Advertisement

ಮಹಾತ್ಮರ ವಿಚಾರಗಳ ಅಧ್ಯಯನವಾಗಲಿ

04:25 PM Apr 17, 2017 | Team Udayavani |

ಕಲಬುರಗಿ: ಯುವ ಜನಾಂಗ ಮೊಬೈಲ್‌, ಟಿ.ವಿ.  ನೋಡುವುದರಲ್ಲೇ ಹೆಚ್ಚು ಕಾಲ ಕಳೆಯದೆ ಜಗತ್ತಿಗೆ ಬೆಳಕು ನೀಡಿದ ಬುದ್ಧ, ಬಸವ, ಅಂಬೇಡ್ಕರ್‌ ವಿಚಾರಗಳನ್ನು ಓದಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ.ವೆಂಕಟೇಶ ಹೇಳಿದರು. 

Advertisement

ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯು ವಿಶ್ವಗುರು ಬಸವಣ್ಣ ಮತ್ತು ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್‌ ಜಯಂತಿ ನಿಮಿತ್ತವಾಗಿ ನಗರದ ಶ್ರೀ ಗುರುಪಾದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಚಾರ ಕ್ರಾಂತಿಗೆ ಆಹ್ವಾನ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಬುದ್ಧ, ಬಸವ, ಅಂಬೇಡ್ಕರ್‌ ಕೇವಲ ಭಾರತಕ್ಕೆ ಸೇರಿದವರಲ್ಲ, ವಿಶ್ವ ಮಾನವರು. ಜಗತ್ತಿನ ಎಲ್ಲರ ವಿಚಾರಗಳನ್ನು ಓದಿ ಅರ್ಥೈಸಿಕೊಳ್ಳುವುದರ ಮೂಲಕ ಸಮಕಾಲೀನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು. ಸಂವಿಧಾನ ರಚನೆ ನಂತರ ಭಾರತದಲ್ಲಿ ಬಹಳಷ್ಟು ಬದಲಾವಣೆಯಾಗಿದೆ.

ಅಂಬೇಡ್ಕರ್‌ರ 126ನೇ ಜಯಂತಿ ಸಂದರ್ಭದಲ್ಲಿ ಅಂಬೇಡ್ಕರ್‌ ಅವರ ವಿಚಾರಗಳು ನಮ್ಮ ಕಾಲಕ್ಕೆ ಹೇಗೆ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ಚಿಂತನೆ ನಡೆಸಬೇಕಾಗಿದೆ. ಭಾರತದ ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರು ಕೊನೆಗಾಲದಲ್ಲಿ ರಚಿಸಿದ ಬುದ್ಧ ಮತ್ತು ಆತನ ಧಮ್ಮ ಕೃತಿ ಅತ್ಯಂತ ಮಹತ್ವದ್ದಾಗಿದೆ.

ಈ ಕೃತಿ ಓದುವುದರ ಮೂಲಕ ಸಂವಿಧಾನಶಿಲ್ಪಿ ಅಂಬೇಡ್ಕರ್‌ ಅವರನ್ನು ಅರ್ಥಮಾಡಿಕೊಳ್ಳಬೇಕಿದೆ. ಬುದ್ಧನೇ ತಾನಾಗುವ ಪರಿ ಅಂಬೇಡ್ಕರ್‌ ಅವರಿಂದ ಮಾತ್ರ ಸಾಧ್ಯ ಎಂಬುವುದನ್ನು ಈ ಕೃತಿ ಓದಿದವರಿಗೆ ಅರ್ಥವಾಗುತ್ತದೆ ಎಂದರು. ಅಂಬೇಡ್ಕರ್‌ ಓದಿದಷ್ಟು ಕೃತಿಗಳನ್ನು ಭಾರತದಲ್ಲಿ ಇದುವರೆಗೆ ಯಾರೂ ಓದಿಲ್ಲ.

Advertisement

ವಿಶ್ವದ ಎಲ್ಲ ದೇಶಗಳ ಸಂವಿಧಾನವನ್ನು ಅವರು ಅರಿತಿದ್ದರು. ಅಂಬೇಡ್ಕರ್‌ ಅವರಂತಹ ಇನ್ನೊಬ್ಬ ಸಂವಿಧಾನ ತಜ್ಞರು ಭಾರತದಲ್ಲಿ ಮತ್ತೆ ಹುಟ್ಟಲಿಲ್ಲ ಎಂದರು. ವ್ಯಕ್ತಿಗೆ ಒಳಗಿನ ಮತ್ತು ಹೊರಗಿನ ಎಚ್ಚರ ಮುಖ್ಯ. ಆ ಎಚ್ಚರ ಬುದ್ಧ, ಬಸವ, ಅಂಬೇಡ್ಕರ್‌ ಅವರಿಗಿತ್ತು. ಆದ್ದರಿಂದಲೇ ಅವರು ಜಗತ್ತನ್ನು ಎಚ್ಚರಿಸುವ ಕಾರ್ಯ ಮಾಡಿದರು ಎಂದರು. 

ಸರ್ವೋದಯ ಚಿಂತನೆಯಲ್ಲಿ ಭಾರತ ಬೆಳಗಿದ ಬಾಬಾಸಾಹೇಬ ಎಂಬ ವಿಷಯದ ಕುರಿತು ಮಾತನಾಡಿದ ಡಾ| ಅಂಬೇಡ್ಕರ್‌ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಐ.ಎಸ್‌.ವಿದ್ಯಾಸಾಗರ, ಬಾಬಾಸಾಹೇಬರು ತಮ್ಮನ್ನೇ ಸುಟ್ಟುಕೊಂಡು ಭಾರತ ಬೆಳಗಿದ ಜ್ಯೋತಿಯಾಗಿದ್ದಾರೆ ಎಂದರು. 

ಶ್ರೀ ಗುರುಪಾದೇಶ್ವರ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಪ್ರೊ| ಎಂ.ಬಿ.ಅಂಬಲಗಿ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷೆ ಜಯಶ್ರೀ ಬಸವರಾಜ ಮತ್ತಿಮೂಡ, ಜಿಪಂ ಮಾಜಿ ಅಧ್ಯಕ್ಷ ಭೀಮರಾವ ಟಿ.ಟಿ.,

ಅಕಾಡೆಮಿ ಗೌರವಾಧ್ಯಕ್ಷ ಎಸ್‌.ಎಂ. ಪಟ್ಟಣಕರ್‌, ಕಾರ್ಯಾಧ್ಯಕ್ಷ ಶಿವರಾಜ ಅಂಡಗಿ, ಪ್ರಧಾನ ಕಾರ್ಯದರ್ಶಿ ಕೆ.ಗಿರಿಮಲ್ಲ ಮಾತನಾಡಿದರು. ನಾಗೇಂದ್ರಪ್ಪ ಮಾಡ್ಯಾಳೆ ಪ್ರಾರ್ಥನಾ ಗೀತೆ ಹಾಡಿದರು. ವಿ.ಎಂ. ಪತ್ತಾರ, ಪರಮೇಶ್ವರ ಶಟಕಾರ, ಶಿವಾನಂದ ಮಠಪತಿ, ಪ್ರಸನ್ನ ವಾಂಜರಖೇಡೆ, ನೀಲಾಂಬಿಕಾ ಚೌಕಿಮಠ, ಗುರುಪ್ರಸಾದ ಅಂಬಲಗಿ ಹಾಗೂ ಇತರರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next