ| ದಿಲೀಪ್ ನಾಯಕ್, ಡಾ| ಅವಿನಾಶ್ ಶೆಟ್ಟಿ, ಆನಂದ ಎನ್.ಗೋಪಾಲ್, ಡಾ| ಪದ್ಮರಾಜ್ ಹೆಗ್ಡೆ, ಡಾ| ಉನ್ನಿಕೃಷ್ಣನ್, ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ| ಕೆಂಪರಾಜ್ ಎಚ್.ಬಿ., ಕಾರ್ಯದರ್ಶಿ ದಿನೇಶ್ ಕುಮಾರ್, ಮಾಹೆ ಕ್ರೀಡಾ ಕೌನ್ಸಿಲ್‌ನ ಕ್ರೀಡಾ ಕಾರ್ಯದರ್ಶಿ ಡಾ| ವಿನೋದ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.