Advertisement

ಪಂಪ್‌ವೆಲ್‌ನಲ್ಲಿ ಕಂಗೊಳಿಸಲಿದೆ ‘ಮಹಾವೀರ ಕಲಶ’

03:30 PM Oct 19, 2022 | Team Udayavani |

ಪಂಪ್‌ವೆಲ್‌: ಮಂಗಳೂರಿನ ಪ್ರವೇಶಕ್ಕೆ ಸ್ವಾಗತ ಸ್ವರೂಪದಲ್ಲಿದ್ದ ಪಂಪ್‌ವೆಲ್‌ನ ಕಲಶ ಮರುನಿರ್ಮಾಣ ಯೋಜನೆಗೆ ಇದೀಗ ಚಾಲನೆ ದೊರಕಿದೆ.

Advertisement

ಮಹಾವೀರ ವೃತ್ತದಲ್ಲಿದ್ದ ಪವಿತ್ರ ಕಲಶವನ್ನು ಪಂಪ್‌ ವೆಲ್‌ ಮೇಲ್ಸೇತುವೆ ಪಕ್ಕದಲ್ಲಿ ಮರುಸ್ಥಾಪನೆ ಮಾಡಲಾಗುತ್ತದೆ. ಪಡೀಲ್‌ನಿಂದ ಪಂಪ್‌ವೆಲ್‌ ಸಂಧಿಸುವ ರಸ್ತೆಯ ಬಲಭಾಗದಲ್ಲಿ (ನಿಟ್ಟೆ ಡೇ ಕೇರ್‌ ಸೆಂಟರ್‌ ಮುಂಭಾಗ) ಕಲಶ ಮರುಸ್ಥಾಪಿಸಲಾಗುತ್ತದೆ. ಇಲ್ಲಿರುವ ಪ್ರತ್ಯೇಕ ಸ್ಥಳದಲ್ಲಿ ಕಲಶ ಸ್ಥಾಪಿಸಲಾಗುತ್ತದೆ.

ಪಂಪ್‌ವೆಲ್‌ ಫ್ಲೈಓವರ್‌ ನಿರ್ಮಾಣ ಸಂದರ್ಭ ಕಲಶವನ್ನು ತೆಗೆದು ಕಂಕನಾಡಿ ಕಡೆಗೆ ತಿರುವಿನ ಭಾಗದಲ್ಲಿ (ಇಂದಿರಾ ಕ್ಯಾಂಟೀನ್‌ ಸಮೀಪ) ತಾತ್ಕಾಲಿಕವಾಗಿ ಇಡಲಾಗಿದೆ. ಇದೇ ಕಲಶವನ್ನು ಸುಂದರಗೊಳಿಸಿ ಹಾಗೂ ಅಭಿವೃದ್ಧಿಗೊಳಿಸಿ ಹೊಸ ಜಾಗದಲ್ಲಿ ಇಡಲಾಗುತ್ತದೆ. ಕ್ರೇನ್‌ ಸಹಾಯದಿಂದ ಕಲಶವನ್ನು ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಭಗವಾನ್‌ ಶ್ರೀ ಮಹಾವೀರ ಸ್ವಾಮಿಯ 2600ನೇ ಜನ್ಮ ಕಲ್ಯಾಣೋತ್ಸವವನ್ನು ರಾಷ್ಟ್ರದಾದ್ಯಂತ 2001ರಿಂದ 2002ರವರೆಗೆ ಆಚರಿಸಲಾಗಿತ್ತು. ಅದರಂತೆ ಮಂಗಳೂರು ಮಹಾನಗರ ಪಾಲಿಕೆಯು “ಮಹಾವೀರ ವೃತ್ತ’ ಎಂದು ನಾಮಕರಣ ನಡೆಸಿತ್ತು. ಬಳಿಕ ಜೈನ್‌ ಸೊಸೈಟಿ ಹಾಗೂ ಜೈನ ಸಮಾಜ ಸೇರಿಕೊಂಡು 43 ಸೆಂಟ್ಸ್‌ ಜಾಗದಲ್ಲಿ ಸುಮಾರು 12 ಲಕ್ಷ ರೂ. ವೆಚ್ಚದಲ್ಲಿ ಸುಂದರ ಮಹಾವೀರ ವೃತ್ತ ಹಾಗೂ 20 ಟನ್‌ ತೂಕದ ಮಂಗಲ ಕಲಶವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ವೇಳೆ ಈ ಕಲಶವನ್ನು ತೆರವುಗೊಳಿಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇದನ್ನು ಇಡಲಾಗಿದೆ.

ಪಂಪ್‌ವೆಲ್‌ನಲ್ಲಿ ಶಿವಾಜಿ ಪ್ರತಿಮೆ

Advertisement

ಕಲಶ ಮರುಸ್ಥಾಪನೆ ಆದ ಬಳಿಕ ಇಂದಿರಾ ಕ್ಯಾಂಟೀನ್‌ ಸಮೀಪದಲ್ಲಿಯೇ ಶಿವಾಜಿಯ ಬೃಹತ್‌ ಪ್ರತಿಮೆ ಹಾಗೂ ಕೋಟೆಯ ಸ್ವರೂಪವನ್ನು ನಿರ್ಮಿಸಲಾಗುವುದು. ಮಂಗಳೂರಿಗೆ ಆಗಮಿಸುವವರಿಗೆ ಸ್ವಾಗತ ಬಯಸುವ ನೆಲೆಯಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ. ಮುಂದಿನ ದಿನದಲ್ಲಿ ಈ ಕುರಿತ ಕಾರ್ಯಗಳು ಸಾಕಾರವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ.

ಮಹಾವೀರ ಮೇಲ್ಸೇತುವೆ: ಪಂಪ್‌ವೆಲ್‌ನಲ್ಲಿ ಕಲಶ ಮರುಸ್ಥಾಪನೆಗೆ ಈಗಾಗಲೇ ಚಾಲನೆ ದೊರೆತಿದೆ. ಫ್ಲೈಓವರ್‌ಗೆ ಮಹಾವೀರ ಮೇಲ್ಸೇತುವೆ ಎಂಬ ನಾಮಕರಣ ಮಾಡಿರುವುದು ಸಂತಸ ತಂದಿದೆ. ಶೀಘ್ರದಲ್ಲಿ ಕಲಶ ಸ್ಥಳಾಂತರ ಮಾಡಿ ಅಭಿವೃದ್ಧಿಪಡಿಸುವ ಕಾಮಗಾರಿ ಆರಂಭಿಸಲಾಗುವುದು. ಮಂಗಳೂರಿಗೆ ಆಗಮಿಸುವವರಿಗೆ ಮುಕುಟಪ್ರಾಯದಂತೆ ಕಲಶ ಸ್ಥಾಪನೆಯಾಗಲಿದೆ. – ಪುಷ್ಪರಾಜ್‌ ಜೈನ್‌, ವಲಯಾಧ್ಯಕ್ಷರು, ಭಾರತೀಯ ಜೈನ್‌ ಮಿಲನ್‌

Advertisement

Udayavani is now on Telegram. Click here to join our channel and stay updated with the latest news.

Next