Advertisement

“ಮಹಾತ್ಮರ ಚರಿತಾಮೃತ’ಗ್ರಂಥ ಲೋಕಾರ್ಪಣೆ

05:53 PM Nov 08, 2021 | Team Udayavani |

ಧಾರವಾಡ: ಮಹಾತ್ಮರ ಚರಿತಾಮೃತ ಗ್ರಂಥದ ರಚನೆಗಾಗಿ ಮಾಡಿದ ಅಧ್ಯಯನ ವ್ಯಾಪ್ತಿ ದೊಡ್ಡದಾಗಿದ್ದು, ಈ ಗ್ರಂಥವು ಸಾರ್ಥಕತೆಯ ಬದುಕಿಗೆ ದಾರಿದೀಪವಾಗಿದೆ ಎಂದು ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಹೇಳಿದರು. ಧಾರವಾಡ ನಾಗರಿಕ ವೇದಿಕೆ ವತಿಯಿಂದ
ಕವಿಸಂನಲ್ಲಿ ರವಿವಾರ ಹಮ್ಮಿಕೊಂಡಿದ್ದ ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

Advertisement

ಚಿಂತನೆ ಜತೆಗೆ ಕ್ರಿಯಾಶೀಲತೆ ಮುಖ್ಯವಾಗಿದ್ದು, ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಕ್ರಿಯಾಶೀಲತೆ ಬೇಕು. ಪ್ರತಿಯೊಬ್ಬ ಮನುಷ್ಯನಲ್ಲಿ ಒಳಧ್ವನಿ ಇರುತ್ತದೆ. ಯಾರು ಒಳಧ್ವನಿಗೆ ಕಿವಿಗೊಡುತ್ತಾರೆ ಅವರು ಜೀವನದ ಅರ್ಥ ಪಡೆಯುತ್ತಾರೆ. ಅಂತಹ ಕೆಲಸವನ್ನು ಅಥಣಿ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ “ಮಹಾತ್ಮರ ಚರಿತಾಮೃತ’ ಗ್ರಂಥ ರಚಿಸುವ ಮೂಲಕ ಮಾಡಿದ್ದಾರೆ. ಈ ಗ್ರಂಥ ರಚನೆಯಲ್ಲಿ ಸ್ವಾಮೀಜಿ ಅವರು ಮಾಡಿದ ಅಧ್ಯಯನ ವ್ಯಾಪ್ತಿ ದೊಡ್ಡದು. ಮಹಾತ್ಮರ ಚರಿತ್ರೆಯನ್ನು ನಮ್ಮ ಮುಂದೆ ಇಟ್ಟು ಸಾಮಾನ್ಯರೂ ಮಹಾತ್ಮರಾಗಬಹುದು ಎಂಬುದನ್ನು ಶ್ರೀಗಳು ಗ್ರಂಥದಲ್ಲಿ ಹೇಳಿದ್ದಾರೆ. ದೇಶದ ಬೇರೆ ಭಾಷೆಗಳಲ್ಲಿ ಇಂತಹ ಗ್ರಂಥ ಎಲ್ಲಿಯೂ ಇಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ಡಂಬಳ ಗದಗ ತೋಂಟದಾರ್ಯ ಮಠದ ಡಾ| ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಜೀವಪರ ಕಾಳಜಿಯುಳ್ಳ ವ್ಯಕ್ತಿಗಳನ್ನು ಈ ಗ್ರಂಥದಲ್ಲಿ ತಿಳಿಸಿದ್ದಾರೆ. ಕೃತಿ ಓದಿದಾಗ ಉತ್ತಮ ಪ್ರೇರಣೆ ದೊರೆಯುತ್ತದೆ. ನಮ್ಮ ಬದುಕನ್ನು ಸಾರ್ಥಕಗೊಳಿಸಲು ಈ ಕೃತಿ ಓದಬೇಕು ಎಂದರು.

ಗ್ರಂಥ ಪರಿಚಯಿಸಿದ ಸಾಹಿತಿ ಡಾ| ವೀರಣ್ಣ ರಾಜೂರ, ಅರಿವಿಗೆ ಯಾವುದೇ ಜಾತಿ ಇಲ್ಲ ಎಂಬುದನ್ನು ನಾವು ಈ ಗ್ರಂಥದಲ್ಲಿ ಕಾಣಬಹುದು. ಯಾವುದೇ ಕಲ್ಪಕತೆ, ವೈಭವೀಕರಣ ಇಲ್ಲದ ನಿರ್ಲಿಪ್ತ ಭಾವವನ್ನು ಈ ಗ್ರಂಥ ಒಳಗೊಂಡಿದೆ. 216 ಮಹಾತ್ಮರಲ್ಲಿ 9 ಮಹಿಳೆಯರು, 107 ಮಹಾಪುರುಷರ ವಿಷಯಗಳು ಇಲ್ಲಿ ಅಡಕವಾಗಿವೆ. ಹೆಚ್ಚಾಗಿ ಈ ಕೃತಿ ಶಿವಯೋಗಿಗಳ ವಿಷಯವನ್ನೊಳಗೊಂಡಿದೆ. ಶರಣ ಸಾಹಿತ್ಯವನ್ನು ಬಹು ಅಧ್ಯಯನ ಮಾಡಿ ರೂಪುಗೊಂಡ ಅಮೂಲ್ಯವಾದ ಹೊತ್ತಿಗೆ ಇದಾಗಿದೆ ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಪ್ರಭುಚನ್ನಬಸವ ಸ್ವಾಮೀಜಿ ಅವರ ಕಾರ್ಯ ಶ್ಲಾಘನೀಯ ಎಂದರು. ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಮಹಾತ್ಮರ ಚರಿತಾಮೃತ ದಾಸೋಹಿಗಳಾದ ಚಂದ್ರಕಾಂತ ಬೆಲ್ಲದ, ಬಿ.ಎಲ್‌. ಪಾಟೀಲ, ಶಂಕರ ಕೋಳಿವಾಡ ಅವರನ್ನು ಸನ್ಮಾನಿಸಲಾಯಿತು. ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ, ಪ್ರಕಾಶ ಉಡಿಕೇರಿ, ಶಂಕರ ಕುಂಬಿ, ಶಂಕರ ಹಲಗತ್ತಿ, ಶಿವಣ್ಣ ಬೆಲ್ಲದ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ಸದಾನಂದ ಶಿವಳ್ಳಿ, ನಿಂಗಣ್ಣ ಕುಂಟಿ ಇದ್ದರು. ಇದಕ್ಕೂ ಮುನ್ನ ಕಡಪಾ ಮೈದಾನದಿಂದ ಕವಿಸಂವರೆಗೆ “ಮಹಾತ್ಮರ ಚರಿತಾಮೃತ’ ಗ್ರಂಥದ ಪಲ್ಲಕ್ಕಿ ಉತ್ಸವ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next